ಕಾಖಂಡಕಿ ಶ್ರೀ ಮಹಿಪತಿರಾಯರು
ದತ್ತ ದತ್ತೆನ್ನಲು ಹತ್ತಿ ತಾಂ ಬಾಹನು ಚಿತ್ತದೊಳಾಗುವಾ ಮತ್ತ ಶಾಶ್ವತನು ದತ್ತ ಉಳ್ಳವನ ಹತ್ತಿಲೇ ಈಹನು ವೃತ್ತಿ ಒಂದಾದರೆ ಹಸ್ತಗುಡುವನು 1
ಎತ್ತ ನೋಡಿದರೆ ಮೊತ್ತವಾಗಿಹ ತಾಂ ಉತ್ತಮೊತ್ತಮತಾನೆತ್ತುತಾ ಈತಾ ಅತ್ತಲಿತ್ತಾಗದೆ ಹತ್ತಿಲೆ ಸೂಸುತ ಮುತ್ತಿನಂತಿಹ್ವನು ನೆಲಿಲೆ ಭಾಸುತಾ 2
ದತ್ತನೆಂದೆನ್ನಲು ಕತ್ತಲೆಣ್ಯೋಗುದು ಮೃತ್ಯು ಅಂಜುತಲಿ ಭೃತ್ಯನಾಗಿಹುದು ಉತ್ತಮರಿಗೆ ತಾ ಸತ್ಯ ಭಾಸುದು 3
ಒತ್ತಿ ಉನ್ಮನಿಯಾವಸ್ಥಿ ಯೊಳಾಡುವದು ಸ್ವಸ್ತಮನಾದರೆ ವಸ್ತು ಕೈಗೂಡುದು ಬಿತ್ತಿ ಮನ ಗುರುಭಕ್ತಿ ಮಾಡುವದು ದತ್ತ ತನ್ನೊಳು ತಾನೆವೆ ಭಾಸುವದು 4
ದತ್ತ ದತ್ತೆಂದು ತಾ ಅರ್ತ ಮಹಿಪತಿಯ ಬೆರ್ತ ನೋಡಿದ ಮನವು ಸುಮೂರ್ತಿಯು ಮರ್ತದೊಳಿದುವೆ ಸುಖವಿಶ್ರಾಂತಿಯು ಮರ್ತುಹೊಗುವದು ಮಾಯದ ಭ್ರಾಂತಿಯು 5
***