ಕಾಖಂಡಕಿ ಶ್ರೀ ಮಹಿಪತಿರಾಯರು
ಕಂಡೆ ನಾನೊಂದು ಕೌತುಕವ p
ಆಯಿ ಅಜ್ಜನ ನುಂಗಿದ ಕಂಡೆ ನಾಯಿ ಲಜ್ಜೆಯ ಹಿಡಿದುದ ಕಂಡೆ ಕಾಯಿ ಹೆಜ್ಜೆಯನಿಕ್ಕುತ ಜಗದೊಳು ರಾಜ್ಯ ಪ್ರದಕ್ಷÀಣೆ ಮಾಡುದು ಕಂಡೆ 1
ಇರುವೆ ವಿಷ್ಣುನ ನುಂಗಿದ ಕಂಡೆ ನರಿಯು ರಾಜ್ಯನಾಳುದ ಕಂಡೆ ಅರಿಯು ಮರಿಯ ನುಂಗಿದ ಕಂಡೆ ಕುರಿಯಿಂದ ಪರಲೋಕಯೆಯ್ದಿದು ಕಂಡೆ 2
ಇಲಿಯು ಯುಕ್ತಿಯದೋರುದು ಕಂಡೆ ಹುಲಿಯು ಭಕ್ತಿಯು ಮಾಡುದು ಕಂಡೆ ಇಳೆಯೊಳು ಮಹಿಪತಿ ಕಳೆವರದೊಳಿನ್ನು ಮುಕ್ತಿ ಸಾಧನದೊಂದು ಬೆಡಗವು ಕಂಡೆ 3
***
"ಕಂಡೆ ನಾನೊಂದು ಕೌತುಕವ"
ಹರೇ ಶ್ರೀನಿವಾಸ,
ಶ್ರೀ ಸತ್ಯಬೋಧ ಗುರುರಾಜೋ ವಿಜಯತೇ
ನಾನು ಡಾಕ್ಟರ್ ವೃಂದಾ ಸಂಗಮ್
ಇವತ್ತ ನಾನು ನಿಮ್ಮೊಂದಿಗೆ ಮಹಿಪತಿದಾಸರ ಒಂದು ಮುಂಡಿಗೆಯ ಯಥಾಮತಿ ಅರ್ಥ ತಿಳಿಯಲಿಕ್ಕೆ ಪ್ರಯತ್ನ ಮಾಡತೇನಿ.
ಕನ್ನಡ ಹರಿದಾಸ ಸಾಹಿತ್ಯ ಪಂಥದೊಳಗ, ಕಾಖಂಡಕಿಯ ಮಹಿಪತಿದಾಸರು ತಮ್ಮ ವಿಶಿಷ್ಟವಾದ ಕಿರ್ತನೆಗಳಿಂದ ಜನ ಸಾಮಾನ್ಯರಲ್ಲಿ ಭಕ್ತಿ ಜಾಗೃತಿಯನ್ನು ಮಾಡಿದರು. ಇವರು ವಿಜಯಪುರದ ಆದಿಲ್ ಶಾಹಿ ಆಸ್ಥಾನದಲ್ಲಿ ಕೋಶಾಧಿಕಾರಿಗಳಾಗಿದ್ದವರು. ಇವರ ಕಾಲ 1611 – 1681. ಇವರ ಗುರುಗಳು ಸಾರವಾಡದ ಭಾಸ್ಕರ ಸ್ವಾಮಿಗಳು. ಮೂಲತಃ ಬಾಗಲಕೋಟೆಯವರು. ಈ ಮನೆತನದ ಹಿರಿಯರಾದ ರಂಗಭಟ್ಟರು. ಈ ರಂಗಭಟ್ಟರಿಗೆ ಕೋನೇರಿರಾಯ ಎಂಬ ಮಗನಿದ್ದರು, ಕೋನೇರಿರಾಯರಿಗೆ ಗುರುರಾಯ ಹಾಗೂ ಮಹಿಪತಿರಾಯ ಎಂಬ ಇಬ್ಬರು ಗಂಡು ಮಕ್ಕಳಿದ್ದರು.
