Showing posts with label ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ purandara vittala. Show all posts
Showing posts with label ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ purandara vittala. Show all posts

Friday, 6 December 2019

ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ purandara vittala

ರಾಗ - ಸೌರಾಷ್ಟ್ರ ಅಷ್ಟತಾಳ

ಎಚ್ಚರಿಕೆ ಭಾಗ್ಯ ಯಾರಿಗೂ ಸ್ಥಿರವಿಲ್ಲ, ನಿಶ್ಚಯವೆಚ್ಚರಿಕೆ
ಹೆಚ್ಚದೆ ಹಿಗ್ಗದೆ ಇದ್ದರೆ ಲೋಕಕೆ ಮೆಚ್ಚು ಕೇಳೆಚ್ಚರಿಕೆ ||ಪ||

ದೊರೆಗಳೊಲುಮೆ ಉಂಟೆಂದು ಎಲ್ಲರೊಳು ಹಗೆ ತರವಲ್ಲ, ಎಚ್ಚರಿಕೆ
ಕರವ ಮುಗಿದು ಸಜ್ಜನರಿಗೆ ಶಿರ ಬಾಗಿ ನಡೆಯುವುದು, ಎಚ್ಚರಿಕೆ ||೧||

ಸಿರಿಯೆಂಬ ಸೊಡರಿಗೆ ಮಾನದ ಅಭಿಮಾನ ಬಿರುಗಾಳಿ, ಎಚ್ಚರಿಕೆ
ಧರೆಯೊಳಗೆ ಸುಸ್ಥಿರವೆಂದು ಗರ್ವದೊಳು ನಡೆಯದಿರು ಎಚ್ಚರಿಕೆ ||೨||

ಕೊಡವ ಅಂಧಕ ಹೊತ್ತು ನಡೆವಧಿಕಾರದಿ ನೆರೆ ತಪ್ಪುದೆಚ್ಚರಿಕೆ
ಬಡವರೆಡರ ಕೇಳದೆ ಮುಂದಕೆ ಹೆಜ್ಜೆ ಇಡಬೇಡ , ಎಚ್ಚರಿಕೆ ||೩||

ಲೋಕಾಪವಾದಕೆ ಅಂಜಿ ನಡೆಯುವುದು ವಿವೇಕ , ಕೇಳೆಚ್ಚರಿಕೆ
ನಾಕೇಶನಾದರು ಬಿಡದಪವಾದ ಪರಾಕು , ಕೇಳೆಚ್ಚರಿಕೆ||೪||

ಕಾಕು ಮನುಜರ ಚಾಡಿಯ ಕೇಳಿ ಕೋಪೋದ್ರೇಕ ಬೇಡೆಚ್ಚರಿಕೆ
ಭೂಕಾಂತೆ ನಡುಗುವಳು ನಿಷ್ಠುರದ ವಾಕು ಬೇಡೆಚ್ಚರಿಕೆ ||೫||

ನಳಮಾಂಧಾತರೇನಾದರೆಂಬುದ ನೀ ತಿಳಿದು ನೋಡೆಚ್ಚರಿಕೆ
ಅಳಿವುದು ಕಾಯವು, ಉಳಿವುದಲ್ಲದೆ ಕೀರ್ತಿ ಇಳೆಯೊಳೆಚ್ಚರಿಕೆ ||೬||

ಅಳಲಿಸಿ ಪರರನು ಗಳಿಸಿದ ಹೊನ್ನು ಉಳಿಯದು , ಎಚ್ಚರಿಕೆ
ಉಳಿದಲ್ಪಕಾಲಕೆ ಬಡವರಾದವರನ್ನು ಹಳಿಯದಿರೆಚ್ಚರಿಕೆ ||೭||

ಪರಧನ ಪರಪತ್ನಿಗಳಿಗಳುಕಲು ಸಿರಿಮೊಗ ತಿರುಗುವಳೆಚ್ಚರಿಕೆ
ಬರುವ ಹಾನಿ ವೃದ್ಧಿ ತನ್ನ ಕಾಲ ಮೀರಲರಿಯದು ಎಚ್ಚರಿಕೆ ||೮||

ಬಲ್ಲಿದ ನೀನೆಂದು ಬಡವರ ಬಾಯನ್ನು ಹೊಯ್ಯಬೇಡೆಚ್ಚರಿಕೆ
ಎಳ್ಳಷ್ಟು ತಪ್ಪಲು ಯಮನವರು ನರಕಕ್ಕೆ ಎಳೆದೊಯ್ವರೆಚ್ಚರಿಕೆ ||೯||

ವರಛಿದ್ರ ಕುಂಭದ ಉದಕದಂತಾಯುಷ್ಯ ಸರಿಯಪ್ಪುದೆಚ್ಚರಿಕೆ
ವರದ ಪುರಂದರ ವಿಠ್ಠಲನ ಸ್ಮರಣೆಯ ಮರೆಯಬೇಡೆಚ್ಚರಿಕೆ ||೧೦||
*********