Showing posts with label ಹರಿವಿಷ್ಣು ರೂಪಾತ್ಮಕ vijaya vittala ankita suladi ಸೃಷ್ಟಿ ಸುಳಾದಿ HARI VISHNU ROOPATMAKA SRUSHTI SULADI. Show all posts
Showing posts with label ಹರಿವಿಷ್ಣು ರೂಪಾತ್ಮಕ vijaya vittala ankita suladi ಸೃಷ್ಟಿ ಸುಳಾದಿ HARI VISHNU ROOPATMAKA SRUSHTI SULADI. Show all posts

Friday, 1 October 2021

ಹರಿವಿಷ್ಣು ರೂಪಾತ್ಮಕ vijaya vittala ankita suladi ಸೃಷ್ಟಿ ಸುಳಾದಿ HARI VISHNU ROOPATMAKA SRUSHTI SULADI

Audio by Mrs. Nandini Sripad


 ಶ್ರೀವಿಜಯದಾಸಾರ್ಯ ವಿರಚಿತ  ಪದ್ಮಕಲ್ಪ ಸೃಷ್ಟಿ ಸುಳಾದಿ 

(ಬ್ರಹ್ಮದೇವರ 51ನೇ ವರ್ಷದ ಪ್ರಥಮ ದಿನ) 


