ಧನ್ಯರಾದರು ಗುರುಗಳನು ಪೂಜಿಸುತ
ಇನ್ನಿವರ ಪಾತಕವು ತೊಲಗಿತು ಜಗದಿ ಪ.
ತಂದೆ ಮುದ್ದುಮೋಹನದಾಸ ರಾಯರನು
ಚಂದದಿಂ ಸತಿಸಹಿತ ಕರೆತಂದು ಮನೆಗೆ
ಮಂದರೋದ್ಧರನ ಪದಸೇವೆ ಇದು ಎಂದರಿತು
ಮಂದಹಾಸದಲಿ ನಸುನಗುತ ಸದ್ಭಕ್ತರು 1
ಮಂಗಳೋದಕದಿಂದ ಮಜ್ಜನವಗೈಸುತಲಿ
ಅಂಗಗಳನೊರೆಸುತಲಿ ನಾಮಗಳನ್ಹಚ್ಚಿ
ರಂಗನಾಥನಿಗರ್ಪಿಸುತ ಪುಷ್ಪಹಾರವನ್ಹಾಕಿ
ಶೃಂಗಾರವನೆಗೈದು ಶ್ರೀ ಗುರುಗಳನ್ನು 2
ಪಚ್ಚೆಕರ್ಪೂರ ಕೇಸರಿಯಿಂದ ಕೂಡಿದ
ಅಚ್ಚ ಗಂಧವನ್ಹಚ್ಚಿ ಅಕ್ಷತೆಯನಿಟ್ಟು
ಮಚ್ಛರೂಪಿಯ ನೆನೆದು ಪಾದಕಮಲವ ತೊಳೆದು
ನಿಚ್ಚಳದ ಭಕ್ತಿಯಲಿ ನಿಜ ಭಕ್ತರೆಲ್ಲ 3
ಸತಿಸಹಿತ ಕುಳ್ಳಿರಿಸಿ ಗುರುಗಳನು ಪೀಠದಲ್ಲಿ
ಅತಿಶಯದಿ ಕುಡಿಬಾಳೆ ಎಲೆಗಳನೆ ಹಾಕಿ
ಮತಿಯಿಂದ ರಂಗೋಲೆಗಳನ್ಹಾಕಿ ಲವಣ ಸ-
ಹಿತದಿಂದ ಘೃತದ ಪರಿಯಂತ ಬಡಿಸುತಲಿ 4
ಅನ್ನಾದಿ ಸಕಲ ಷಡ್ರಸಗಳನೆ ಬಡಿಸುತ್ತ
ಘನ್ನ ಮಹಿಮರಿಗೆ ಭಕ್ಷಾದಿಗಳ ಬಡಿಸಿ
ಸನ್ನುತಿಸುತಲಿ ತೀರ್ಥ ಆಪೋಷನವನ್ಹಾಕಿ
ಪನ್ನಗಶಯನನಿಗೆ ಅರ್ಪಿಸುತ ಮುದದಿ 5
ಘೃತಶರ್ಕರಾದಿಗಳನಡಿಗಡಿಗೆ ಬಡಿಸುತಲಿ
ನುತಿಸಿ ಗಾನಗಳಿಂದ ಗುರುಮಹಿಮೆಯ
ಅತಿಶಯದಿ ದಧಿ ಕ್ಷೀರದನ್ನಗಳನುಣಿಸುತಲಿ
ಘೃತ ಕ್ಷೀರದಿಂದ ಕೈ ತೊಳೆದು ಸಂಭ್ರಮದಿ 6
ಯಾಲಕ್ಕಿ ಕರ್ಪೂರ ಮಿಳಿತ ವೀಳೆಯವನಿತ್ತು
ವೇಳೆವೇಳೆಗೆ ತಪ್ಪು ಕ್ಷಮೆಯ ಬೇಡುತಲಿ
ವ್ಯಾಳಶಯನಗರ್ಪಿಸುತ ಉಡಿಗೆ ತೊಡಿಗೆಗಳನಿತ್ತು
ಮಾಲೆಹಾಕುತ ಆರತಿಯನೆತ್ತಿ ಮುದದಿ 7
ಹರಿಪ್ರೀತನಾಗುವನು ಗುರು ಹೃದಯದಲಿ ನಿಂತು
ಪರಿಹಾರವಾಗುವುದು ಕರ್ಮ ತೊಡಕುಗಳು
ಸರಸಿಜಾಕ್ಷನು ತಾನು ಹರುಷಪಡುವನು ದಯದಿ
ಕರಕರೆಯ ಸಂಸಾರ ಕಡಿದು ಗತಿ ಈವ 8
ಗುರುದ್ವಾರ ಒಲಿಯುವನು ಹರಿಯು ಮೋಕ್ಷಾರ್ಥಿಗಳ
ಅರಘಳಿಗೆಯಗಲದಲೆ ಕಾಯುವನು ಸತತ
ಗುರು ಅಂತರ್ಯಾಮಿ ಶ್ರೀ ಗೋಪಾಲಕೃಷ್ಣವಿಠ್ಠಲ
ತ್ವರಿತದಿಂ ಹೃದಯದಲಿ ತೋರ್ವನು ತನ್ನ9
****