ಕನ್ನಡ ಸಾರಸ್ವತ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅನನ್ಯ. ಶಾಸ್ತ್ರ ವಿಚಾರಗಳನ್ನು ಸರಳವಾಗಿ ಪದ್ಯಗಳ ಮೂಲಕ ಜನಸಾಮಾನ್ಯರಿಗೆ ತಲುಪಿಸಿದ ಕೀರ್ತಿ ಹರಿದಾಸರಿಗೆ ಸಲ್ಲಬೇಕು. ಪುರಂದರದಾಸರು ಮತ್ತು ಕನಕದಾಸರ ನಂತರದ ಅವಧಿಯಲ್ಲಿ ವಿಜಯದಾಸರ ಕಾಲ ಪ್ರಾರಂಭವಾಗುವ ಮುನ್ನ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಕಾಖಂಡಕಿಯ ಗ್ರಾಮದಲ್ಲಿ ವಾಸವಿದ್ದ ಮಹಿಪತಿದಾಸರು ಮತ್ತು ಅವರ ವಂಶಜರಿಂದ ದಾಸಸಾಹಿತ್ಯ ಸಮೃದ್ಧವಾಗಿ ಬೆಳೆಯಿತು. ವೈದಿಕ ವೃತ್ತಿಯಲ್ಲಿದ್ದು ರಾಜ್ಯವಾಳುವ ಬಾದಶಹನ ಆತ್ಮೀಯ ಅಧಿಕಾರಿಯಾದರು. ಆತ್ಮೋದ್ಧಾರದ ಮಾರ್ಗ ಕಂಡುಕೊಳ್ಳಲು ಸಂತೋಷದಿಂದ ಅಧಿಕಾರ-ಅಂತಸ್ತುಗಳನ್ನು ತ್ಯಜಿಸಿದರು. ನೂರಾರು ಮಂದಿಗೆ ಸಾರ್ಥಕ ಜೀವನ ನಡೆಸಲು ಮಾರ್ಗದರ್ಶನ ಮಾಡಿದರು.
‘ಸರ್ವೋತ್ತಮನ ಸ್ತುತಿಸಲಿಕ್ಕೆ ಸರಿಬೆಸದಕ್ಷರದೆಣಿಕ್ಯಾಕೆ, ಯತಿ ಛಲ ಗಣ ಪ್ರಾಸವ್ಯಾಕೆ’ ಎಂದು ಕಾಖಂಡಕಿ ಮಹಿಪತಿ ದಾಸರು ಕೇಳಿದ್ದಾರೆ. ಇವರು ಒಟ್ಟು 14 ಅಂಕಿತಗಳಲ್ಲಿ ಪದ್ಯಗಳನ್ನು ಬರೆದಿದ್ದನ್ನು ಗುರುತಿಸಲಾಗಿದೆ. ಇನ್ನೊಂದು ವಿಶಿಷ್ಟ ಪ್ರಯೋಗವನ್ನು ದಾಸರು ಮಾಡಿದ್ದಾರೆ. ಒಂದೇ ಪದ್ಯದೊಳಗೆ ಕನ್ನಡ, ಮರಾಠಿ, ಪಾರ್ಸಿ – ಹೀಗೆ ವಿವಿಧ ಭಾಷೆಯ ಪದಗಳನ್ನು ಬಳಸಿದ್ದಾರೆ. ಇವರ ಬೃಂದಾವನ ವಿಜಯಪುರ ಜಿಲ್ಲೆಯ ಕಾಖಂಡಕಿಯಲ್ಲಿದೆ. ಪ್ರತಿವರ್ಷ. ಛಟ್ಟಿ ಅಮವಾಸ್ಯೆಯನ್ನು ಮಹಿಪತಿದಾಸರ ಪುಣ್ಯತಿಥಿಯಾಗಿ ಆಚರಿಸಲಾಗುತದ. ಮತ್ತ ಮುಂಡಿಗೆಗಳನ್ನು ಅನೇಕ ದಾಸರು ಬಳಸಿದ್ದರೂ, ಬಹಳ ಪರಿಣಾಮಕಾರಿಯಾಗಿ ಬಳಸಿದವರೊಳಗೆ ಶ್ರೀ ಮಹಿಪತಿ ದಾಸರ ಹೆಸರು ಮೊದಲಿನ ಸ್ಥಾನಗೊಳಗೆ ನಿಲ್ಲತದ.
ಮಹಿಪತಿದಾಸರ "ಕಂಡೆ ನಾನೊಂದು ಕೌತುಕವ" ಎಂಬುದೊಂದು ಮುಂಡಿಗೆ.
