by yadugiriyamma
ಕರಿಗಿರಿವಾಸ ವರದರಾಜ ಕರಿಗಿರಿವಾಸ ಪ
ಕರಿಗಿರಿವಾಸನೆ ದುರಿತ ವಿನಾಶನೆ
ಸುರಮುನಿ ಪೋಷನೆ ಭವರೋಗ ನಾಶನೆ ಅ.ಪ
ಅಜನಯಾಗದಲಿ ಯಜ್ಞಕುಂಡದಲಿ ಉದಿಸಿ ಬಂದೆ
[ಭಜಕ] ಭಕ್ತರಿಗೆ ವರಗಳ ಕೊಡುತ್ತಲೆ ವರದ
ರಾಜನೆಂಬೊ ಬಿರುದು ಪೊತ್ತಿಹ ದೇವ 1
ಮಾಯೆಯ ಬಿಡಿಸೊ ನಿನ್ನಲಿ ಎನಗೆ ಮೋಹವ ನಿಲಿಸೊ
ಘೋರ ಸಂಸಾರದಾಸೆಯ ಬಿಡಿಸಿ ನಿನ್ನಯ
ಪಾದಧ್ಯಾನವನಿತ್ತು ಕಾಯೊ ವರದರಾಜ 2
ಚತುರಹಸ್ತದಲೀ ಕೈಪಿಡಿದು ದಿವ್ಯವಾದ ಶಂಖಚಕ್ರಗದೆಯಲಿ
ಮಾಯಪಾಶವನೆಲ್ಲ ಕತ್ತರಿಸಿ
ನಿಮ್ಮ ಪಾದವ ಸೇರಿಸು ಎನ್ನ ಚಿತ್ತಜಜನಕ 3
ಹಾ ಕೃಷ್ಣ ಎಂದು ದ್ರೌಪದಿ ಕರೆಯೆ ಮನಕೆ ನೀತಂದು
ಆ ಖಳ ವಸ್ತ್ರವ ಸೆಳೆಯಲು ಅಕ್ಷಯ ಮಾಡಿದೆ
ಪಕ್ಷಿವಾಹನ ಪಾಂಡವಪಕ್ಷ ಶ್ರೀಕೃಷ್ಣ 4
ಜನ್ಮ ಬಹಳದಲಿ ಬಳಲಿ ಬಂದೆ ಈ ಭೂಮಿಯಲಿ
ಇನ್ನು ನಾ ಜನಿಸಲಾರೆನೊ ಹೀನಜನ್ಮದಿ
ಮನ್ನಿಸಿ ರಕ್ಷಿಸೊ ಎನ್ನ ವರದರಾಜ5
ಭವಬಿಸಲಿನಲಿ ಬಳಲಿ ಬಂದೆ ತಾಪತ್ರಯದಲ್ಲಿ
ನಿಮ್ಮ ಚರಣ ಪಂಕಜವೆಂಬೊ ಆತಪತ್ರದ ನೆರಳ
ಸೇರಿಸೆನ್ನಯ ತಾಪ ದೂರ ಮಾಡಿಸೊ ದೇವ 6
ನಾಮಾಡಿದಂಥ ಪಾಪಗಳೆಲ್ಲ ಸಾವಿರ [ಅ]ನಂತ
ಎಣಿಸಿ ನೋಡಲು ಏನೂ ದಾರಿಯ ಕಾಣೆನು
[ಎನ್ನ] ಸರ್ವಾಪರಾಧವ ಕ್ಷಮಿಸಿ ರಕ್ಷಿಸೊ ದೇವ 7
ವಿಂದ್ಯಾರಣ್ಯದಲಿ ಭಕ್ತರು ಕರೆಯೆ ಬಂದೆ ಬೇಗದಲಿ
ಇಂದಿರೆ ಸಹಿತಾಲೆ ತೀರ್ಥವ ಗ್ರಹಿಸಿ ಭಕ್ತರ ಕರೆ
ತಂದು ಕರಿಗಿರಿಯಲಿನಿಂದ ವರದರಾಜ ಕರಿಗಿರಿವಾಸ 8
****