ಲೋಕನೀತಿ
ಇತ್ತಿತ್ತ ಬಾರೆಂದು ಕರೆಯುವವರಿಲ್ಲದಿರೆ
ವ್ಯರ್ಥವಲ್ಲವೆ ಜನ್ಮವು ಪ.
ಅತ್ತತ್ತ ಹೋಗೆಂಬ ನುಡಿ ಕೇಳಿ ಜಗದೊಳಗೆ
ಮತ್ತೆ ಇರಬಹುದೆ ಹರಿಯೆ ಅ.ಪ.
ಆರಿಗಾರಾಗುವರೊ ಪ್ರಾರಬ್ಧ ನೀಗದಲೆ
ಶೌರಿ ದಾರಿಯ ತೋರನು
ಈ ರೀತಿಯರಿತು ಹೇ ದುರ್ಮನವೆ ನರಹರಿಯ
ಆರಾಧನೆಯನೆ ಮಾಡೊ 1
ಏಕಾದಶ್ರೇಂದ್ರಿಯವ ಶ್ರೀ ಕಳತ್ರನೊಳಿಟ್ಟು
ಏಕ ಮನದಲ್ಲಿ ಭಜಿಸು
ಏಕೆ ತಲ್ಲಣಿಸುವೆ ಶೋಕಕ್ಕೆ ಒಳಗಾಗಿ
ನೂಕು ಭವತಾಪ ಜಗದಿ 2
ಗೋಪಾಲಕೃಷ್ಣವಿಠ್ಠಲನೆ ಗತಿ ಎಂತೆಂದು
ಈ ಪರಿಯಿಂದ ಭಜಿಸು
ಶ್ರೀ ಪರಮ ಕಾರುಣ್ಯ ಗುರುಗಳಂತರ್ಯಾಮಿ
ತಾಪ ಹರಿಸುವನು ಭವದಿ 3
****