ರಾಗ: ವಸಂತ ತಾಳ: ಏಕ
ಬಂದನಿಂದು ಕಣ್ಣಮುಂದೆ ರಾಘವೇಂದ್ರನು
ತಂದು ಶುಭವ ಭೂರಿಸುಖವ ಸುಮ್ಮುನೀಂದ್ರನು ಪ
ಶೀಲಮೂರ್ತಿ ನಾರಸಿಂಹದೇವನೆದುರಲಿ
ಬಾಲನಾಗಿ ನಿಂದು ರೂಪ ನೋಡಿ ಮೆರೆದನು 1
ಲೋಲಕೃಷ್ಣ ಮುಂದೆ ಕುಣಿಯೆ ಸಾಲಿಗ್ರಾಮವ
ತಾಳಮಾಡಿ ನೋಡಿ ನಲಿದ ಯತಿಯು ಬಂದನು 2
ಎರಡು ರಾಜ್ಯವಾಳಿ ಮೆರೆದ ರಾಯ ಬಂದನು
ಎರಡು ವೃಂದಾವನದಿ ಇರುವ ಸ್ವಾಮಿ ಬಂದನು 3
ತಂಪತೋರಿ ಕಂಪಬೀರಿ ಮನವನರಳಿಸಿ
ಸಂಪದವನಿತ್ತು ಹರಸಿ ಕಾಯಬಂದನು 4
ದಾತಸೀತಾರಾಮವಿಠಲನ ಭಜಕನು
ಪ್ರೀತನಾಗಿ ಬಂದು ನಿಂದ ರಾಘವೇಂದ್ರನು 5
***
ಎರಡು ರಾಜ್ಯ=ವಿಜಯನಗರ ಮತ್ತು
ವಿದ್ಯಾಸಾಮ್ರಾಜ್ಯಗಳಿರಬಹುದು; ಎರಡು
ವೃಂದಾವನ=ನವವೃಂದಾವನದಲ್ಲಿರುವ
ಮತ್ತು ಮಂತ್ರಾಲಯದಲ್ಲಿರುವ ಬೃಂದಾವನಗಳಿರಬಹುದು;