ನಿನ್ನ ಕೃಪೆ ಕಾಣದ ಕಾಲ ವ್ಯರ್ಥ ಪ
ಘನ್ನ ನಿರಯಕೆ ವೈವೋ ಸಾಧನವೋ ಗೋಪಾಲ ಅ.ಪ
ವಿಧಿಬಲ್ಲ ಹರಬಲ್ಲ ಬುಧ ಸುರರು ಬಲ್ಲರೈ
ಚದುರ ತತ್ವೇಶಗಣ ಬಲ್ಲರಯ್ಯಾ
ವಿಧಿಪಿತನೆ ನಿನ್ನ ಬಿಟ್ಟನ್ಯತ್ರ ಮನವಿರಲು
ನಿಧನ ನೋವಿಗೆ ಮಿಗಿಲು ಪದುಮ ಮುಕ್ತರು ಸಾಕ್ಷಿ1
ಬಂಧಿಸಲು ನೀ ನಮ್ಮ ಬಿಡಿಸಿಕೊಂಬುವರುಂಟೆ
ಅಂಧತಮಸಿನ ಭೋಗದಿಂದಾಹುದೊ
ಇಂದಿರಾನಂದ ಘನ ಸಿಂಧು ಚಿನ್ಮಯ ಕಾಯ
ತಂದೆ ನಿನ್ನಯ ಕರುಣ ಉಂಬುವನೆ ಬಹುಧನ್ಯ 2
ಗೋ ಗೊಲ್ಲರಲಿ ಕರುಣ ಸುರಿದ ದೀನ ಬಂಧು
ಭಾಗ್ಯಪಾಲಿಸು ಭಕ್ತಿಯೋಗವಿತ್ತು
ರೋಗದಲಿ ಬಲು ನೊಂದೆ ಭಯವನ್ನು ಹೀರುವುದು
ನಾಗತಲ್ಪ ಜಯೇಶವಿಠಲನೆ ಉದ್ಧರಿಸು 3
***