Showing posts with label ಏನ ಹೇಳಲಿ ಈತನಿರವ ಭಕ್ತರ ಮನಾಧೀನ ಹೆಳವನಕಟ್ಟೆ ರಂಗ helavana katte. Show all posts
Showing posts with label ಏನ ಹೇಳಲಿ ಈತನಿರವ ಭಕ್ತರ ಮನಾಧೀನ ಹೆಳವನಕಟ್ಟೆ ರಂಗ helavana katte. Show all posts

Tuesday, 1 June 2021

ಏನ ಹೇಳಲಿ ಈತನಿರವ ಭಕ್ತರ ಮನಾಧೀನ ಹೆಳವನಕಟ್ಟೆ ರಂಗ ankita helavana katte

ಏನ ಹೇಳಲಿ ಈತನಿರವ ಭಕ್ತರ ಮನಾ-

ಧೀನ ಹೆಳವನಕಟ್ಟೆ ರಂಗ ದೇವೋತ್ತುಂಗನ ಪ.


ಹೊಳೆವ ಮೈಯ್ಯವ ಕಲ್ಲಹೊರುವ ಕಡಲೊಳಾಡುವ

ತಿಳಿಯ ಎರಡಂಗನೆ ತಿರಿವ ಪರುಶುವಿಡಿವ ಕೋಡಗ

ಕುಲವನಾಳುವ ಗೋವಕಾಯ್ವ ಕಾಂತೆಯರ ವ್ರತವ-

ನಳಿವ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ

ಜಲವಪೊಕ್ಕು ದೈತ್ಯನ ಸಂಹರಿಸಿ

ಕಲಕಿ ಸಮುದ್ರವ ಕಾರಣಕಾಗಿ

ನೆಲಗಳ್ಳನ ಮರ್ದಿಸಿ ಹಿರಣ್ಯಾಕ್ಷನ

ಚಲುವ ಚೆಳ್ಳುಗುರಿಂದೊಡಲನೆ ಬಗಿದು

ಸುಲಭನಾಗಿ ಶುಕ್ರನ ಕಣ್ಣಿರಿದು

ಬಲುಸಾಹಸದಿ ಕ್ಷತ್ರಿಯರನು ಗೆಲಿದು

ಶಿಲೆಯನೊದ್ದು ನಿಜಸತಿಯಳ ಮಾಡಿ

ಗೆಲವ ತೋರಿ ಗೋಪಿಗೆ ಸುತನಾಗಿ

ನಿಲುವ ದಿಗಂಬರಧರ ರಾವುತನಾಗಿ

ಇಳೆಯೊಳು ಚರಿಸುವ ಈತ ಕಾಣೆ ಅಮ್ಮಯ್ಯ 1


ನಿಲ್ಲದಾಡುವ ನಗವ ಪೊರುವ ಮಣ್ಣಬಗೆವ

ಕಲ್ಲ ಕಂಬವನೊಡೆವ ಇಳೆಯನಳೆವ ಭಾರ್ಗವ

ವಲ್ಲಭನವರಗೆಲುವ ಲಜ್ಜೆನಾಚಿಕೆ-

ಯಿಲ್ಲದೆ ಅಶ್ವವನೇರಿ ಮೆರೆವನ್ಯಾರೆ ಅಮ್ಮಯ್ಯ

ಎಲ್ಲ ವೇದವನುದ್ಧರಿಸ್ಯಂಬುದಿಯ

ಜಲ್ಲಿಸಿ ಧಾರುಣಿಯನು ತಂದಿರುಹಿ

ತಲ್ಲಣಿಸುವ ಪ್ರಹಲ್ಲಾದನ ಪೊರೆÀದು

ಬಲ್ಲಿದ ಬಲಿಯ ಬಂಧಿಸಿ ಪಿತನಾಜ್ಞೆಯ

ಸಲ್ಲಿಸಿ ಮಾತೆಯ ಶಿರವ ಚೆಂಡಾಡಿ

ಬಿಲ್ಲನ್ನೆತ್ತಿ ಭೂಮಿಜೆಯೊಡಗೂಡಿ

ಮಲ್ಲರ ಮಡುಹಿ ಮುಪ್ಪುರದ ಬಾಲೆಯರ

ಜಳ್ಳು ಮಾಡಿ ಧರ್ಮವ ಹೋಗ್ಯಾಡಿ

ಹಲ್ಲಣಿಸುವ ತೇಜಿಯನೇರಿದ ಶಿರಿ

ವಲ್ಲಭ ಈತ ವಾಸುದೇವ ಕಾಣೆ ಅಮ್ಮಯ್ಯ 2


ಎವೆ ಇಕ್ಕ ಬೆನ್ನಲ್ಹೊತ್ತು ಗಿರಿಯಕೊ-

ನೆವಲ್ಲ ಮಸೆವ ಸಮಯದಿ ಬಹವಿಪ್ರ ಮುನಿ

ಭವ ಶ್ರೀರಾಘವ ನವನೀತಚೋರ ನಾರಿಯರ ಮೋಹಿಸಿ

ತವಕದಿ ತುರಗವನೇರಿ ಮೆರೆವನ್ಯಾರೆ ಪೇಳಮ್ಮಯ್ಯ

ತಮನ ಮರ್ದಿಸಿ ಸಾಮವನಜಗಿತ್ತು

ಸುಮನಸರಿಗೆ ಸುಧೆಯನು ತಂದೆರದು

ಅವನಿಗಳೆದ ಅಸುರನ ಸಂಹರಿಸಿ

ಮಮತೆಯಿಂದ ಪುಟ್ಟ ಮಗುವನೆ ಸಲಹಿ

ಗಮಕದೊಳಗಿದ್ದ ಬಲಿಯನು ಕೆಡಮೆಟ್ಟಿ

ಸಮರಂಗದಿ ಸುರಧೇನುವ ತಂದು

ದಿನಕರ ವಂಶೋದ್ಧಾರಕನಾಗಿ ಕಂಸ-

ನ ಮಡುಹಿ ಮುಪ್ಪುರದ ಬಾಲೆಯರು

ಭ್ರಮಿಸುವಂತೆ ಬೌದ್ಧಾವತಾರನಾದ

ಕಲ್ಕಿ ಹೆಳವನಕಟ್ಟೆರಂಗ ದೇವೋತ್ತುಂಗನ 3

***