ರಾಗ - : ತಾಳ -
ರೋಗದಾವದು ನೋಡೊ ಯೋಗಿ ಧನ್ವಂತ್ರೀ l
ಜಾಗು ಮಾಡದಲೆನ್ನ ಕರವಿಡಿದು ಪೇಳೋ ll ಪ ll
ಗುರುಹಿರಿಯರಾಚರಣ ಕಮಲಕ್ಕ ಶಿರಬಾಗದ l
ಹರಿಯ ನಾಮಗಳೆನ್ನ ನುಡಿಗೆ ಬರದೂ l
ಹರಿಮೂರ್ತಿ ನೋಡಲಿಕ್ಕೆ ಕಣ್ಣು ಕಾಣವೊ ದೇವ l
ಕರಿಕಥಿಗೆ ಕಿವಿಯು ಗೋಡ್ಯಾದವೂ ll 1 ll
ಹರಿಪೂಜೆಗೆ ಅನುಕೂಲವಾಗದೀ ಕರಗಳು l
ಹರಿ ಉಂಡ ಅನ್ನ ಉದರಕ್ಕೆ ಆಗದೂ l
ಹರಿಯಾತ್ರೆ ಘೋರಟರೆ ಚರಣಗಳಿಗತಿ ಶೂಲಿ l
ಹರಿ ಹರಿ ಹರಿ ಎನಗೆ ಏನಾಯಿತೋ ll 2 ll
ಹಿಂದೆ ಬಡಿಸಿದ ಭವಣಿ ಮುಂದೆ ಬಡಿಸಲಿ ಬ್ಯಾಡಾ l
ವಂದೆ ಮನದಲಿ ಹೇಳಿಕೊಂಬೆ l
ಕಂದನಾ ನುಡಿಯನ್ನು ಛಂದಾಗಿ ಲಾಲಿಸೊ l
ಕಂದುಗೊರಳನ ಕಾಯ್ದು ಬಂದ ಶ್ರೀನಿಧಿವಿಟ್ಠಲಾ ll 3 ll
***