ಕಂಡೆ ನಾನೊಂದು ಕೌತುಕವ || ಪ ||
ಆಯಿ ಅಜ್ಜನ ನುಂಗಿದ ಕಂಡೆ
ನಾಯಿ ಲಜ್ಜೆಯ ಹಿಡಿದುದ ಕಂಡೆ
ಕಾಯಿ ಹೆಜ್ಜೆಯನಿಕ್ಕುತ ಜಗದೊಳು
ರಾಜ್ಯಪ್ರದಕ್ಷಣೆ ಮಾಡುದು ಕಂಡೆ || 1 ||
ಇರುವೆ ವಿಷ್ಣುನ ನುಂಗಿದ ಕಂಡೆ
ನರಿಯು ರಾಜ್ಯನಾಳುದ ಕಂಡೆ
ಅರಿಯು ಮರಿಯ ನುಂಗಿದ ಕಂಡೆ
ಕುರಿಯಿಂದ ಪರಲೋಕ ಆಯ್ದಿದು ಕಂಡೆ || 2 ||
ಇಲಿಯು ಯುಕ್ತಿಯದೋರುದು ಕಂಡೆ
ಹುಲಿಯು ಭಕ್ತಿಯು ಮಾಡುದು ಕಂಡೆ
ಇಳೆಯೊಳು ಮಹಿಪತಿ ಕಳೆವರದೊಳಿನ್ನು
ಮುಕ್ತಿ ಸಾಧನದ ಬೆಡಗವು ಕಂಡೆ || 3 ||
ಶ್ರೀ ಮಹಿಪತಿ ದಾಸರ ಹೆಚ್ಚಿನ ಕೃತಿಗಳು ದೈವಭಕ್ತಿಯೊಳಗ, ಸ್ವಾನಂದಾನುಭವಕ್ಕ ಹೋಗಿದ್ದನ್ನು ವಿವರಿಸುತ್ತಾವ. ಅದಕ್ಕ ತಲುಪಬೇಕಾದರ, ಏನೇನು ಅಡೆತಡೆಗಳು ಬರುತಾವ ಅನ್ನೋದನ್ನೂ ಇಲ್ಲೇ ಹೇಳತಾರ. ಅಂತಹ ಒಂದು ಚಂದದ, ಮೂರು ನುಡಿಗಳ ಕೃತಿ, ಇದರಲ್ಲಿ, ಅನೇಕ ಪ್ರಾಣಿಗಳ ಹೆಸರನ್ನು ಬಳಸಿಕೊಂಡು, ಮುಕ್ತಿ ಸಾಧನದ ಸ್ತಿತಿಯನ್ನು ತಲುಪುವ ಬಗ್ಗೆ ತುಂಬ ಸುಲಭದ ಉದಾಹರಣೆಗ ಮೂಲಕ ವಿವರಿಸ್ಯಾರ. ಸುಮ್ಮನೆ ಹಾಡಲಿಕ್ಕೆ, ಕೇಳಲಿಕ್ಕೆ ಚಂದ ಅನ್ನಿಸುವ ಈ ಕೃತಿ, ಅರ್ಥವನ್ನು ತಿಳಿಯಲಿಕ್ಕೆ ಅತ್ಯಂತ ಆಳಕ್ಕಿಳಿದು ಆನಂದಪಡಬೇಕಾಗತದ.
