Audio by Mrs. Nandini Sripad
ರಾಗ ಪಂತುವರಾಳಿ
ಧ್ರುವತಾಳ
ಅನಾಥಬಂಧು ದೀನದಯಾಳು ಅನಾದಿದೈವ
ಅನಿಮಿತ್ತ ಜೀವ ಅನಾಮಯಾ ಅನಂತ
ಅನಂತಮೂರ್ತಿ ಪ್ರಧಾನ - ಪುರುಷರ ಧ್ಯಾನಕ್ಕೆ ದೂರಾ
ಆನಂದಮಯಾನತಿ ಜ್ಞಾನಾದಿ ಪೂರ್ಣಾ
ವಾಣಿಯರಸನಯ್ಯ ಅನರ್ಪಿತನ್ನೇ
ಪ್ರಾಣಾಪಾನಾದಿ ಪಂಚ ಪ್ರಾಣಾಹುತಿಯಿಂದ
ತ್ರಾಣರನ್ನೆ ಮಾಡಿ ಮಾಣದೆ ನಡಿಸುವ
ಜಾಣ ಬೃಹದ್ಭಾನು ವಿಜಯವಿಠ್ಠಲ ನೀನು
ನಾನಾ ಲೀಲೆಯ ತೋರುವ ನಾರಾಯಣದೇವ ॥ 1 ॥
ಮಟ್ಟತಾಳ
ಅಚ್ಯುತಾನಂತ ಗೋವಿಂದ ಕೃಷ್ಣ
ಸಚ್ಚಿದಾನಂದ ವೈಕುಂಠ ರಮಣ
ಅಚ್ಚರ ಮಹಿಮ ಕಮಲ ಜಾಂಡ
ಮುಚ್ಚಿ ಬಿಚ್ಚುವಂಥ ಬಿಗಹು ಪ್ರತಾಪಾ
ಅರ್ಚಿಷ್ಮಾನೆಂಬೊ ನಾಮದೊಡಿಯ
ವಿಜಯವಿಠ್ಠಲನೆ ಅಚ್ಯುತ ಪದವಿಗರುಹಾ ನೀನೆ ॥ 2 ॥
ತ್ರಿವಿಡಿತಾಳ
ನಾ ಎಂದು ನುಡಿಯಲು ನಾನಾ ನರಕ ನಾಶ
ರಾ ಎಂದು ಪೇಳಲು ರಾಯ ಪದವಿಯಕ್ಕು
ಯ ಎಂದು ವರ್ಣಿಸಲು ಎಲ್ಲ ಕಾಲದಲ್ಲಿ
ಶ್ರೇಯಸ್ಸಿನಲ್ಲಿ ಆನಂದಕ್ಕೆ ಅಭಿವೃದ್ಧಿ
ಣಾ ಎಂದದರ ಫಲವಾರು ಪೇಳುವರಯ್ಯ
ಭೂವ್ಯೋಮ ಪಾತಾಳ ಮಧ್ಯದಲ್ಲಿ
ರಾಯಾ ಮಹಿಷ್ವಾಸಾ ವಿಜಯವಿಠ್ಠಲನ
ಗಾಯನ ಮಾಳ್ಪನ್ನ ಮತಿಗೆ ನಮೋ ನಮೋ ॥ 3 ॥
ಅಟ್ಟತಾಳ
ಪನ್ನಗ ಮಥನನ್ನ ಚನ್ನಾಗಿ ಮನದಲ್ಲಿ
ಸನ್ನಿಲಿಸಿಕೊಂಡು ಉನ್ನತ ಧ್ಯಾನವನು ಕೈಕೊಂಡ-
ವನ್ನ ಪುಣ್ಯಕ್ಕೆ ಸರಿಯನ್ನು ಪೇಳುವರಾರು
ಭಿನ್ನವಾಡಿದರೆ ಸುಣ್ಣಪುಡಿಯಲಿಟ್ಟು
ತಣ್ಣೀರು ಪೊಯಿಸುವನು ಪನ್ನಗ ಮಥನನ
ಚನ್ನಾಗಿ ಮನದಲ್ಲಿಡೆ
ಘನ್ನ ಪ್ರಜಾಪತಿ ವಿಜಯವಿಠ್ಠಲ ಸಂ -
ಪನ್ನ ನಾಮಕ್ಕೆ ಇನ್ನಾವದು ಸರಿ ॥ 4 ॥
ಆದಿತಾಳ
ಅಜ ಸುರ ದಿಕ್ಪಾಲಕಾ ಪ್ರಜೆ ಸುರ ಸಮುದಾಯ
ಗಜ ಅಜಮಿಳ ಪರಮಾ ಭಜಕರ ಮನೋಹಂಸಾ
ತ್ರಿಜಗವಂದಿತ ಪಂಕಜ ಪತಿ ಮಹಾ ಮಾಯಾ
ವಿಜಯವಿಠ್ಠಲರೇಯಾ ನಿಜವಾದ ಮಹಿಮಾ ॥ 5 ॥
ಜತೆ
ತೂಲವೆಂಬೊ ಪಾಪಕ್ಕೆ ಪಾವಕ ಹರಿನಾಮಾ
ತಿಳಿದು ಶ್ರೀಮತೆ ನಮ್ಮ ವಿಜಯವಿಠ್ಠಲ ನೊಲಿಸೆ ॥
************