ಲಕ್ಷ್ಮೀಶ ಪಾಲಿಸು ಎನ್ನ ಲಕ್ಷ್ಮೀಶ ಪ.
ಲಕ್ಷ್ಮೀಶ ಪಾಲಿಸೊ ಎನ್ನ | ಜಗ
ದ್ರಕ್ಷಕ ಪರಮಪಾವನ್ನ
ಈಕ್ಷಿಸು ಕರುಣ ಕಟಾಕ್ಷವ ಬೀರುತ
ಕುಕ್ಷಿಯೊಳಗೆ ಜಗ ರಕ್ಷಿಸುತಿಪ್ಪನೆ ಅ.ಪ.
ನಾಗರಾಜನ ಗಿರಿವಾಸ | ಭೋಗ
ಆಗುಮಾಡೆಲೊ ಸರ್ವೇಶ | ನಿನಗೆ
ಬಾಗಿ ನಮಿಸುವೆ ಜಗದೀಶ | ಭವ
ರೋಗ ಹರಿಸು ಕ್ಲೇಶನಾಶ | ಆಹ
ಕೂಗಿದರು ನಿನಗೀಗ ಕೇಳಿಸದೇನೊ
ಭಾಗವತರ ಸಂಗ ಜಾಗುಮಾಡದೆ ನೀಡೊ 1
ಸೃಷ್ಟಿಗೆ ಎನ್ನನು ಕರೆದೆ | ಭವ
ಕಷ್ಟದಿ ಬಂಧಿಸಿ ತಂದೆ | ಇನ್ನು
ಘಟ್ಯಾಗಿ ಕಾಪಾಡು ಎಂದೆ | ಮೊರೆ
ಮುಟ್ಟದೆ ನಿನಗಿನ್ನು ತಂದೆ | ಆಹ
ಎಷ್ಟು ಬೇಡಿದರು ಸೊಟ್ಟ ತಿರುಗಿ ಮೊಗ
ಅಟ್ಟಕೆ ಏರುವಿ ಬೆಟ್ಟದೊಡೆಯ ಹರಿ 2
ಕರ್ಮಬಂಧನಗಳ ಕಡಿಯೊ | ಶ್ರೀಶ
ನಿರ್ಮಲರೂಪ ಕೈಪಿಡಿಯೊ | ಬೇಗ
ಧರ್ಮ ಅಧರ್ಮವ ತಿಳಿಯೊ | ಜಗ
ತ್ಕರ್ಮ ಸಾಕ್ಷಿಯೆ ಬೇಗ ಪೊರೆಯೊ | ಆಹ
ಧರ್ಮವಲ್ಲವೊ ಹೀಗೆ ಮರ್ಮವ ನುಡಿವುದು
ಪೆರ್ಮೆಯಿಂದಲಿ ಅಂತರ್ಮರ್ಮವರಿತು ಕಾಯೊ 3
ಶ್ರೀನಿವಾಸ ಬಾರೊ ಬೇಗ | ನಿನ್ನ
ನಾನು ನಂಬಿದೆನೊ ಶ್ರೀ ಭೋಗ | ನೀಗು
ನೀನೆ ತ್ರಿಕರ್ಮದ ಭೋಗ | ಬೇಗ
ಆಗು ಮಾಡೆಲೊ ಭವ ರೋಗ | ಆಹ
ಪೋಗುತಲಿದೆ ದಿನ ಜಾಗುಮಾಡಲು ಸಲ್ಲ
ನಾಗಶಯನ ಎನ್ನ ಬೇಗನೆ ರಕ್ಷಿಸೊ 4
ಕಣ್ಣು ಬಿಟ್ಟಿರುವೆಯೊ ನೀನು | ನಿನ್ನ
ಬೆನ್ನ ಭಾರವಿದಿನ್ನೇನು | ಕೋರೆ
ಮಣ್ಣು ಆರ್ಭಟಿಸುವೆ ನೀನು | ವಟು
ಚಿಣ್ಣ ಭಾರ್ಗವ ನೀನು | ಆಹ
ಮನ್ನಿಸಿ ಕಪಿಗಳ ಬೆÉಣ್ಣೆ ಕಳ್ಳನೆನಿಸಿ
ಬಣ್ಣಗೆಟ್ಟು ಹಯವನ್ನೇರಿದ ಧೀರ 5
ನಿತ್ಯ ತೃಪ್ತನೆ ಎನ್ನ ಮನದಿ | ಸರ್ವ
ತತ್ವಾಧಿಪತಿಗಳು ಮುದದಿ | ಜಗ
ತ್ಕರ್ತನೆ ಕಾಯ್ವ ದಯದಿ | ಬೇಗ
ಇತ್ತು ಮತಿಯ ಸಲಹೊ ದೃಢದಿ | ಆಹ
ಸತ್ಯರೂಪನೊ ನೀ ಸತ್ಯ ಸಂಕಲ್ಪನೊ
ಹೃತ್ಕಮಲದಿ ನೀ ನಿತ್ಯ ನಿಂತು ಕಾಯೊ 6
ಗೋಪಾಲಕೃಷ್ಣ ವಿಠ್ಠಲ | ಭವ
ಕೂಪದಿಂದೆತ್ತೊ ಶ್ರೀ ನಲ್ಲ | ಎನ್ನ
ರಾಪು ಮಾಡುವುದುಚಿತಲ್ಲ | ಜಗ
ದ್ವ್ಯಾಪಕ ಭಕ್ತವತ್ಸಲ | ಆಹ
ಈ ಪಯೋಜಜಾಂಡದಿ ರೂಪ ರೂಪಾಂತರದಿ
ವ್ಯಾಪಾರ ನಡೆಸುವ ಗೋಪಕುವರ ಕಾಯೊ 7
****