ಗೋಪಾಲಕೃಷ್ಣನ ಭಕ್ತಿಯಿಂದಲಿ ಭಜಿಸುವ
ನಮ್ಮ ಗುರು ವ್ಯಾಸಮುನಿರಾಯ ಪ.
ಹೇಸಿ ವಿಷಯಗಳಿಗೆ ಮೋಸ ಹೋದೆನು ನಾನು
ದೋಷ ರಾಶಿಗಳ ನಾಶಗೈಸೊ ಮನದ
ಭಿಲಾಷೆಗಳ ಪೂರೈಸೊ ಅ.ಪ.
ಹಿಂದೇಳ ಜನ್ಮಗಳು ಬಂದು ಪೋದವಯ್ಯಾ
ಇಂದು ವಸುಧಿಯೊಳಗೆ ಬಂದೆನಯ್ಯಾ
ಭವದೊಳಗೆ ನೊಂದೆನಯ್ಯಾ
ಬಹಳ ಬೆಂದೆನಯ್ಯ
ಅಘಕೂಪದೊಳು ಬಿದ್ದೆನಯ್ಯ
ಉದ್ಧರಿಸು ಜೀಯ್ಯಾ 1
ವಂದಿಸುವೆನು ನಿಮಗೆ ನವವೃಂದ ವನದಲಿ
ಇರುವೋರು ಇಂದಿರೇಶನ ನೋಡುವೋರು
ಆನಂದಪಡುವೋರು
ಸಿಂಧುಶಯನ ತಂದು ತೋರಿಸೋ
ಇಂದು ನಿಮ್ಮಯ ಪಾದವೊಂದೆ ಭಜಿಪೆ
ತಂದೆ ಮಾಡೆಲೊ ಸತ್ಕøಪೆ 2
ಯೆಷ್ಟು ಜನುಮದ ಪುಣ್ಯ ಫಲಿಸಿತು ಎನಗೆ
ವೈಷ್ಣವಾ ಜನ್ಮ ದೊರಕಿತು
ಕೊನೆಗೆ ದುಷ್ಟ ಸಂಗವಾ ದೂರದಿ ಮಾಡಯ್ಯ
ಶಿಷ್ಟ ಜನ ಸಂಗದೊಳಗೆನ್ನಿಡಯ್ಯಾ
ಅಭೀಷ್ಟಗಳ ನೀಡಯ್ಯ ಕಾಳಿಮರ್ಧನ
ಕೃಷ್ಣನ ತೋರಿಸಯಾ ಪಾಲಿಸಯ್ಯಾ 3
***