Showing posts with label ವಸುದೇವ ಅತ್ರಿಸುತಪ vijaya vittala ankita suladi ವೆಂಕಟೇಶ ಸುಳಾದಿ VASUDEVA ATRISUTAPA VENKATESHA SULADI. Show all posts
Showing posts with label ವಸುದೇವ ಅತ್ರಿಸುತಪ vijaya vittala ankita suladi ವೆಂಕಟೇಶ ಸುಳಾದಿ VASUDEVA ATRISUTAPA VENKATESHA SULADI. Show all posts

Sunday 8 December 2019

ವಸುದೇವ ಅತ್ರಿಸುತಪ vijaya vittala ankita suladi ವೆಂಕಟೇಶ ಸುಳಾದಿ VASUDEVA ATRISUTAPA VENKATESHA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀ ವೆಂಕಟೇಶ ಸುಳಾದಿ 

 ರಾಗ ನಾದನಾಮಕ್ರಿಯಾ 

 ಧ್ರುವತಾಳ 

ವಸುದೇವ ಅತ್ರಿಸುತಪ ಜಮದಗ್ನಿ ವಿಶಾಲಾ 
ದಶರಥ ಪರಾಶರ ಕರ್ದಮ ಶುಭಾ 
ವಿಶಜ ಕರ್ದಮನಾರಿ ಯಮಧರ್ಮ ರುಚಿ ವಿಷ್ಣು 
ಯಶ ಪ್ರಿಯವೃತ ಬ್ರಹ್ಮದೇವ ಗುಂಹ್ಯಾ 
ವಶು ನಂಬೋ ದೋಷ ವೇದ ಶಿರ ಆಯುಷ್ಮ ಅರ್ಯಕ 
ಬೆಸಸುವೆ ಇವರ ತರುವಾಯದಲ್ಲಿ ಮತ್ತೆ 
ಪ್ರಸನಿ ದೇವಕಿ ಸತ್ಯವತಿ ರೇಣುಕ ಕೌಸಲ್ಯಾ 
ವಿಶಿಚು ವಿಕುಂಠ ಅವಿತಿ ಆಕುತಿ ಅನಸೂಯಾ 
ತುಷಿತ ಶಾರ್ವಾದಿ ಮೇರು ಸಂಭೂತಿ ಸರಸ್ವತಿ 
ಮಿಸುಣಿಪ ದೇವಹುತಿ ಅಂಬುಧರ ವೈಧೃತ 
ಕುಶಲ ಸುಕೃತ ಬ್ರಹತಿ ವೀತಾದ್ಯರು 
ವಸುಧಿಯೊಳಗೆ ಏಸು ಪುಣ್ಯಮಾಡಿದರೊ 
ಎಣಿಸಲಾರರು ಮಹಾಜ್ಞಾನಿಗಳೂ 
ಅಸಮಾ ದೈವಾವೆ ನಿನ್ನ ವೊಲಿಸಿಕೊಂಡು ಬಿಡದೆ 
ಶಿಶುವು ಮಾಡಿಕೊಂಡರು ಆಡಿಸುತ್ತಾ 
ಹಸಿವೆ ನೀರಡಿಕೆ ತೊರದು ತಲೆಕೆಳಗಾಗಿ ಬೇವೊ 
ಬಿಸಲೊಳು ಕುಳಿತು ತಪಿಸಿದ ಕಾಲಕ್ಕೂ 
ಬಿಸಿಜನಾಭನೆ ನಿನ್ನಾಸುಳುವು ಕಾಣಾರು ಎಲ್ಲಿ 
ಹಸುಳೆಯಾದದೆಂತೊ ಇವರಿವರಿಗೆ 
ಬಿಸಿಜಾಕ್ಷ ಲಕುಮಿ ನಿನ್ನ ಮಾತಿಗೆ ಮರುಳಾಗಿ ಮಾ -
ನಿಸದಲ್ಲಿ ಕಾಣಳು ಅರಸಿ ಅರಸೀ 
ಶಶಿಕೋಟಿಲಾವಣ್ಯ ವಿಜಯವಿಟ್ಠಲ ಶೇಷ 
ವಸುಮತಿಧರ ತಿರುವೆಂಗಳೇಶ ॥ 1 ॥

