..
kruti by shreesha keshava vittala dasaru (subbanna dasa)
ಅಂತರಂಗದಿ ಹರುಷವಾಂತೆವೈ ಗುರುವೆ ಪ
ಸಂತಸದಿ ಸೇವೆಗಳ ಸ್ವೀಕರಿಸು ಪ್ರಭುವೆ ಅ.ಪ
ಮಂಗಳಾಂಗಿಯರೆಲ್ಲ ಮಿಂದು ಮಡಿಗಳನ್ನುಟ್ಟು |
ಮಂಗಳಾತ್ಮಕ ನಿನಗೆ ಮಜ್ಜನವ ಗೈಸೆ ||
ಅಂಗಳದಿ ದಧಿಕ್ಷೀರ ಘೃತಕುಂಭಗಳಧರಿಸಿ |
ಸಿಂಗರದಿ ನಿಂದಿಹರೊ ಗುರುರಾಘವೇಂದ್ರ 1
ಧಾರುಣೀಸುರರೆಲ್ಲ ಧೀರಯತಿವರ ನಿನಗೆ |
ಚಾರುವಿಭವದಿ ಕವಚ ಧಾರಣೆಯ ಗೈಸೆ ||
ಸೇರಿ ನುತಿಸುತೆ ನಿನ್ನ ಸಾರಗುಣ ಸಂಪನ್ನ |
ಸಾರಿಹರೊ ನಿನ್ನಡಿಗೆ ಗುರುರಾಘವೇಂದ್ರ 2
ನಿಂದು ಭೂಸುರರೆಲ್ಲಾ ಜಯಜಯ ಜಯವೆನಲು|
ಮಂದಹಾಸದಲವರ ಸೇವೆಯನು ಕೊಂಡೆ ||
ಇಂದು ಬೃಂದಾವನದಿ ನಿಂದು ದರ್ಶನವಿತ್ತೆ |
ಕುಂದದಿಷ್ಟವ ಸಲಿಸೊ ಗುರುರಾಘವೇಂದ್ರ 3
ಉಡುರಾಶಿಗಳ ಮಧ್ಯೆ ಉಡುಪ ಮೆರೆಯುವ ತೆರದಿ |
ಉಡುಗಣಿಕ್ಷೇತ್ರದೊಳು ನಿಂದು ಮೆರೆದೆ ||
ಕಡುಮಮತೆಯಲಿ ನಿನ್ನ ಸಡಗರದಿ ಸೇವಿಪರ |
ಎಡರುಗಳ ಪರಿಹರಿಸೊ ಗುರುರಾಘವೇಂದ್ರ4
ನರಹರಿಯ ಮೆಚ್ಚಿಸಿದೆ ಪ್ರಹ್ಲಾದನೆನಿಸುತಲೆ |
ಸಿರಿಕೃಷ್ಣನೊಲಿಸಿದಿಯೊ ವ್ಯಾಸಮುನಿ ||
ಸಿರಿರಾಮಚಂದ್ರಪ್ರಿಯ ಗುರುರಾಘವೇಂದ್ರನೆ |
ಕರುಣದಲಿ ತೋರೀಗ ಶ್ರೀಶಕೇಶವನ5
***