Showing posts with label ಕೆಂದಳವ ಸೋಲಿಸುವ vijaya vittala ankita suladi ತಿರುವೆಂಗಳೇಶ ಸುಳಾದಿ KENDALAVA SOLISUVA TIRUVENGALESHA SULADI. Show all posts
Showing posts with label ಕೆಂದಳವ ಸೋಲಿಸುವ vijaya vittala ankita suladi ತಿರುವೆಂಗಳೇಶ ಸುಳಾದಿ KENDALAVA SOLISUVA TIRUVENGALESHA SULADI. Show all posts

Sunday 8 December 2019

ಕೆಂದಳವ ಸೋಲಿಸುವ vijaya vittala ankita suladi ತಿರುವೆಂಗಳೇಶ ಸುಳಾದಿ KENDALAVA SOLISUVA TIRUVENGALESHA SULADI

Audio by Mrs. Nandini Sripad
 

ಶ್ರೀ ವಿಜಯದಾಸಾರ್ಯ ವಿರಚಿತ  ತಿರುವೆಂಗಳೇಶನ ಸುಳಾದಿ 

 ರಾಗ ಪೂರ್ವಿಕಲ್ಯಾಣಿ 

 ಝಂಪಿತಾಳ 


ಕೆಂದಳವ ಸೋಲಿಸುವ ನಖಗಳಾನಂತ 

ಇಂದು ಕಾಂತಿಗಳುಳ್ಳ ಪಾದವನು ಕಂಡೆನಾ 

ನಂದುಳ್ಳ ಧ್ವಜ ವಜ್ರಾಂಕುಶ ಮಂಗಳ ಸುಧಾರ -

ವಿಂದ ಕುಂಕುಮ ರೇಖೆಯುಳ್ಳ ಪದತಳವ ಕಂಡೆ 

ಒಂದೊಂದು ಬೆರಳ್ಗಳಲಿ ಎಸೆವ ಪಙ್ತಿ ಬೆರಳಗಳಾಧಾರ 

ಸಂಧಿಯಲ್ಲಿ ಒಪ್ಪುವ ಜಗವ ಚಿತ್ರವ ಕಂಡೆ 

ಅಂದಿಗೆ ಕಿರಿಗೆಜ್ಜೆ ಕಾಲುಗಗ್ಗರಿಪೆಂಡೆ 

ಮುಂದೊಲಿವ ಮುಂಜೆರಗು ತೊಡರ ಬಿರುದನ ಕಂಡೆ 

ಛಂದವಾದ ಜಾನು ಜಂಘೆ ಕದಳಿಯ ಮಾಟ -

ದಂದಲಿ ವೊಪ್ಪುವ ದ್ವಯ ಉರವನು ಕಂಡೆ ನಾ 

ಮಂದಗಮನಿಯರ ಬಲು ಸೋಲಿಸುವ ಸಂಪಿನಲಿ 

ಒಂದೊಂದು ಬೆರಗಿನ ಸ್ವರಮಣನ ಕಂಡೆ ನಾ 

ಮುಂದೆ ಪೀತಾಂಬರ ಪೊಳೆವ ವಢ್ಯಾಣ ಕರ 

ಒಂದು ಕರ ಮತ್ತೊಂದು ಕಟಿಯ ಹಸ್ತನ ಕಂಡೆ 

ಮುಂದೊಲಿವ ಹಾರಾದಿ ನಾಭಿತ್ರಿವಳಿಲೀಲೆ 

ಇಂದುರತುನಾ ಕಂಕಣಕಡಗ ಪೊಳೆಯೆ ನಲು -

ವಿಂದು ಉಂಗುರುಗಳ ಧರಿಸಿದ ಬೆರಳ ಕಂಡೆ 

ಬಂದಿ ನಳಿತೋಳ ಭುಜಕೀರ್ತಿಗಳು ಗಲ್ಲದಲಿ 

ಅಂದಾಗಿ ತೂಗುವತಿ ಕುರುಳುಗೂದಲಿನ ಕಂಡೆ 

ನಿಂದು ತ್ರಿಜಗವಿದ್ದ ಉದರ ಬದಿಯನು ಕಂಡೆ 

ಸಿಂಧುನಂದನೆ ತುಲಸಿಮಾಲಿ ಕೌಸ್ತುಭ 

