ರಾಗ ಮೋಹನ ಖಂಡಛಾಪುತಾಳ
Audio by Mrs. Nandini Sripad
ನಲ್ಲೇ ಸಿರಿ ತನ್ನ ಪತಿಗೆ ಸಂಪ್ರದಾಯ ಹಾಡು
NALLE SIRI TANNA PATIGE SAMPRADAYA song
ನಲ್ಲೆ ಸಿರಿ ತನ್ನ ಪತಿಗೆ ಮಲ್ಲಿಗೆಯ ತೈಲವನು
ಉಲ್ಲಾಸದಲಿ ತಂದು ಒತ್ತುತಿಹಳು ॥ ಪ ॥
ಚಿನ್ನ ಕೊಪ್ಪರಿಗೆಯಲಿ ಪನ್ನೀರು ಕಾಸಿ
ತನ್ನ ವಲ್ಲಭಗೆರೆದು ಮೈಯ ಒರೆಸಿ ॥ 1 ॥
ಕೇಶವ ನಾರಾಯಣಗೆ ಕೇಶವನೆ ಹಿಕ್ಕುತಲಿ
ವಾಸುದೇವನಿಗೆ ಮಲ್ಲಿಗೆಯ ಮುಡಿಸಿ ॥ 2 ॥
ಮಾಧವ ಗೋವಿಂದನಿಗೆ ಮಣಿಕಿರೀಟವನಿಟ್ಟು
ವೇದವೇದ್ಯನಿಗೆ ಸಾಗರನ ಸುತೆಯು ॥ 3 ॥
ವಿಷ್ಣು ಮಧುಸೂದನಗೆ ರತ್ನ ಕುಂಡಲವಿಟ್ಟು
ಅಚ್ಯುತಾನಂತಗೆ ಭಕ್ತಿಯಿಂದ ॥ 4 ॥
ತ್ರಿವಿಕ್ರಮ ವಾಮನಗೆ ತ್ರಿವಳಿಯಾ ಕಂಠಕೆ
ಮುತ್ತಿನ ಹಾರವನೆ ಧರಿಸುತಿಹಳು ॥ 5 ॥
ಶ್ರೀಧರಗೆ ಒಪ್ಪುವ ಶ್ರೀವತ್ಸ ಲಾಂಛನ
ಹೃಷೀಕೇಶಗೆ ದಿವ್ಯ ತುಳಸಿ ದಂಡೆ ॥ 6 ॥
ಪದ್ಮನಾಭಗೆ ದಿವ್ಯ ವಜ್ರದ ಪದಕವು
ದಾಮೋದರಗೆ ದಿವ್ಯ ವೈಜಯಂತಿ ॥ 7 ॥
ಸಂಕರುಷಣಗೆ ದಿವ್ಯ ವಂಕಿ ಭುಜಕೀರ್ತಿಯು
ವಾಸುದೇವಗೆ ಹಸ್ತ ಕಡಗವಿಟ್ಟು ॥ 8 ॥
ಪ್ರದ್ಯುಮ್ನಮೂರ್ತಿಗೆ ವಜ್ರದುಂಗುರವಿಟ್ಟು
ಅನಿರುದ್ಧನಿಗೆ ಕಡಗ ಸರಗಳಿಟ್ಟು ॥ 9 ॥
ಪುರುಷೋತ್ತಮಗೆ ದಿವ್ಯ ಜರಿಯ ಪೀತಾಂಬರವು
ಅಧೋಕ್ಷಜನಿಗುಡಿಸಿ ಅರ್ಥಿಯಿಂದ ॥ 10 ॥
ನರಸಿಂಹ ಮೂರುತಿಗೆ ನಡುವಿನೊಡ್ಯಾಣವು
ಅಚ್ಯುತಗೆ ಸಿಕ್ಕಿ ಮುತ್ತಿನ ಕಠಾರಿ ॥ 11 ॥
ಜನಾರ್ಧನಗೆ ದಿವ್ಯ ಝಣಿರೆಂಬ ಗೆಜ್ಜೆಯು
ಉಪೇಂದ್ರನಿಗೆ ಕಡಗ ರುಳಿಗಳಿಟ್ಟು ॥ 12 ॥
ಶ್ರೀಹರಿಯ ಪಾದವು ಮೊದಲು ಶಿರಸು ಪರಿಯಂತರ
ಶ್ರೀಕೃಷ್ಣನ ನೋಡಿ ಭಕ್ತಿಯಿಂದ ॥ 13 ॥
ಮತ್ಸ್ಯಕೂರ್ಮವರಾಹ ನಾರಸಿಂಹ ಚಿಕ್ಕ
ವಾಮನ ಭಾರ್ಗವ ರಾಮಚಂದ್ರ ॥ 14 ॥
ಕೃಷ್ಣ ಬೌದ್ಧ ಕಲ್ಕಿರೂಪ ನೀನೇ ಎಂದು
ಸೃಷ್ಟಿಯಲಿ ನೆಲೆಯಾದಿಕೇಶವನಿಗೆ *
ಸಾಷ್ಟಾಂಗಕ್ಕೆರಗಿದಳು ಸಂತೋಷದಿಂದ ॥ 15 ॥
***
(*this devaranama is not written by kanakadasaru)