ರಾಗ: ಯದುಕುಲ ಕಾಂಬೋಜಿ ತಾಳ: ಆದಿ
ಬಾಗಿ ಭಜಿಸಿರೊ ರಾಘವೇಂದ್ರ ಯತಿಯ ಕೊಡುವನು ಸನ್ಮತಿಯ ಪ.
ಯೋಗಿಕುಲವರ್ಯ ಭಾಗವತರಪ್ರಿಯ ಸತ್ಕವಿಕುಲಗೇಯ ಅ.ಪ
ಯತಿಸುಧೀಂದ್ರಕರಸುತಾದ್ಭುತಚರಿಯ ಪುಸಿಯಲ್ಲವು ಖರಿಯ
ಶ್ರಿತಜನನುತ ಕಾಮಿತತರು ಸುರಧೇನು ಚಿಂತಾಮಣಿ ತಾನು
ಶತಪರ್ವತವತ್ಸರ ವೃಂದಾವನದಿ ನಲಿವನು ಮುದದಿ
ಚತುರವಿಧಸುಪುರುಷಾರ್ಥಗಳನೆ ಕೊಡುವ ನಂಬಿದವರಘ ತಡೆವ 1
ವರಮಂತ್ರಾಲಯ ಸುರುಚಿರ ಗೃಹದಲ್ಲಿ ವರಹಜತೀರದಲಿ
ಮೆರೆವ ಮಂದರನು ಕರೆದು ಪಾಪ ಕಳೆವ ಮನದಲಿ ತಾ ಪೊಳೆವ
ಸರ್ವಜ್ಞರು ಮೊದಲಾದ ಮುನಿಗಳಲ್ಲಿ ಇಪ್ಪರು ಮುದದಲ್ಲಿ
ದುರಭಿಮಾನದಲಿ ಬಾರದವನೆ ಕೆಟ್ಟ ಬರಲವ ಸುಶ್ರೇಷ್ಠ 2
ಮಧ್ವಮುನಿಯಸುಮತಾಬ್ಧಿಪೂರ್ಣಚಂದ್ರ ಸದ್ಗುಣಸಾಂದ್ರ
ಸದ್ವೈಷ್ಣವಗುರು ಕುಮತಾದ್ರಿಗೆಕುಲಿಶ ಕಾಷಾಯವಾಸ
ಸಿದ್ಧಾಂತಸುಧೆಗೆ ಪರಿಮಳಾಖ್ಯ ಗ್ರಂಥ ಮಾಡಿದ ದಯವಂತ
ಮುದ್ದು ಅಭಿನವಜನಾರ್ದನವಿಠಲನ್ನ ಸದ್ಭಕ್ತವರೇಣ್ಯ 3
***