ಸಿರಿಗಂಧಲೇಪಿಸಿದ ವುರ ವೈಜಯಂತಿಯ ಕಂಡೆ 

ಸುಂದರ ಕಂಬುಗೊರಳ ರ್ಯಾಖೆ ಎಡಬಲಾ 

ದ್ವಂದ್ವ ಹಸ್ತಗಳಲ್ಲಿ ಶಂಖಚಕ್ರವ ಕಂಡೆ 

ಚಂದ್ರುಟಿಯು ನಗೆಮೊಗದಂತ ಪಂಙ್ತಿಯು ನಾಸ 

ಛಂದಾಗಿ ವಲಿವ ಕುಂಡಲಕರ್ನ ಪೆರ್ಬುಬ್ಬು

ಗಂಧಕಸ್ತೂರಿ ತಿಲುಕ ನಸುಲ ಸಪ್ತದ್ವೀಪ 

ಕುಂದದಲೆ ಬೆಳಗುತಿಪ್ಪ ನಯನಂಗಳನು ಕಂಡೆ 

ಮಂದಾರ ಮಾಲೆ ಮಲ್ಲಿಗೆ ಪಾರಿಜಾತ ಸೊಬ -

ಗಿಂದ ಕುಸುಮವ ಮುಡಿದ ಚಲುವ ಮುಡಿಯನು ಕಂಡೆ 

ವಂದೊಂದು ಮಣಿಗೆ ಮೂಲೋಕ ಹರಿಗೊಂಬ ಗೋ -

ವಿಂದನ ಕಿರೀಟವನ್ನು ಕಂಡು ಧನ್ಯನಾದೆ 

ಇಂದೆನ್ನ ಮಂದಮತಿ ಬೆಂದು ಪೋಯಿತು ನಿಲ್ಲದೆ 

ಇಂದೆನ್ನ ಕುಲಕೆ ಹರಿಮಂದಿರವೆ ಫಲಿಸಿತು 

ತಂದೆ ವಿಜಯವಿಟ್ಠಲ ತಿರುವೆಂಗಳೇಶನಾ 

ಬಂದು ಕಣ್ಣಿಲಿ ನೋಡಿ ನಾನಿಂದು ಕೃತಾರ್ಥನಾದೆ ॥ 1 ॥


 ಮಟ್ಟತಾಳ 


ಮಕುಟಮಂಡಿತ ತಿಲುಕನ ಕಂಡೆ

ಮಕರಕುಂಡಲ ಧಾರನ ಕಂಡೆ

ಮುಖಚಲುವನ ಕಂಡೆ ಮುಂಗುರಳನ ಕಂಡೆ

ವಿಕಸಿತಚಕ್ಷು ನಾಶಿಕವದನನ ಕಂಡೆ

ಪ್ರಕಟಿತ ಕೌಸ್ತುಭ ಯಳೆದುಳಸಿ ಮೌ -

ಕ್ತಿಕಹಾರನ ಕಂಡೆ ಸಿರಿದೇವಿಯ ಕಂಡೆ

ಸಂಕರುಷಣನ ಕಂಡೆ ಚತುರ್ಭುಜನನ ಕಂಡೆ

ಪೊಕ್ಕಳಮಣಿಯ ಕಂಡೆ ವರವಸನನ ಕಂಡೆ

ಸಕಲ ಭೂಷಣ ಕಂಡೆ ಭಕುತಜನಕೆ ವೇಗ

ಮುಕುತಿವೀವನ ಕಂಡೆ ಅಖಿಳ ಜೀವೇಶನ ಅನಂತವೇಶನ

ಶಿಖನಖ ಪರಿಯಂತ ನಖಶಿಖವನು ಕಂಡೆ

ಮಖಜವಂದಿತ ಪಾದ ವಿಜಯವಿಟ್ಠಲ ಕನ -

ಕಾಚಲ ತಿರುವೆಂಗಳೇಶ ತಿಮ್ಮನ ಕಂಡೆ ॥ 2 ॥


 ರೂಪಕತಾಳ 


ತಿರುಮಲ ತಿರುಪತಿವಾಸ ನಿರುಮಲ ನಿಸ್ಸಂಗ ಭೂಷ 

ಶರಣಜನರ ಪರಿತೋಷ ತರಣಿಪ್ರಕೋಟಿ ಸಂಕಾಶ 

ಜರಮರಣ ನಿರ್ದೋಷ ಪರಿಪೂರ್ಣಗುಣ ವಿಲಾಸ 

ಪರಮ ಮಾನಸರ ಹಂಸ ಹರಿ ವಿಜಯವಿಠಲೇಶ 

ಸಿರಿದೇವಿಯ ಪ್ರಾಣದರಸ ಉರಗಗಿರಿಯ ವೆಂಕಟೇಶ 

ಹರಿಯೆನಲು ದೋಷನಾಶ ॥ 3 ॥


 ಧ್ರುವತಾಳ 


ಆರಿಗಂಜೆನೊ ನಾನು ಆರಿಗಳಿಕೆನೊ ನಾನು 

ಆರನಾದರು ಲೆಕ್ಕಿಸದಿಪ್ಪೆನೊ ನಾನು 

ಮಾರಿ ಮೃತ್ಯುಗಳು ಕೆಲಸಾರದಲೆ ಬಂದರೆ 