 ಮಟ್ಟತಾಳ 

ಬಲರಾಮನು ನಿನಗೆ ಅಣ್ಣನಾದನು ನೋಡಾ 
ಫಲ್ಗುಣ ನಿನ್ನ ಸೂತನ ಮಾಡಿಕೊಂಡ 
ಕುಲದವರಾಗಿ ಯಾದವ ಜನರೆಲ್ಲ 
ನಲಿನಲಿದು ನಿನ್ನಾ ಕೂಡ ಉಂಡರಲ್ಲಾ 
ಗೆಳೆಯರೆಂದೆನಿಸಿದ ಗೋಪಾಲಕರಂದು 
ಗೆಲವು ಸೋಲಾಟಗಳು ನಿನ್ನನೊಡನಾಡಿದರು 
ಇಳಿಯೊಳಗೆ ಇವರ ಸುಕೃತವೇನೆಂಬೆ 
ಕಲಕಾಲ ಗುಣಿಸಿ ಎಣಿಕೆ ಮಾಡಿದರಾಗಿ 
ನೆಲಯಗಾಣುವರಾರು ನಿನ್ನ ಕಾಂಬುವದಕ್ಕೆ 
ಸುಳಿವ ಮಿಂಚಿಗೆ ನರನ ಪ್ರಯತ್ನಗಳುಂಟೆ 
ಜಲಜನಾಭನೆ ನೀನೆ ಸ್ವಾಭಾವಿಕತನದಿ 
ಒಲಿದಾದಲ್ಲದೆ ಮತ್ತೆ ಒಂದು ಕಾರಣವಲ್ಲ 
ಸುಲಭ ಗಿರಿ ವೆಂಕಟ ವಿಜಯವಿಠಲರೇಯ 
ಘಳಿಸಿದ ತಪೋಧನವೆ ಭಕ್ತರ ಕುಲಕೋಟಿಗೆ ॥ 2 ॥

 ತ್ರಿವಿಡಿತಾಳ 

ಗೋಪಿಕಾ ಸ್ತ್ರೀಯರು ಹದಿನಾರು ಸಾವಿರ 
ಭೂಪಾಲಕರ ಮಕ್ಕಳು ಹಗಲಿರಳು 
ಶ್ರೀಪತಿ ನಿನ್ನೊಡನೆ ನೆರದರಂದೂ ಬಿಡದೆ 
ವ್ಯಾಪಾರದಲಿ ಮನಸು ತೆಗೆಯದಲೆ 
ಭೂಪ ಉಗ್ರೇಸನ ಸಮುಖನ್ನ ಮಾಡಿದ 
ಆಪಾರ ಮಹಿಮ ಅನುರೂಹವಂದ್ಯನೆ 
ದ್ರೌಪದಿ ಸೊಲ್ಲಿಗೆ ನೀಪೋದದೆಂತೊ 
ನಾಪೇಳಲಾಪೆನೊ ನಿನ್ನ ಕರುಣ 
ರೂಪ ಹೀನಳಾದ ಕುಬುಜಿ ನಿನ್ನ ರಮಿಸಿ 
ತಾ ಪ್ರೀತಿಯಾದ ನುಡಿ ಪೊಂದುವದೆತ್ತ 
ಪಾಪರಹಿತ ಪರಿಪೂರ್ಣ ಸುಖಾತ್ಮಕ 
ಈ ಪರಿ ಇದ್ದವರ ಭಾಗ್ಯವೇನು 
ಭಾಪುರೆ ಇವರಿವರ ತಪಸಿಗೆ ಈ ಫಲವೆ 
ವ್ಯಾಪುತಾ ದೈವವೆ ನೀನೆ ಬಲ್ಲೀ 
ದೀಪಕ್ಕೆ ಸರ್ವ ಬ್ರಹ್ಮಾಂಡ ಕಾಣಿಸಿದಂತೆ 
ನೀ ಪ್ರೇಮದಿಂದ ಮೆಚ್ಚಿದಿಯಲ್ಲಾದೆ 
ಸುಪರ್ನಗಿರಿರಾಯಾ ವಿಜಯವಿಟ್ಠಲ ವೆಂಕಟ 
ತಾಪಸಿಗಳಿಗೆ ಮೈದೋರದ ಧೊರಿಯೆ ॥ 3 ॥