ಮಾನವ ಜನ್ಮ ಬಲು ದುರ್ಲಭ, ಇದನ್ನು ಅರ್ಥಮಾಡಿಕೊಳ್ಲದೇ ಮನುಷ್ಯ, ತನ್ನ ಜೀವನದ ಪ್ರತಿಯೊಂದಕ್ಕೂ ಕೌತುಕ ಪಡುತ್ತಾನೆ. ತೇನವಿನಾ ತೃಣಮಪಿನ ಚಲತಿ ಅಂತ ತಿಳಿದಿದ್ದರೂ ಸಹ, ಎಲ್ಲವೂ ಭಗವದಿಚ್ಛೆಯಂತೆ ನಡೀತದ ಅನ್ನೋದನ್ನೂ ಮರೆತು, ಪ್ರತೀ ಕ್ಷಣದೊಳಗೂ, ನಾನು, ನನ್ನದು, ನನ್ನ ಹೆಂಡತಿ-ಮಕ್ಕಳು, ನನ್ನ ಓದು, ನನ್ನ ಗಳಿಕೆ ಅನ್ನುವಂಥಾ ಅಹಂಭಾವದೊಳಗ ಮುಳಗಿ ಏಳತಾನ, ಸಂಸಾರ ಅನ್ನುವ ಈ ನಾವೆ ನಡೆಯೋದೇ ಕಂಸಾರಿಯ ಆಜ್ಞೆಯಂತೆ ಅನ್ನುವ ಸತ್ಯವನ್ನು ಪ್ರತೀ ಕ್ಷಣದೊಳಗೂ ಮರೆತು ಅಹಂಕಾರದಿಂದ ಮೆರೆಯುವಂಥಾ ಕೌತುಕವನ್ನು ನಾನು ಕಂಡೆ ಅಂತ ದಾಸರು ಹೇಳ್ಯಾರ.
ಇನ್ನ ಮೊದಲಿನ ನುಡಿಯೊಳಗ, "ಆಯಿ ಅಜ್ಜನ ನುಂಗಿದ ಕಂಡೆ," ಇದು ಶ್ರೀ ಪುರಂದರದಾಸರ ಸುಳ್ಳು ನಮ್ಮಲ್ಲಿಲ್ಲವಯ್ಯ ಅನ್ನುವ ಪದದಂಗ, ನೋಡಲಿಕ್ಕೆ, ಕೇಳಲಿಕ್ಕೆ ತಮಾಷೆಯಾಗಿ, ಖುಷಿಯಾಗಿ ಕಾಣತದ. ಆದರೆ, ಅಷ್ಟೊಂದು ಜ್ಞಾನಿಗಳಾದ ಮಹಿಪತಿದಾಸರು, ಇಷ್ಟು ಸುಲಭವಾದ, ತಮಾಷೆಯಾದ ಪದವನ್ನು ರಚಿಸಲಿಕ್ಕೆ ಸಾಧ್ಯವೇ? ಅಂತ ನೋಡಿದಾಗ, ಇದರೊಳಗ, ಏನಾದರೂ ವಿಶೇಷವಿರಲಿಕ್ಕೇ ಬೇಕು ಅನ್ನೋದಂತೂ ನಿಶ್ಚಿತವಾಗುತ್ತದೆ. ಈ ಅರ್ಥದೊಳಗ ನೋಡಿದರ, ನಿಜವಾಗಿ ದಾಸರು ಹೇಳಿದ ಕೌತುಕ ಇಲ್ಲಿ ಕಾಣತದ. ಇಲ್ಲೆ, "ಆಯಿ" ಅನ್ನೋದು "ಸ್ತ್ರೀಲಿಂಗ"ದ ಪದ ಇದನ್ನ ಮನುಷ್ಯನ ಆಸೆಗೆ ಹೋಲಿಸ್ಯಾರ, ಹಂಗ, "ಅಜ್ಜ" ಅನ್ನುವ ಪದ ಪುಲ್ಲಿಂಗ ಆದನ್ನು "ಮನಸ್ಸಿಗೆ" ಹೋಲಿಸ್ಯಾರ, ಹೆಚ್ಚಿನ ಹರಿದಾಸರ ಕೃತಿಗಳೊಳಗೆ ಈ ರೀತಿ ನಾವು ಕಾಣತೇವಿ. ಇಲ್ಲೆ, ದಾಸರು ಆಸೆಯೇ ಹೆಣ್ಣು, ಆಸೆಯು ಮನಸ್ಸನ್ನು ತುಂಬತದ, ಬೇರೇನೂ ಕಾಣದಂಗ ನುಂಗಿ ಬಿಡತದ, ಈ ಹಂತದೊಳಗ, ಮನುಷ್ಯ ಆಸೆಯ ಹಿಂದ ತಿರುಗತಾನ, ಹೊನ್ನು,ಮಣ್ಣಿಗೆ ಬೆನ್ನು ಹತ್ತಿ ಹಾಳಾದವರ ಇತಿಹಾಸ ಬಹಳ ನೋಡತೇವಿ ನಾವು. ಹೀಂಗಾಗಿ ಈ ನುಡಿಯಲ್ಲಿ ಮನುಷ್ಯನ ಮನಸ್ಸು ಆಸೆ ಎಂಬುದುಕ್ಕೆ ಬೆನ್ನ ಹತ್ತಿ, ಅಸೆಯೇ ಅವನನ್ನು ನುಂಗಿಬಿಟ್ಟದ. ಆಸೆಯ ಬೆನ್ನು ಹತ್ತಿದಾಗ ನಾವುಗಳು ಗಳಿಕೆಯ ಹಿಂದೆ ಬೆನ್ನು ಹತ್ತಿ, ಊರು ಕೇರಿ ಬಿಟ್ಟು ದೇಶ ವಿದೇಶ ತಿರುಗಿಕೋತ, ತಾನು ನೈಮಿತ್ತಿಕ ಕರ್ಮಾನುಷ್ಟಾನ ಬಿಟ್ಟು, ಕೇವಲ ಹಣ ಕೀರ್ತಿಯ ಬೆನ್ನು ಹತ್ತುತ್ತಾ, ದೇಶ ವಿದೇಶ ಪ್ರದಕ್ಷಿಣಿ ಹಾಕುವುದನ್ನ, ಇಂದು ನಡೀತಿರೋದನ್ನ, ಅಂದೇ ದಾಸರು ಹೇಳಿದ್ದು ವಿಶೇಷವದ. ಮನುಷ್ಯ ಇದನ್ನೇ ತನ್ನ ಹೆಚ್ಚುಗಾರಿಕೆ ಅಂತ ಅಹಂಕಾರದಲ್ಲಿ ಮೆರೆಯುತ್ತಾನೆ. ಅದನ್ನು ನೋಡಿದ ನಾಯಿ ಕೂಡಾ ಲಜ್ಜೆ ಪಡುವಂತಿದೆ ಅಂದಾರ.
ಇನ್ನ ಮುಂದಿನ ನುಡಿಯೊಳಗ, “ಇರುವೆ ವಿಷ್ಣುನ ನುಂಗಿದ ಕಂಡೆ” ಅಂದರ, ಅಹಂಕಾರದ ಬಗ್ಗೆ ಹೇಳತಾರ, ಇರುವೆಯಷ್ಟು ಸಾಧನೆಯನ್ನು, ನಿಜವಾಗಲೂ ಇದು ಸಾಧನೆಯೇ ಅಲ್ಲ, ಅದು ಕೇವಲ ಹಣ, ಕೀರ್ತಿಯ ಗಳಿಕೆ ಮಾತ್ರ, ಅದನ್ನೇ ದೊಡ್ಡದು ಮಾಡಿಕೊಂಡು, ಮನುಷ್ಯ ತನ್ನ ಮುಂದೆ ಯಾರು ಇಲ್ಲ. ನಾನೇ ಸರ್ವೇಶ್ವರ ಅನ್ನೋ ಹಂಗ, ಅಸದೃಶಮಹಿಮನಾದ, ಆದಿ ಮಧ್ಯಾಂತ ರಹಿತನಾದ ಪರಮಾತ್ಮನನ್ನು ಮರೆತು ಬಿಡುತ್ತಾನೆ. ಇಂದಿನ ಅತೀಯಾದ ಕಲಿಪ್ರಭಾವದ, ಪಾಶ್ಚಿಮಾತ್ಯದ ಅಂಧಾನುಕರಣೆಯನ್ನು ನೋಡಿದರೆ, ದಾಸರು ಹೇಳಿದ್ದು ಅಕ್ಷರಃ ನಿಜ ಅನಿಸುತದ. ಮುಂದ, "ನರಿಯು ರಾಜ್ಯವ ಆಳಿದು ಕಂಡೆ" ಇಲ್ಲಿ ನರಿಯಂದರೆ, ಮೋಸ, ವಂಚನೆಗೆ ಹೆಸರಾದ ಪ್ರಾಣಿ, ಅದರಿಂದ, ರಾಜ್ಯವನ್ನಾಳುವ್ಲಲ್ಲಿ ಅಷ್ಟೇ ಅಲ್ಲ ಸಮಾಜದ ತುಂಬೆಲ್ಲಾ, ಮೋಸ, ವಂಚನೆ, ಲಂಚಗುಳಿತನಗಳೇ ತುಂಬಿ , ದುಡ್ಡು, ಅಧಿಕಾರವೇ ದೊಡ್ಡದು, ಮೋಸ ವಂಚನೆ ಅದರ ಆಧಾರ, ನ್ಯಾಯ ನೀತಿಗಳೆಲ್ಲಾ ಅಲ್ಲಿ ಮರೆಯಾಗಿ ಬಿಟ್ಟಾವ. “ಅರಿಯು ಮರಿಯ ನುಂಗಿದ ಕಂಡೆ” ಅರಿ ಎಂದರೆ ವೈರಿ, ಅರಿಷಡ್ವೈರಿಗಳು ನಮ್ಮನ್ನು ಕಾಡುತ್ತವೆ. ಅವುಗಳು ತಮ್ಮೊಂದಿಗೆ ಇನ್ನೂ ಅನೇಕ ಆಸೆಗಳನ್ನು ಹುಟ್ಟು ಹಾಕುತ್ತವೆ. ಅವುಗಳು ಚಿಕ್ಕ ಮರಿಯಂತಿರುವ ನಮ್ಮ ಸಾಧನೆಯೊಂದಿಗೆ, ನಮ್ಮನ್ನೇ ನುಂಗುವ ಹಂತಕ್ಕೆ ತಲುಪಿವೆ. ಅಂದರೆ, ಚಿಕ್ಕ ಮರಿಯಂತಹ ಸಾಧನೆ ಮಾಡುವ ಹುಮ್ಮಸ್ಸನ್ನೂ ಈ ವೈರಿಗಳು ನುಂಗಿ ಹಾಳು ಮಾಡುತ್ತವೆ. ಅರಿಯೆಂಬ ಕುಬುದ್ಧಿಯು, ಮರಿಯಂಬ ಪುಟ್ಟ ಜ್ಞಾನವನ್ನು ನಮ್ಮ ಮನಸ್ಸನ್ನು ನುಂಗಿ, ನಮ್ಮನ್ನ ತನ್ನ ಬಲೆಯ ಸುಳಿಯೊಳಗೆ ಸಿಲುಕಿಸಿ, ನಮಗೇ ತಿಳಿಯದ ಹಾಗೇ ನೋವು, ದುಃಖ ಕೊಡುತ್ತದೆ. ಆದರಿಂದ ನಮ್ಮ ಇಂದ್ರಯಗಳ ಮೇಲೆ ನಿಗ್ರಹ ಸಾಧಿಸಲು ಜಪ ತಪ ನೇಮ ವೃತಾದಿಗಳನ್ನು ಮಾಡಿದರೆ ಮಾತ್ರ ಸಾಧ್ಯವಾಗುತ್ತದೆ. “ಕುರಿಯಿಂದ ಪರಲೋಕ ಆಯ್ದಿದು ಕಂಡೆ” ಎಂಬಲ್ಲಿ ಮನುಷ್ಯನು ತನ್ನ ಮನೋಕಾಮನೆಗಳು ಈಡೇರಿದರೆ ಕುರಿಯನ್ನು ಬಲಿ ಕೊಡುತ್ತೇನೆಂದು ಎಷ್ಟೋ ಬಾರಿ ಹರಕೆ ಕಟ್ಟಿಕೊಳ್ಳುತ್ತಾರಂತೆ. ಆದರೆ, ನಮ್ಮಲ್ಲಿರುವ ತಾಮಸ ಗುಣಗಳನ್ನು, ನವವಿಧ ದ್ವೇಷ ಗಳನ್ನು, ಆಸೆಗಳನ್ನು ಬಲಿ ಕೊಟ್ಟಾಗ ಮಾತ್ರ, ಪರಲೋಕದ ಉತ್ತಮ ಗತಿಗೆ ಸಹಾಯವಾಗುತ್ತದೆ, ಎಂಬುದನ್ನು ಮರೆತು ಬಿಟ್ಟಿದ್ದೇವೆ, ಅಲ್ಪ ಪ್ರಾಣಿಯನ್ನು ನಮ್ಮ ಸುಖಕ್ಕಾಗಿ ಬಲಿ ಕೊಡುತ್ತಿದ್ದೇವೆ, ಅದರಿಂದಲೇ ಸಾಧನೆ ಸಾಧ್ಯ ಎಂದುಕೊಳ್ಳುತ್ತೇವೆ, ಎಂದು ದಾಸರು ಹೇಳಿದ್ದಾರೆ.
