Showing posts with label ಒಡಿಯಾ ನೀನಡಿಯಿಡೆ purandara vittala ankita suladi ಹರಿದಾಸ್ಯಭಾವ ಸುಳಾದಿ ODIYA NEENADIYIDE HARIDASYA BHAAVA SULADI. Show all posts
Showing posts with label ಒಡಿಯಾ ನೀನಡಿಯಿಡೆ purandara vittala ankita suladi ಹರಿದಾಸ್ಯಭಾವ ಸುಳಾದಿ ODIYA NEENADIYIDE HARIDASYA BHAAVA SULADI. Show all posts

Friday 13 November 2020

ಒಡಿಯಾ ನೀನಡಿಯಿಡೆ purandara vittala ankita suladi ಹರಿದಾಸ್ಯಭಾವ ಸುಳಾದಿ ODIYA NEENADIYIDE HARIDASYA BHAAVA SULADI

Audio by Mrs. Nandini Sripad

 ಶ್ರೀ ಪುರಂದರದಾಸಾರ್ಯ ವಿರಚಿತ  ಹರಿದಾಸ್ಯಭಾವ ಸುಳಾದಿ 


( ಶ್ರೀಹರಿಯ ಮಹಮಹಿಮೆ ಹಾಗೂ ಅವನಲ್ಲಿ ದಾಸ್ಯಭಾವವನ್ನು ಈ ಸುಳಾದಿಯಲ್ಲಿ ತಿಳಿಸಿದ್ದಾರೆ)


 ರಾಗ ಪಂತುವರಾಳಿ 


 ಧ್ರುವತಾಳ 


ಒಡಿಯಾ ನೀನಡಿಯಿಡೆ ಹಾಂವಿಗಿಯವ ನಾನು

ಒಡಿಯಾ ಮೇಲಡಿಯಿಡೆ ಛಡಿ ಬೆತ್ತದವ ನಾನು

ಒಡಿಯಾ ತಾಂಬೂಲವನ್ನು ಉಗಳೊ ವೇಳ್ಯದಲ್ಲಿ

ಬಟ್ಟಲು ಕಾಳಿಂಜಿ ಪಿಡಿವವ ನಾನು

ಒಡಿಯಾನೊಡ್ಡೋಲಗದಲ್ಲಿ ಕುಳಿತರೆ

ಛತ್ರ ಚಾಮರ ಕನ್ನಡಿಯ ಪಿಡಿವವ ನಾನು

ಒಡಿಯಾ ಪುರಂದರವಿಟ್ಠಲರಾಯನ 

ಉಗುರು ಇಟ್ಟಲ್ಲಿ ಶಿರವ ಕೊಡುವೆ ನಾನು ॥ 1 ॥


 ಮಟ್ಟತಾಳ 


ಹರಿಯನೋಲೈಸುವ ನಮ್ಮಣ್ಣ ಅಣ್ಣಗಳಿರಾ ಕೇಳಿ

ಶರಧಿಯ ಕಟ್ಟಬೇಕು ಲಂಕಿಗೆ ಮುಟ್ಟಬೇಕು

ರಾವಣಾದಿಗಳಿಂದ ಇರಿದಾಡುತ್ತಿರಬೇಕು

 ಪುರಂದರವಿಟ್ಠಲನ್ನ ಊಳಿಗದೂಳಿಗ ಘನ್ನ ಘನ್ನಾ ॥ 2 ॥


 ತ್ರಿವಿಡಿತಾಳ 


ಚಂದಿರನಿಗೆ ಇಂದು ನಿಂದಿರತೆರವಿಲ್ಲಾ

ಸೂರ್ಯನಿಗೆ ಇಂದು ಕುಳ್ಳಿರುಪರಿ ಇಲ್ಲಾ

ಇಂದ್ರಾದಿಗಳಿಗೆಲ್ಲ ಎಂದೆಂದು ತಲೆ ತುರುಸಲು ಹೊತ್ತಿಲ್ಲಾ

 ಪುರಂದರವಿಟ್ಠಲ ಕಟ್ಟರಸು ಕಾಣಿರೋ ॥ 3 ॥


 ಅಟ್ಟತಾಳ 


ಕೃಷ್ಣರಾಯನರಮನೆಯ ಗಾಯಕರಾವು

ಭಟ್ಟರಾವು ವಿದ್ಯವಂತರಾವು

ಉತ್ತಮಾಂಗನ್ನ ತೆತ್ತಿಗರಾವು

 ಪುರಂದರವಿಟ್ಠಲನ ಪೊಗಳುವವರಾವು

ಉತ್ತಮಾಂಗನ ತೆತ್ತಿಗರಾವು ॥ 4 ॥


 ಆದಿತಾಳ 


ಧರಿ ಅಂಜುತಲಿದೆ ಗಿರಿಗಳಂಜುತಲಿವೆ

ಮರ ಬಳ್ಳಿಗಳಂಜಿ ಫಲಗಳೀವುತಲಿವೆ

ಸರಿತು ಸಮುದ್ರಗಳಂಜಿ ಬಿಚ್ಚಾಡುತಲಿವೆ

ನಿರುತ ಪಾವಕರಂಜಿ ಚರಿಸಿ ದಹಿಸುತಿವೆ

 ಪುರಂದರವಿಟ್ಠಲ ನೀ ಎಂಥ ಅರಸೊ ಎಂಥ ಅರಸೊ ॥ 5 ॥


 ಜತೆ 


ನಾ ಘನ್ನ ನೀ ಘನ್ನ ತಾ ಘನ್ನ ಎನಬೇಡಿ

ಒಬ್ಬನೆ ಘನ್ನ ಸಿರಿ ಪುರಂದರವಿಟ್ಠಲ ॥

********