ರಾಗ: [ಮಧುವಂತಿ] ತಾಳ: [ಆದಿ]
ಏನು ಚಿಂತಿಪೆ ನೀನು ಬರಿದೆ ಜೀವ
ಸಾನುರಾಗದಿ ಕಾಯೊ ರಾಘವೇಂದ್ರರು ಇಹರು ಪ
ತಂಡ ತಂಡದಿ ಬರುವ ಭಕ್ತಜನರಘವ
ತೋಂಡವತ್ಸಲನ ಕರುಣಿಪರು ತ್ವರದಿ
ಖಂಡಿಸುತ ದುರ್ವಾದಿಗಳ ಮತವ
ಬಂಡಿಕಾಲನು ಪಿಡಿದ ಶ್ರೀಕೃಷ್ಣನ ದಯದಿ 1
ಮುನ್ನ ಮಾಡಿದ ಅಘವ ತರಿದು ಜವದಲಿ ತಾವು
ಅನ್ನದಾನವ ಮಾಡಿ ಹರಿಗೆ ಅರ್ಪಿಸುತಿಹರು
ಘನ್ನ ಭೀತಿಯ ಬಿಡಿಸಿ ಚೆನ್ನಾಗಿ ಸಂತೈಸಿ
ಚಿನ್ನದಂತಹ ಸುತರ ಕರುಣಿಪರು ತ್ವರದಿ 2
ಕಾಮಕ್ರೋಧಾದಿಗಳ ಗೆಲಿಸುವರು ಬೇಗದಲಿ
ನಾಮಸ್ಮರಣೆಯ ಈವ ಕರುಣಿಗಳು ನೋಡು
ಧಾಮ ಶ್ರೀ ಹರಿ ತೋರುತಲಿ ಸುಜನರಿಗೆ ಗುರು
ಶ್ಯಾಮಸುಂದರನ ನಿಜ ಭಕ್ತರಿರಲು 3
****