ankita ತಂದೆವೆಂಕಟೇಶವಿಠಲ
ರಾಗ: ಉದಯ ತಾಳ: ವಾರ್ಧಿಕ ಷಟ್ಪದಿ
ಶ್ರೀ ರಾಘವೇಂದ್ರಾ ನಮೋ ಪ
ಶ್ರೀ ರಾಘವೇಂದ್ರ ಮಧ್ವಾಗಮಾಂಬುಧಿಚಂದ್ರ
ಶ್ರೀ ರಾಘವೇಂದ್ರ ಹೃದ್ರೋಗಹರಭಿಷಗೇಂದ್ರ
ಶ್ರೀ ರಾಘವೇಂದ್ರ ಮಂತ್ರಾಗರಾದ್ಭುತಚರಿತ ಯೋಗೀಂದ್ರ ಕುಮುದಚಂದ್ರ ಅ.ಪ
ಆದಿಯಲಿ ಪ್ರಹ್ಲಾದನಾದಶಾಶ್ಯಾವರಜ
ಯೋಧ ಪ್ರತೀಪಭವ ಭೂದೇವ ವ್ಯಾಸಮುನಿ-
ಯಾದಿ ವಿವಿಧತ್ವದಲಿ ಶ್ರೀಧವಾರ್ಚನೆಗೈದು ಮೋದಾಭಿವೃದ್ಧಿಗಾಗಿ
ವೇದವಿದ್ಯಾವಿಭವನಾದ ಬ್ರಹ್ಮೋಪಾಸ-
ನಾದಿ ಸತ್ಕರ್ಮ ಪರವಾದಿನಿಗ್ರಹ ಪೂರ್ಣ-
ಬೋಧಸಮಯ ಸಮಗ್ರ ಸಾಧಿಸಿದ ಸದ್ವೈಷ್ಣವೋದರದಿ ಜನಿಸ ಬಯಸಿ 1
ಕುಂಭಕೋಣದಿ ಶ್ರೋತ್ರಿಯಾಂಬರದಿನೇಶನಹ
ತಿಂಭಟ್ಟನಾತನ ನಿತಂಬಿನಿಯ ಗರ್ಭಾಮೃ-
ತಾಂಬುನಿಧಿಯಲ್ಲಿ ಶಶಿಬಿಂಬದಂತಖಿಳಗುಣಸಂಭಾವಿತನು ವೇಂಕಟ-
ನೆಂಬ ನಾಮದಿ ಜನಿಸಿ ಶಂಭುವೊಲು ವೇದಾಂತ
ಗುಂಭಪ್ರಕರಣಗಳ ಗಂಭೀರಭಾವವನು
ತುಂಬುಸಭೆ ವಿದುಷನಿಕರುಂಬ ಸಲೆಮೆಚ್ಚುವವೊಲಿಂಬಾಗಿ ಅಭ್ಯಸಿಸಿದ 2
ಗುರುಸುಧೀಂದ್ರರ ಪರಮಕರುಣಾಕಟಾಕ್ಷಕ್ಕೆ
ಸರುವವಿಧದಲಿ ಪಾತ್ರತರನಾಗಿ ಮತರಾಜ್ಯ
ಸರಸತೀಪೀಠವಾರುಧಿರ ಫಾಲ್ಗುಣ ಶುದ್ಧವೆರಡನೇದಿನವೇರಿದ
ಮರುತಸಮಯಸುಸಾರವರವಿಹಾಯಸದಲ್ಲಿ
ಸ್ಫುರದಚೌಷಷ್ಠಿಕಲೆಪರಿಪೂರ್ಣಚಂದ್ರಮನ
ಪರಮಸುಕೃತೋದಯವು ಅರರೆ ನೋಳ್ಪರ ಪುಣ್ಯ ಕರತಲಾಮಲಕಪರವು 3
ಆಸೇತುನೀಹಾರ ವಾಸ ಸ್ಥಳಾಂತವಿಹ
ವಾಸುಕೀಶಯನಮಹಿಮಾಶ್ರಯಸ್ಥಾನವೆಂ-
ಬಾ ಸಮಸ್ತಕ್ಷೇತ್ರವಾಸಿಯಾಗ್ಯೆದುರಾಂತ ಸಾಸಿರಾಧಿಕಾವೈದಿಕ