ಇನ್ನು ಕೊನೆಯ ನುಡಿಯಲ್ಲಿ, "ಇಲಿಯು ಯುಕ್ತಿಯದೋರುದು ಕಂಡೆ" ಎಂಬಲ್ಲಿ, ಇಲಿಯಂತಹ ಚಿಕ್ಕ ಪ್ರಾಣಿಯೂ ಸಹ ಯುಕ್ತಿಗೆ ಹೆಸರಾಗಿದೆ. ಗಣಪತಿ ವಾಹನವಾದ ಇಲಿಯ ಯುಕ್ತಿಯು ಆಗಾಧವಾಗೇದ, ಅದರಿಂದಾಗಿಯೇ, ವಿದ್ಯಾಭಿಮಾನಿ, ಚಾತುರ್ಯದ ಪ್ರಾಣಿ ಇಲಿಯನ್ನು ತನ್ನ ವಾಹನವನ್ನಾಗಿ ಮಾಡಿಕೊಂಡಿದ್ದಾನೆ. ಆದರೆ ಮನುಷ್ಯನ ಮಾತ್ರ, ಅವನಲ್ಲಿ ಏನನ್ನಾದರೂ ಸಾಧಿಸಬಹುದಾದ ಯುಕ್ತಿ ಇದ್ದರೂ ಸಹ, ಅದನ್ನು ತನ್ನ ಸ್ವಾರ್ಥ ಅಥವಾ ಮನೆಹಾಳು ಕೆಲಸಕ್ಕೆ ಬಳಸುತ್ತಿದ್ದಾನೆ. ಸುಶಿಕ್ಷಿತರೂ ಸಹ ತಮ್ಮ ಜಾಣ್ಮೆಯನ್ನು ಲೋಕಕಂಟಕವಾಗಿ ಬಳಸುತ್ತಾರೆ. "ಹುಲಿಯ ಭಕ್ತಿಯ ಮಾಡುದು ಕಂಡೆ" ಎಂಬಲ್ಲಿ, ಪಂಚತಂತ್ರ ಒಂದು ಕಥೆಯೊಳಗ, ಒಮ್ಮೆ, ಎಲ್ಲ ಪ್ರಾಣಿಗಳೊಡಗೂಡಿ ಪೂಜೆ ಮಾಡುತ್ತಿರುವಾಗ, ಹುಲಿಯು ಮಾತ್ರ ಕಣ್ಮುಚ್ಚಿ ಕೂತಿದ್ದರೂ, ಅದರ ಮನಸ್ಸೆಲ್ಲಾ, ಅಲ್ಲಿ ಇಟ್ಟಿರುವ ಭಕ್ಷ್ಯಗಳ ಮೇಲೆ ಇರುತ್ತದೆ. ಎಲ್ಲ ಪ್ರಾಣಿಗಳು ಕಣ್ಮುಚ್ಚಿ ಭಕ್ತಿಯಿಂದ ದೇವರ ಪೂಜೆ ಮಾಡುತ್ತಿದ್ದರೆ, ಹುಲಿಯು ಸಾವಕಾಶವಾಗಿ, ದೇವರ ನೈವೇದ್ಯಕ್ಕೆ ಇಟ್ಟಿದ್ದ ಎಲ್ಲ ಭಕ್ಷ್ಯವನ್ನು ತಾನು ತಿಂದು ಬಿಟ್ಟಿರುತ್ತದೆ. ಅಂದರೆ ಹುಲಿಯ ಭಕ್ತಿಯು ತೋರಿಕೆಯ ಭಕ್ತಿ ಮಾತ್ರ, ಹಾಗೇ ನಮ್ಮಗಳ ಭಕ್ತಿ ಕೂಡ. ಸ್ವಕಾಮನೆಗೆ ಭಗವಂತನಲ್ಲಿ ಹರಕೆ ಹೊತ್ತು ಸ್ವಾರ್ಥ ಗುಣ ಹೊಂದಿದ್ದೇವೆ. ಅಥವಾ ನಾವುಗಳು ತೋರಿಕೆಗಾಗಿ ಮಾತ್ರ, ಆಡಂಬರ ಪೂಜೆ ಮಾಡಿ ತೋರಿಸಿಕೊಳ್ಳುತ್ತೇವೆ. “ಇಳೆಯೊಳು