Audio by Mrs. Nandini Sripad
ಶ್ರೀ ಬಾದರಾಯಣವಿಠಲ ದಾಸಾರ್ಯ ವಿರಚಿತ
ಹರಿದಾಸತ್ವ ಸುಳಾದಿ
ರಾಗ ಹಂಸಧ್ವನಿ
ಧ್ರುವತಾಳ
ಕೊಳಕುದಾಸನು ನಾನು ಕುಲಗೇಡಿದಾಸ ನಾನು
ಕುಲಗೇಡಿದಾಸ ನಾನು ಹೊಲಸು ದಾಸ
ಇಳೆಯೊಳು ಸಜ್ಜನರ ನೆಲೆಗಂಟು ನಿಂದಿಸುವ
ಹೊಲೆದಾಸ ನಾನಯ್ಯ ಜಲಜನಾಭಾ
ಕಲಕಾಲ ನೀಚಕರ್ಮಂಗಳಿಗೊಳಗಾದ ಕೆಟ್ಟ
ಹುಳುಕುಚಿತ್ತನು ನಾನು ದಾಸನೇನೋ
ಗೆಳೆಯನಂದದಿ ಅರ್ಧ ಘಳಿಗೆ ಕ್ಷಣಬಿಡದಲೆ
ಸಲಹುವ ಸ್ವಾಮಿ ನಿನ್ನ ಮರೆತಿಪ್ಪೆನೋ
ಅಲವಬೋಧರ ಗುರು ಬಾದರಾಯಣವಿಠ್ಠಲ
ಇಳೆಯೊಳು ನಾನೊಬ್ಬ ದಾಸಾ ಭಾಸನಯ್ಯ ॥ 1 ॥
ಮಟ್ಟತಾಳ
ದಾಸತ್ವದ ಬಗೆಯ ಲೇಸುವರಿಯೆ ನಾನು
ಆಶಿದನು ನಾನು ಮೋಸದಾಸನು ನಾನು
ಈ ಶರೀರವನು ಸದಾ ಪೋಷಣದಲಿ ಪರಮ
ಕೌಶಲ್ಯವನುಳ್ಳ ಕಾಸದಾಸನು ನಾನು
ಈಶ ನೀನೆಂಬುವದು ಈ ಪಶು ನಾನರಿಯೆ
ಕೇಶವನೆ ಕೇಳೊ ದಾಸನಾನೆಂತಿಪ್ಪೆ
ಶ್ರೀಶ ಹಯಗ್ರೀವ ಬಾದರಾಯಣವಿಠ್ಠಲ
ದಾಸನೆಂದು ಕರಿಯೆ ಕೋಪಿಸಿಗೊಂಬೆನೋ ॥ 2 ॥
ತ್ರಿಪುಟತಾಳ
ಕಾಮಿನಿಯರ ಸಂಗ ಸಾಮಗ್ರಿ ಹುಡುಕುತ
ಭೂಮಿಯೊಳು ತಿರುಗೂವ ಪಾಮರನೊ ನಾನು
ಶ್ರೀಮಧ್ವ ಶಾಸ್ತ್ರಾರ್ಥ ಪ್ರೇಮದಿ ಗುರುದ್ವಾರ
ನಾ ಮನಃಪೂರ್ವಕ ಕೇಳಲಿಲ್ಲವೋ , ಕೆಟ್ಟ
ಗೋಮುಖ ವ್ಯಾಘ್ರನಂತೆ ಮನದೊಳು ಸದಾ
ಕಾಮಕ್ರೋಧಂಗಳು ಬಚ್ಚಿಟ್ಟುಕೊಂಡಿಪ್ಪೆ
ತಾಮಸ ನಾನಯ್ಯ ನಿನ್ನ ದಾಸನೆಂಬೊ
ನಾಮ ಸಲ್ಲುವದೇ ಎನ್ನಂಥ ಪತಿತಗೆ
ಭೀಮಸೇನ ಪ್ರೀಯಾ ಬಾದರಾಯಣವಿಠ್ಠಲ
ರಾಮ ನಿನ್ನ ದಾಸ್ಯವೆಲ್ಲ್ಯೋ ನಾನೆಲ್ಲಿಹೆನೋ ॥ 3 ॥
ಅಟ್ಟತಾಳ
ಪರನಿಂದಾ ರತ ನಾನು ಪರಮ ಪತಿತ ನಾನು
ಪರದ್ರವ್ಯ ಪರನಾರಿ ಹರಣದಿ ಬಲು ಶೂರ
ಶಿರಹುಳತ ನಾಯಿ ತೆರನಂತೆ ಮನೆ ಮನೆ
ತಿರುಗಿ ತಿಂದು ಇಂಥ ಹರಕು ಬುದ್ಧಿಯುಂಟೆ
ನರನಾರಾಯಣ ಬಾದರಾಯಣವಿಠ್ಠಲ
ಹೊರಗೆ ನೋಡಲು ದಾಸ ಒಳಗೆ ನೋಡಲು ದೋಷ ॥ 4 ॥
ಆದಿತಾಳ
ತಾರತಮ್ಯ ಪಂಚಬೇಧ ದಾರಿಯನ್ನು ಕಾಣೆ ನಾನು
ವೀರವೈಷ್ಣವರ ದಿವ್ಯ ಮೂರಾರು ಭಕ್ತಿಯ ನೋಡಿ
ಸೈರಿಸಲಾರದೆ ಅವರ ದೂರುವೆನು ದುಃಖದಿಂದ
ಘೋರ ಡಂಭದಿಂದ ಈ ನಾರುವ ಶರೀರ ತೊಳೆದು
ಆರೆರಡು ಮುದ್ರಿ ಧಾರಣವ ಮಾಡಿಕೊಂಡು
ಆರು ಮಂದಿ ವೈರಿಗಳ ಸೇರಿ ಕೆಟ್ಟೆನಲ್ಲೋ ದೇವಾ
ವಾರಿಜಾಸನ ಶಕ್ರ ನಾರದಾದಿವಂದ್ಯ ಪಾ -
ದಾರವಿಂದ ನಿನ್ನ ಕಾಂಬ ದಾರಿದಾವದು ಸ್ವಾಮಿ
ಧೀರ ದೀನಜನ ಮಂದಾರ ದಯಾವಾರಿಧೆ ರ -
ಮಾರಮಣ ನಿನ್ನ ಕಾಂಬೊ ದಾರಿದಾವದೊ
ಹಯಾಸ್ಯ ತೋರು ತಪ್ಪುಗಳೆಣಿಸಿ
ಗಾರು ಮಾಡದಿರು ದಾನವಾರಿ
ಬಾದರಾಯಣವಿಠ್ಠಲ ವಿಶ್ವರೂಪ ದಯದಿ ॥ 5 ॥
ಜತೆ
ಕರೆಸಿದೆ ನರರಿಂದ ಹರಿದಾಸನೆಂದೆನ್ನ
ಬರಿದು ಮಾಡದೆ ಕಾಯೋ ಬಾದರಾಯಣವಿಠ್ಠಲ ॥
********