ಆಸುರೀಪ್ರಕ್ರಿಯೋಪಾಸಕರ ನಿಗ್ರಹಿಸಿ
ಶ್ವಾಸಪತಿಸನ್ಮತೋಪಾಸನೆಯ ಕರುಣಿಸಿ ಪ್ರ-
ಕಾಶಿಸಿದ ಪರಿಮಳಾಚಾರ್ಯ ಮುಕ್ತಾವಳೀ ಭಟ್ಟ ಭಾಷಾರ್ಯನೆನಿಸಿ 4
ಹುಡುಗನಿಗೆ ಅಸುವಿತ್ತು ಹಡೆವಳಿಗೆ ಜಲವಿತ್ತು
ಹಿಡಿಮಾತ್ರಮಣ್ಣಿನಲಿ ಬಡವನಿಗೆ ನಿಧಿ ತೋರಿ
ಕಡು ಗರ್ವಿಯವಘಡಿಸಿ ಕೆಡಕಿನರಪನನೊಲಿಸಿ ಪೊಡವಿಪನ ಮಾನ ಉಳಿಸಿ
ತೊಡವು ಸುಡದಲೆ ತೆಗಿಸಿ ಕೊಡುವುದನು ಸ್ವೀಕರಿಸಿ
ಅಡಿಭಜಿಪರಘ ಹರಿಸಿ ನುಡಿಸತ್ಯವನು ಮೆರೆಸಿ
ದೃಢಭಕ್ತಿಯನು ಬಲಿಸಿ ಕಡುಜ್ಞಾನನಿಧಿಯೆನಿಸಿ ಪೊಡವಿಯಲಿ ರಾಜಿಸಿದನು 5
ಹಿಂದೆ ಕೃತೆಯಲಿ ಕ್ರತುವನೊಂದಿ ಮಾಡಿದ ಕೋಲ-
ನಂದನೆಯ ತೀರದಿಹ ಸುಂದರಮಂತ್ರಾಲಯದಿ
ಸಂದ ಸುವಿರೋಧಿಪರಶ್ರಾವಣ ದ್ವಿತೀಯ ಭೃಗುಜಾಖ್ಯ ಶುಭ ವಾರದಿ
ತಂದೆ ಗುರು ಏನು ಗತಿ ಎಂದೆನುತ ದೈನ್ಯದಲಿ
ಹೊಂದಿ ಸ್ತುತಿಸುವ ಧರಣಿಬೃಂದಾರಕರ ನೃಪರ
ಸಂದೋಹಕಭಯ ನಲವಿಂದೋರಿ ಸಶರೀರ ಬೃಂದಾವನಸ್ಥನಾದ 6
ಶತಸಪ್ತವರ್ಷವಾಹುತರಾಗಿ ಇಪ್ಪರಿ-
ಲ್ಲತಿಶಯಗಳಾಗುವುವು ಗತಿದೋರಿ ಸರ್ವರಿಗೆ
ಪ್ರತಿಥನಾಗುವ ಸತ್ಯವತಿಪುತ್ರ ನರಸಿಂಹ ಕ್ಷಿತಿಜೆಧವ ಶ್ರೀಕೃಷ್ಣರು
ಪ್ರತಿಯಿಲ್ಲದಂತೆ ಸನ್ಹಿತರಾಗಿ ಬಂದವರ
ಮತಿಘರುಷವಿತ್ತಿವರ ವಿತತಯಶ ಮಾಡುವರು
ಚ್ಯುತಿಯಿಲ್ಲ ಪುರುಷಾರ್ಥಪ್ರತತಿಗಾಕರ ಸ್ವರ್ಗಕತಿಶಯವು ಮಂತ್ರಾಲಯ 7
ಸಾಧಕರ ಹೆಧ್ಯೇಯ ಸಾಧುಸಂಕುಲಗೇಯ
ಬೋಧಕರಿಗಮರಗುರು ಪಾದಶ್ರಿತಕಲ್ಪತರು
