ankita ಪಂಡರೀನಾಥವಿಠಲ
ರಾಗ: ದ್ವಿಜಾವಂತಿ ತಾಳ: ಅಟ್ಟ
ರಾಯರು ಸಕಲರನು ನೋಯಿಸದಲೆ
ಕಾಯುತಲಿರುವರು ಪ
ನ್ಯಾಯಧರ್ಮ ಸತ್ಯಸಂಧರು ನಿಷ್ಠರು
ತೋಯಜಾಕ್ಷನಂತರಂಗದ ಭಕ್ತರು
ಹಯಮುಖರೂಪಿ ಶ್ರೀ ಹರಿಯನು ಭಜಿಪರು
ದಯಾಸಮುದ್ರರು ಗುರುರಾಘವೇಂದ್ರರು ಅ.ಪ
ಮಂಗಳ ವರಹಜೆತಟದಲ್ಲಿರುತಿಹ ಬೃಂದಾವನಗತರು ಸದ್ಗುರು
ಅಂಗಜನಯ್ಯನ ಭಕ್ತಿಲಿ ಭಜಿಪರು ಭಕ್ತರ ಪೊರೆಯುವರು
ಹಿಂಗದೆ ಶ್ರೀನರಸಿಂಗನ ಸೇವಿಸಿ ಸಾಕ್ಷಾತ್ಕರಿಸಿಹರು ಬಹು
ಭಂಗಗೊಳಿಪ ಸಂಸಾರವ ದಾಟಿಸಿ ಹರ್ಷವಪಡಿಸುವರು
ತಂಗಿ ಮಂಚಾಲೆಲಿ ಸೇವಿಪ ಭಕುತರ
ಹಿಂಗದೆ ಪೊರೆಯುವ ನಮ್ಮೀ ಗುರುಗಳು
ಕಂಗೆಡಿಸದೆ ತಾ ವರವನಿತ್ತು ಶ್ರೀ
ರಂಗನ ಕರುಣೆಗೆ ಪಾತ್ರರ ಮಾಡ್ವರು 1
ಪರಿಪರಿಯಲಿ ತಾ ಕರೆಯಲು ಶೀಘ್ರದಿ ಬರುವಾರು ಕರುಣಿಯು
ಪುರಜನರೆಲ್ಲರ ಪೊರೆಯಲು ತಾ ಬಹುಪರಿಯಲ್ಲಿರುತಿಹರು
ಕರವ ಎತ್ತಿ ತಾ ಅಭಯವ ತೋರುತ ಜನರ ತೋಷಿಪರು ವರ
ತಿರುಪತಿ ದೊರೆ ಶ್ರೀನಿವಾಸನ ಪ್ರೀತಿಗೆ ವೀಣೆಯ ನುಡಿಸುವರು
ಗುರುಮೂಲರ ಆವೇಶಾಯುಕ್ತರು
ಪರಿಪರಿ ಭೂತಪ್ರೇತವ ಕಳೆವರು
ಸಿರಿಸಂಪತ್ತನು ಕೊಡುತಲಿ ಬೇಗನೆ
ವರಭಕ್ತಿ ಜ್ಞಾನ ವೈರಾಗ್ಯವ ಕೊಡುವರು 2
ಮೂರವತಾರದಿ ಹರಿಯನು ಸೇವಿಸಿ ಕೀರ್ತಿಯ ಪಡೆದವರು ಈ ಗುರು
ಪರಿಮಳ ಮುಂತಾದ ಗ್ರಂಥವ ರಚಿಸಿ ಜ್ಞಾನವ ಬೀರಿದರು
ಸ್ಮರಿಸಲು ಇವರ ಭವ್ಯದ ನಾಮವೆ ಧೈರ್ಯವ ತುಂಬುವುದು
ಸೇರಿಸಿ ಹರಿದಾಸ ಪಂಥಕೆ ಯೋಗ್ಯರ ವರಗಳನೀಯುವರು
ಹರಿ ಸರ್ವೋತ್ತಮ ತತ್ತ್ವವ ಸಾರುತ
ಧರೆಯೊಳು ಬೆಳಗುವ ಬೃಂದಾವನದೊಳು
ಧೀರರು ಇರುವರು ನೂರುಏಳು ವರ್ಷವು
ದೊರೆ ಪಂಢರಿನಾಥವಿಠಲನ ಕರುಣೆಲಿ 3
***