 ಅಟ್ಟತಾಳ 

ಪಶುವಿಂಡು ಗೋಪಾಲಕರು ನಂದ ವೃಜ 
ವಸುಧಿ ಎಲ್ಲಾವೆ ಸುಸಾಧನ ಗೈದಿದರೊ 
ಹಸುಗೂಸುಗಳೆಲ್ಲಾ ನಿನ್ನಂತೆ ಮಾತಾಡಿ 
ದಿಶಿದಿಶಿಗೆ ಬಾಲಾಟ ಕಲಿತರಲ್ಲೊ 
ಮೊಸರು ಪಾಲು ತುಪ್ಪಾ ಬೆಣ್ಣೆ ತುಂಬಿದ ಭಾಂಡಾ 
ಹೃಷಿಕೇಶಾ ನಿನ್ನ ಹಸ್ತಗಳ ಸ್ಪರ್ಶಾ 
ಮಿಸಕದಲೆ ಆಯಿತು ಈ ಜಡಗಳ ಪುಣ್ಯಾ 
ಶಶಿಧರಗಾದರು ಸೋಜಿಗವಯ್ಯಾ 
ಉಸರಲೇನು ಮುನ್ನೆ ಗೋಪ ಪಳ್ಳಿಯೊಳಿದ್ದ 
ಕಸಕುಪ್ಪಿಸಹವಾಗಿ ಧನ್ಯ ಮಹಾಧನ್ಯ 
ಬಿಸಿಜ ಸಂಭವನ ಲೋಕಕಿಂತಧಿಕ ರಂ -
ಜಿಸುವದು ನೀನವತಾರನಾಗೆ 
ಬೆಸಸೀದ ಮಾತುಗಳಂತಿರಲಿ ಸರ್ವಕ್ಕು 
ಯಶೋದಾ ದೇವಿ ನೊಪೀಯಂತೊ ಯಂತೊ 
ದಶರಥ ಮೊದಲಾದ ಋಷಿಗಳಲ್ಲಿ ಜ -
ನಿಸಿದ ಕಾಲಕೆ ದೇವಾ ನಿನ್ನ ಕೂಡಾಡಿದಾ 
ಅಸುಗಳು ಏನು ಪುಣ್ಯ ಮಾಡಿದರೊ 
ವೃಷಭಗಿರಿಯ ವಾಸ ವಿಜಯವಿಟ್ಠಲ ವೆಂಕಟ 
ಅಸಮ ದೈವವೆ ನಿನ್ನ ಕರುಣತನ ಎಂತೊ ॥ 4 ॥

 ಆದಿತಾಳ 

ಇದು ಎಂತಿರಲಿ ಇಂದಿನ ದಿನದಲ್ಲಿ 
ಪದುಮನಾಭನೆ ಸಮ್ಮೊಗವಾಗಿ 
ಹೃದಯಾಕಾಶಾದಿ ನಿನ್ನ ಮೂರುತಿ ಇಟ್ಟು 
ಒದಗಿ ಗಾಯನ ನೃತ್ಯ ನಾನಾ ಪರಿಸೇವೆ 
ಮುದದಿಂದ ಮಾಡುವ ನಿಜಶರಣರ ಪುಣ್ಯ 
ಉದಯಾಸ್ತಮಾನವು ಎಣಿಸೆವುಂಟೇ 
ಇದೆ ಇದೆ ಸಿದ್ಧವೊ ಕೃತಾದಿಯುಗದಲ್ಲಿ 
ಪದೊಪದಿಗೆ ತುಂಬಿಹರೊ ಇಲ್ಲಿ 
ವಿಧು ಮೊಗಾ ಇವರೆಲ್ಲ ನಾನಾ ತಪಸುಮಾಡಿ 
ಚದುರತನದಿಂದ ಒಲಿಸಲಿಲ್ಲ 
ಮದನ ಜನಕ ನೀನೆ ಅನುಕಂಪನಾಗಿ ವೊ -
ಲಿದೆ ಎಲ್ಲದೆ ಮತ್ತೊಂದು ಇಲ್ಲಾ 
ಉದಯಗಿರಿಯವಾಸ ವಿಜಯವಿಟ್ಠಲ ವೆಂಕಟ 
ಅದುಭೂತ ದೈವಾವೆ ಬಹುವಿಧ ಚರಿತಾ ॥ 5 ॥

 ಜತೆ 

ಮನಸು ಬಂದಂತೆ ಮಹಾಮಹಿಮೆ ತೋರುವ ದೇವ 
ಅನಿಮಿಷಾ ಗಿರಿವಾಸ ವಿಜಯವಿಟ್ಠಲ ವೆಂಕಟ ॥
********