ವಾದಿಗಳ ಹೃಚ್ಛೂಲ ವೇದಾಂತಕುಲಕಪಿಲ ಮಾಧವಾರಾಧನಪ್ರಶೀಲ
ಖೇದ ಕಲ್ಮಶರಹಿತನಾದ ವಿದ್ಯಾಭರಿತ
ಬಾದರಾಯಣ ಪೂರ್ಣಬೋಧಮತ ವಿಸ್ತರಣ
ಭೋ ದಯಾಂಬುಧೆ ಸಾಧ್ಯಮಾದಪುದೆ
ಬಣ್ಣಿಸಲಗಾಧವೈಸಲೆ ಮಹಿಮೆಯು 8
ಅರುಣೋದಯದಲೆದ್ದು ಕರಣಶುದ್ಧಿಗಳಿಂದ
ಸ್ಮರಣ ಕೀರ್ತನಪುರಶ್ಚರಣ ಮಾಡಿದರಾಗೆ
ಕರುಣಾಳು ತಂದೆವೆಂಕಟೇಶವಿಠಲ ಸ್ವಾಮಿ ಭರಣಮಾಡುವ ಸೌಖ್ಯದಿ
ಮರಣಭಯ ತಪ್ಪುವುದು ಕರುಣಾಳು ಪ್ರತ್ಯಕ್ಷ
ಕರಣಗೋಚರನಾಗಿ ಸ್ಫುರಣ ಮಾಡುವಜ್ಞಾನ
ತರಣವಾಗುವುದು ವೈತರಣಿವಾಹಿನಿಯಿಂದ ನೆರೆನಂಬಿದವನೆ ಮುಕ್ತ 9
***
ಭಿಷಗೇಂದ್ರ=ಶ್ರೇಷ್ಠ ವೈದ್ಯ; ದಶಾಶ್ಯಾವರಜ=
ರಾವಣನ ತಮ್ಮ ವಿಭೀಷಣ; ಸಮಯ=ಮತ;
ಶ್ರೋತ್ರಿಯಾಂಬರ=ವೇದಾಧ್ಯಯನ ಮಾಡಿದವರೆಂಬ
ಆಕಾಶದಲ್ಲಿ; ಶಂಭುವೊಲು=ರುದ್ರನಂತೆ; ಗುಂಭ=ರಹಸ್ಯ;
ರುಧಿರ=ಅರವತ್ತು ಸಂವತ್ಸರಗಳಲ್ಲೊಂದು; ಚೌಷಷ್ಠಿ
ಕಲೆ=64 ಕಲೆಗಳು; ಕರತಲಾಮಲಕಪರವು=ಅಂಗೈ
ನೆಲ್ಲಿಕಾಯಂತೆ; ಎದುರಾಂತ=ಎದುರಾದ;
ಸಾಸಿರಾಧಿಕಾವೈದಿಕ=ಸಾಸಿರಕ್ಕೂ ಮೀರಿದ ಅವೈದಿಕ;
ಶ್ವಾಸಪತಿ=ಪ್ರಾಣದೇವರು, ವಾಯುದೇವರು;
ತೊಡವು=ಆಭರಣ; ಸತ್ಯವತಿಪುತ್ರ=ವೇದವ್ಯಾಸರು;
ಕ್ಷಿತಿಜೆಧವ=ಭೂಮಿಪುತ್ರಿಯಾದ ಸೀತೆಯ ಪತಿ-ಶ್ರೀರಾಮ;
ಪ್ರತತಿಗಾಕರ=ಪುರುಷಾರ್ಥ ಸಾಧನೆಗೆ ಸೂಕ್ತವಾದ ಸ್ಥಳ;
ಹೃಚ್ಛೂಲ=ಹೃದಯಕ್ಕೆ ಶೂಲ; ಪ್ರಶೀಲ=ಉತ್ಕøಷ್ಟ ಶೀಲ;
ಸಾಧ್ಯಮಾದಪುದೆ=ಸಾಧ್ಯವಾಗುವುದೆ (ಬಣ್ಣಿಸಲು);
ಭರಣ=ರಕ್ಷಣೆ; ಸ್ಫುರಣ=ಹೊಳಪು;
ತರಣವಾಗುವುದು=ಪಾರಾಗುವುದು;