Audio by Vidwan Sumukh Moudgalya
ಶ್ರೀ ವಿಜಯದಾಸಾರ ಶಿಷ್ಯ - ಪ್ರಶಿಷ್ಯರ ಪರಂಪರೆಯಲ್ಲಿ ಬರುವ
ಶ್ರೀ ಶ್ರೀಪತಿವಿಠ್ಠಲದಾಸಾರ್ಯ ವಿರಚಿತ
ದ್ರೌಪದಿ ದೇವಿ ತನ್ನ ಮಾನಸಂರಕ್ಷಣೆಗೆ ಶ್ರೀಕೃಷ್ಣನನ್ನು ಪ್ರಾರ್ಥಿಸಿದ ಪದ
ರಾಗ : ಶುಭಪಂತುವರಾಳಿ ಆದಿತಾಳ
ರಕ್ಷಿಸೋ ಕೃಷ್ಣಯ್ಯಾ ಎನ್ನ ರಕ್ಷಿಸೋ ಕೃಷ್ಣಯ್ಯ॥ಪ॥
ರಕ್ಷಿಸೆನ್ನ ಕಮಲಾಕ್ಷನೆ ಕರುಣ ಕಟಾಕ್ಷದಿ
ಈಕ್ಷಿಸುಪೇಕ್ಷ ಮಾಡದೆ॥ಅ.ಪ॥
ಅಬುಜಭವಾಂಡದಿ ಪ್ರಭು ಎಂದು ನೀ
ನಿನಗಭಿವಂದಿಪೆ ಎನಗಭಯ ಪಾಲಿಸೈ
ಇಭರಾಜವರದ ಶುಭತಮಚರಿತ ಈ
ಕುಭಾವಜ್ಞ ಜನ ಸಭಾಮಧ್ಯದಿ॥೧॥
ದುರುಳ ಎನ್ನನು ಶರಗು ಪಿಡಿದು ಬಲು
ಕರ ಕರೆಗೊಳಿಸುತ್ತಿರುವನ ಹರಿಯೆ
ಅರಿತವಳಲ್ಲೀ ಪರಿಭವಣೆ ಯದು-
ವರನೆ ದ್ವಾರಕಾಪರ ಮಂದಿರನೇ॥೨॥
ಭಂಡ ಎನ್ನನು ಕೊಂಡೈನೆರದು
ಹಿಂಡು ಮಂದಿಯೊಳ್ ಭಂಡು ಮಾಳ್ಪೆನೆಂದ
ಅಂಡಲಿಯುತಿಹೆ ಮಂಡೆಬಾಗಿ ಬೊಮ್ಮಾಂಡ
ಬೊಮ್ಮಾಂಡದೊಡಿಯ ಕೇಳ್ ಪಾಂಡವ ಪ್ರೀಯಾ॥೩॥
ಪತಿಗಳು ಇವರು ಚ್ಯುತ ಬಲರಾದರು
ಕ್ಷಿತಿಯೊಳು ನಿನಗೆ ಸಮ್ಮತದಾವದು ಅದು
ಹಿತವೆಂದರಿತು ಸುಮ್ಮನೆ ಕುಳಿತಹ್ಯರೂ
ಕೃಷ್ಣಾ ರತಿಪತಿ ಭಾರತೀಪ್ರೀಯಾ॥೪॥
ಅನ್ಯನಲ್ಲ ಎನಗಣ್ಣ ನೀನು ಸಂ-
ಪನ್ನ ತ್ರಿಜಗನ್ಮಾನ್ಯ ಮಾನದಾ
ಆಪನ್ನರಕ್ಷಕಾರುಣ್ಯಾಂಬುಧೆ ಈ ಬನ್ನಾ ಈ
ಬನ್ನ ಬಡಿಸುವದು ನಿನ್ಹೊರತುಂಟೇ॥೫॥
ಮಂಗಳ ಮಹಿಮಾ ಶುಭಾಂಗ ಸೌಖ್ಯದ
ನಂಗ ಜನಕ ಕಾಳಿಂಗ ಮಥನ
ತುಂಗ ವಿಕ್ರಮ ಭುಜಂಗಗಿರಿ ನಿಲಯ
ರಂಗನೇ ಈ ಶ್ರಮ ಹಿಂಗಿಸು ಮುದದೀ॥೬॥
ಶ್ರೀಪದ್ಮಜಭವರಾಪತ್ತಿಗನೆಂದು
ಈ ಪರಿತಿಳಿದು ನಾ ಪಡುಮಡುವೇ
ನೀ ಪಾಲಿಸು ಬಂದಾಪತ್ತು ಕಳೆದು
ಶ್ರೀಪತಿವಿಠ್ಠಲ ಸುರಾಪಗೆ ಪಿತಾ॥೭॥
***