ದೂರದಲ್ಲಿ ನಿಲ್ಲಿಸಿ ಮಾತನಾಡಿಸುವೆನೊ 

ಶೇರಾಗೊಡೆ ದುಷ್ಟರನ ನೂರಾರೋಜನದೊಳಗೆ 

ಕಾರುಣ್ಯ ನಿಧಿಯನ್ನು ಕಂಡು ಬಳಿಕಾದಲ್ಲಿ 

ಘೋರಾದೂತರು ಎನ್ನಾ ಕಡಿಗೆ ಬಾರದಂತೆ 

ದಾರಿ ಮೆಟ್ಟಾದಂತೆ ಮಾಡಿ ಬಿಡುವೆನೊ ನಾನು 

ಭೂರಿ ದೈವವಗಂಡ ವಿಜಯವಿಟ್ಠಲ ದಿವ್ಯಾ 

ಮೂರುತಿಯ ಪೊಗಳಿ ಉದ್ಧಾರ ನಾನಾದೆ ॥ 4 ॥


 ತ್ರಿವಿಡಿತಾಳ 


ನಾರಾಯಣನಂತ ನಿರ್ದೋಷ ಗುಣಪೂರ್ಣ 

ಸಾರ ನಿತ್ಯ ಸ್ವಾತಂತ್ರಾ ಸುಸ್ವರಮಣ ವೇದ -

ಪಾರಾಯಣ ನಾಶರಹಿತ ಶಾಮವರ್ನ 

ಧಾರುಣಿಯೊಳಗೀತಗಧಿಕ ಸಮರಿಲ್ಲ 

ತೋರುವನಲ್ಲ ಕಂಡವರ ಮನಕೆ ಭಕ್ತರಾ -

ಧಾರಾನು ಭವರೋಗ ವೈದ್ಯ ಚೈದ್ಯ ಮಥನ 

ನಾರದವಂದ್ಯ ಶ್ರೀವಿಜಯವಿಟ್ಠಲ ಉ -

ದಾರಿ ಕಾಣೆಲವೊ ಸಮಸ್ತ ದೇವರೊಳಗೆ ॥ 5 ॥


 ಅಟ್ಟತಾಳ 


ಶಂಕಸುರನ ಕೊಂದ ನಿಶ್ಯಂಕನೀತ 

ಪಂಕಜಸುತನ ಪಡೆದ ದೈವನೀತ 

ಶಂಕರನ್ನ ಪ್ರಾಣವನು ಕಾಯಿದ ನೀತ 

ವೆಂಕಟಗಿರಿಯಲ್ಲಿ ಮೆರೆವಾತನೀತ 

ಪಂಕಜೋದರನೀತ ಪಂಕಜಾಪತಿ ಈತ 

ಲೆಂಕಪುರ ವಿಭೀಷಣಗಿತ್ತ ನೀತ 

ಕಿಂಕರಿಗೊಲಿದಂಥ ಕೈಟಭಾರಿ ಈತ 

ಓಂಕಾರ ನಾಮ ಉಳ್ಳಾತನೆ ಈತ 

ಶಂಕಚಕ್ರಾವನ್ನು ಕೊಟ್ಟಾತ ನೀತ 

ಬಿಂಕಾದ ಬಿರದನ್ನು ಕಟ್ಟಿದ ನೀತ 

ಶಂಖಪಾಣಿ ನಮ್ಮ ವಿಜಯವಿಟ್ಠಲರೇಯಾ -

ತಂಕವಿಲ್ಲದೆ ಪೌರುಷದಾತ ನೀತ ॥ 6 ॥


 ಆದಿತಾಳ 


ನಂಬೀರೈಯ್ಯ ನೀವು ಜಗದಂಬಿಕೆರಮಣನಾದ 

ಅಂಬುಧಿಶಯನ ಪಾದಾಂಬುಜಾಗಳಾನುದಿನಾ 

ಬೆಂಬಿಡಾದೆ ಭಜಿಸಲು ಉಂಬುವಾದಕ್ಕುಡಲುಂಟು 

ಹಂಬಲೀಸಾದೀರಿ ಹೀನವೆಂಬ ದೈವಗಳ ಭಕುತಿ 

ಡಂಬಕತನದಲಿಂದ ಡಿಂಬವನು ಕೆಡಿಸಿಕೊಳದೆ 

ಗಂಭೀರನ್ನಾ ನೋಡಿ ಬಲು ಸಂಭ್ರಮದಿಂದಲಿ ಪಾಡಿ 

ಇಂಬು ತೋರುವನು ದಯಾಂಬುಧಿ ವಿಜಯವಿಟ್ಠಲ 

ಕಾಂಬೆನೆಂಬಾ ದಾಸರಿಗೆ ಬೆಂಬಲವಾಗಿ ನಿಲ್ಲುವ ॥ 7 ॥


 ಜತೆ 


ಆನಂದಮಯ ಸಕಲಾಮಾನಂದ ಮಹಿಮಾನೆ 

ಆನಂದಗಿರಿ ವಿಜಯವಿಟ್ಠಲ ತಿಮ್ಮನ ಕಂಡೆ ॥

***********