...ಶ್ರೀ ಶ್ರೀಕರವಿಠ್ಠಲರು...
ಅಗಜೆ ನಂದನಾ ಜಗವಂದ್ಯಾ ।। ಪಲ್ಲವಿ ।।
ಇಭಪುರದರಸನ
ವಿಭವದರ್ಚನೆಗೊಂಡು ।
ಅಭಯವ ನೀಡಿದ
ಇಭರಾಜ ವದನಾ ।। ಚರಣ ।।
ವಾಸವಾನುಜನಾ
ಲೇಸಾಗಿ ತುತಿಪಾ ಘನ್ನ ।
ಮೀಸಲ ಮನ ನೀಡೋ
ವಾಸವಾರ್ಚಿತ ಚರಣಾ ।। ಚರಣ ।।
ಲೇಖಕಾಗ್ರಣಿ ಮನದ
ವ್ಯಾಕುಲ ಬಿಡಿಸಯ್ಯ ।
ಶ್ರೀಕರವಿಠ್ಠಲ ಪ್ರೀಯ
ನಾ ಕರ ಮುಗಿವೆನುಭಯಾ ।। ಚರಣ ।।
***
ರಾಗ : ಮಿಶ್ರಛಾಪು ತಾಳ : ಆದಿ
ಅಗಜೆ = ಪಾರ್ವತಿ
( ಆಗ = ಚಲಿಸದಿರುವ ಪರ್ವತ; ಜೆ = ಹಿಮವತ್ಪರ್ವತರಾಜನ ಪುತ್ರಿ ಪಾರ್ವತೀ )
ಇಭಪುರ = ಗಜಪುರ
ಇಭರಾಜ ವದನಾ = ಗಂಡು ಆನೆಯ ಮುಖ ಉಳ್ಳವನು
" ವಾಸವಾನುಜನಾ "
ಇಂದ್ರ ಪಟ್ಟವನ್ನು ಆಳಿದ ವಾಮನ ನಾಮಕ ಉಪೇಂದ್ರ ರೂಪಿ ಶ್ರೀ ಹರಿ
" ವಾಸವಾರ್ಚಿತ "
ಇಂದ್ರನಿಂದ ಪೂಜಿತವಾದ ಪಾದಾರವಿಂದಗಳನ್ನು ಉಳ್ಳವನು
" ಲೇಖಕಾಗ್ರಣಿ "
ಶ್ರೀ ವೇದವ್ಯಾಸರ ಪರಮಾನುಗ್ರಹದಿಂದ ಶ್ರೀಮನ್ಮಹಾಭಾರತವನ್ನು ಅರ್ಥ ಮಾಡಿಕೊಂಡು ಬರೆದ ಶೀಘ್ರ ಲಿಪಿಗಾರ!
ಕರಮುಗಿವೆನುಭಯಾ = ಎರಡು ಕೈಗಳನ್ನೂ ಮುಗಿದು ಬೇಡುತ್ತೇನೆ!!
****