ಮಹಿಪತಿ ಕಳೆವರದೊಳಿನ್ನು ಮುಕ್ತಿ ಸಾಧನದ ಬೆಡಗವು ಕಂಡೆ” ಎಂಬ ಈ ಕಡೆಯ ಸಾಲಿನಲ್ಲಿ, ಮಹಿಪತಿ ದಾಸರು, ತಮ್ಮ ಅಂಕಿತವನ್ನು ಹೇಳಿ, ಮುಕ್ತಿ ಸಾಧನದ ಬೆಡಗನ್ನು ವಿವರಿಸಿದ್ದಾರೆ. ವಚನ ಸಾಹಿತ್ಯದಲ್ಲಿಯ ಬೆಡಗಿನ ವಚನಗಳಂತೆ, ಇಲ್ಲಿಯೂ ಬೆಡಗು ಎಂಬ ಸರಳ ಸುಂದರ ಕನ್ನಡ ಪದವನ್ನು ಕೌತುಕಕ್ಕೆ ಪರ್ಯಾಯವಾಗಿ ಬಳಸಿದ್ದಾರೆ. ಈ ಭೂಮಿಯಲ್ಲಿ ಮಾನವ ಜನ್ಮ ದೊಡ್ಡದು, ಹರಿ ಕರುಣೆಯಿಂದ ಈ ಮಾನವ ಜನ್ಮ ದೊರಕಿದಾಗ, ಎಂಬತ್ತನಾಲ್ಕು ಲಕ್ಷ ಯೋನಿ ಜನ್ಮ ದಾಟಿ ಮಾನವನಾಗಿ ಬಂದ ಕಾರಣದ ಅದರಲ್ಲಿ ಮುಕ್ತಿ ಸಾಧನೆಗೆ, ಜೀವನ ಉದ್ಧಾರವಾಗಲಿಕ್ಕೆ, ಲೌಕಿಕ ಜೀವನದ ಜೊತೆಯೊಳಗೆ ಸಂಸ್ಕಾರವನ್ನು ಬೆರೆಸಿದಾಗ ಇಹ ಪರಗಳೊಳಗ ಸುಖ-ಶಾಂತಿ ಕಂಡು ಮೋಕ್ಷ ಪಡೆಯಬಹುದು. ಒಟ್ಟಾರೆಯಾಗಿ, ಈ ಮುಂಡಿಗೆಯೊಳಗ ಶ್ರೀ ಮಹಿಪತಿ ದಾಸರು, ಮನುಷ್ಯನ ಇಂದ್ರಿಯಗಳು ಹಾಗೂ ಮನುಷ್ಯನಲ್ಲಿರುವ ಅರಿಷಡ್ವರ್ಗಗಳಿಗೆ, ಒಂದೊಂದು ಪ್ರಾಣಿಯ ಹೋಲಿಕೆ ಕೊಟ್ಟು. ಕಲಿಯುಗದೊಳಗ, ಜೀವನದ ಸಾಧನೆಯಾಗುವಲ್ಲಿ ಇರುವ ಅಡೆತಡೆಗಳ ಘೋರತೆಯ ಬಗ್ಗೆ, ಅಹಂಕಾರ ಖಂಡನೆಯ ಬಗ್ಗೆ ಹೇಳಿದ್ದಾರೆ ಇದೂ ಕೂಡಾ ಮಹಿಪತಿದಾಸರ, ಈ ಮುಂಡಿಗೆಯ ಅರ್ಥದ, ಒಂದು ಮೇಲು ನೋಟ ಮಾತ್ರ. ನನ್ನ ಯಥಾಮತಿಗೆ ಹೊಳೆದದ್ದು, ಇನ್ನೂ ಗೂಡಾರ್ಥಗಳೂ ಇರಬಹುದೇನೋ. ಚಿಂತನೆಯಲ್ಲಿ ತೊಡಗಿದಾಗ ಹೊಸ ಹೊಸ ಅರ್ಥಗಳೂ ಹೊಳೆಯಬಹುದು. ಈ ಚಿಂತನೆಯ ವಾಕ್ ಶುದ್ಧಿ ವೃಂದಾವನ ವಿಹಾರಿ ಶ್ರೀ ಕೃಷ್ಣಾರ್ಪಣಮಸ್ತು.
***