 ರಾಗ ಪಂತುವರಾಳಿ 


 ಧ್ರುವತಾಳ 


ಹರಿ ವಿಷ್ಣು ರೂಪಾತ್ಮಕ ಚತುರವಿಂಶತಿ ತತ್ವ

ಬೆರಸಿ ಸ್ಪಷ್ಟದಿಂದ ಬೊಮ್ಮಾಂಡವ 

ವಿರಚಿಸಿದನು ಉದಯಕಾಲದೊಳೈವತ್ತು ಕೋಟಿ

ಪರಿಮಿತ ಯೋಜನ ವಲಯಾಕಾರ

ನಿರಿಕ್ಷಿಸು ಈ ಪ್ರಕಾರ ದಳವನ್ನು ತಿಳಿದು ಮುಂ -

ದರಿದು ನೋಳ್ಪದು ಇದಕೆ ನೂರು ಕೋಟಿ

ಧರಣಿ ಆವರಣವು ಅಲ್ಲಿಂದ ಮೇಲು ಭಾಗ

ಇರುತಿಪ್ಪವು ಕೇಳಿ ಉದಕಾಗ್ನಿ ಮರುತಾಕಾಶ

ತರುವಾಯ ಮಹನಹಂಕಾರವಿದರೊಳು ಕಾರಣವುಂಟು

ಮರಳೆ ಮಹತತ್ವ ಅವ್ಯಕ್ತದ ಸಮೇತ

ಸ್ಥಿರವಾಗಿ ಯಿಪ್ಪದು ಬೊಮ್ಮಾಂಡಕೆ ಸುತ್ತಲು

ಎರಡೈದಾವರಣಾ ಒಂಭತ್ತು ಹತ್ತು ಯೆನಿಸುವದು

ಸಿರಿ ಬೊಮ್ಮಾದಿಗಳು ತಾತ್ವಿಕರಾಗಿ ಇರುವರು

ಹಿರಿದಾಗಿ ಒಂದೊಂದಕ್ಕೆ ದಶಮಡಿ ಗುಣಿತದಿಂದ

ಧರಣಿಯ ಬಿಟ್ಟು ಮೇಲಿಂದತ್ತ ಯೆಣಿಸುವದು

ಪರಮ ಭಕುತಿಯಿಂದ ಹರಿ ವ್ಯಾಪಾರವ

ಇರಳು ಹಗಲು ತುತಿಸಿ ಧನ್ಯನಾಗೊ

ಸುರರು ಅಂಶಗಳಿಂದ ತುಂಬಿಹ್ಯರು

ಕಾರ್ಯ ಧಾರರಾಗಿ ತಮ್ಮ ತಮ್ಮ ಉದ್ಯೋಗದಿ

ಹರಿಯೆ ಬಾಹಿರ ಸರ್ಗ ಮಾಡಿ ಆಮ್ಯಾಲೆ ವಿ -

ಸ್ತರಿಸಿದ ವೊಳಗಿನ ಬೊಮ್ಮಾಂಡವ

ವಿರಿಂಚಿಯ ಗರ್ಭದಲಿ ಯಿಟ್ಟು ವಿನೋದದಿಂದ

ಸಿರಿ ಕೂಡ ಬೊಮ್ಮಾಂಡವ ಪ್ರವೇಶಿಸೆ

ಸುರರ ಸಾವಿರ ವರುಷ ಮಲಗಿದ್ದ ಪರಮಾತ್ಮ

ಹರಿ ಪ್ರೀತನಾಗಿ ನಾಭಿಕಮಲದಿಂದ

ಸರಸಿಜಸಂಭವನ ಪೆತ್ತ ಪ್ರೇಮದಿಂದ

ಹಿರಣ್ಯಗರ್ಭಾಖ್ಯ ನಾಮದಲ್ಲಿ

ಎರಡೇಳು ಭುವನಾತ್ಮಕ ವಾರಿಜ ಸತ್ಯಲೋಕದ

ಪರಿಯಂತ ಬೆಳೆಯಿತು ಪಾತಾಳವಿಡಿದು

ಮೆರೆವ ವೈಭವ ಮೂರ್ತಿ ವಿಜಯವಿಟ್ಠಲರೇಯ 

ವರ ಪದ್ಮನಾಭ ರೂಪಾತ್ಮಕನಾದ ಉರಗಶಾಯಿ ॥ 1 ॥ 


 ಮಟ್ಟತಾಳ 


ಜನನವಾದಾಕ್ಷಣಕೆ ನಾಲ್ಕು ದಿಕ್ಕನು ನೋಡಾ

ಆನನ ನಾಲ್ಕಾದವು ಬ್ರಹ್ಮದೇವರಿಗೆನ್ನಿ

ಮಣಿಭೂಷಣ ಅಕ್ಷಮಾಲೆ ಜ್ಞಾನಮುದ್ರೆ

ಘನ ದಂಡ ಕಮಂಡುಲ ಚತುರ ಹಸ್ತ

ಮಿನಗುವ ಉಪವೀತ ಶುಭ್ರ ವಸನ ದ್ವಯವು

ವನಜಾ ಮಧ್ಯದಲ್ಲಿ ತನುಜಾನಾಗಿ ಕುಳಿತು

ವನಜಾಗರ್ಭನು ತನ್ನ ನೋಡಿಕೊಂಡ ಮೇ -

ಲನಿತು ನೋಡಲಾಗಿ ಐದನೆ ಮೊಗವಾಯಿತು

ಚಿನುಮಯ ಮೂರುತಿ ವಿಜಯವಿಟ್ಠಲರೇಯನ 

ಮನದಿಚ್ಛೆ ಲೀಲೆ ಆವಾವನೆಣಿಸುವನೊ ॥ 2 ॥ 


 ತ್ರಿವಿಡಿತಾಳ 


ಅದೆ ಸಮಯದಲ್ಲಿ ಪದುಮಾತ್ಮ ದು -

ರ್ಗಾದೇವಿಯು ಮಹಚಂಡ ಮಾರುತ ಪುಟ್ಟಿಸಿ

ಉದಕ ಬಿಂದುಗಳಿಂದ ಬ್ರಹ್ಮರಾಯನ ಗಾ -

ತ್ರದ ಮೇಲೆ ಸೂಸಿ ತೋಯಿಸಿದಳಂದು

ವಿಧಿ ತಾನೆ ಬೆರಗಾಗಿ ಮಹ ಅಂಧಕಾರದೊಳು

ಗದಗದನೆ ನಡುಗುತ ಮಹಾ ಘಾಳಿಯಿಂದ

ಉದಕದ ಥೆರೆಯಿಂದ ಪೀಡಿತನಾಗಿ ಅಂ -

ಜಿದ ಕ್ಷಣಮಾತುರ ತನ್ನ ಪಿತನ

ಪದ ಪದುಮ ಸ್ಮರಿಸಿದನು ಯೇನೆಂಬೆ ಬೊಮ್ಮನಿಗೆ

ಮುದದಿ ಅಜ್ಞಾನ ಭಯ ನಾಲ್ಕು ಎರಡು ಸಾರಿ

ಒದಗಿದವು ನೋಡಾ ನಾನಾ ಪರಿಯಿಂದಲಿ

ಪದುಮ ಸಂಭವಗೆ ಈ ಕಾಲದಲ್ಲಿ

ಇದೆ ಸತ್ಯವೆನದಿರಿ ಅನಾದಿ ನಿರ್ದೋಷ

ವಿಧಿಗೆ ಯೆತ್ತಣ ದೋಷ ಈ ವಾರುತಿ

ಪದುಮ ಬಾಂಧವ ಮಧ್ಯಾಹ್ನದಲ್ಲಿಗೆ ಬಂದ -

ರದರಂತೆ ಕಾಣೊ ಚಂಚಲ ತೋರುವ

ಮದಡ ಮಾನ್ನವರಿಗೆ ಅಜ್ಞಾನಿಯಂತೆ ತೋ -

ರಿದ ತನ್ನ ವಿಚಿತ್ರ ಮಹಿಮೆಯನ್ನು

ಉದಿಸಿದ ಜನರಿಗೆ ಈ ಪರಿಯಾಗಲೆಂದು

ಪದುಮನಾಭನ ಮಗನು ನಡುಗಿದನು

ಇದನೆ ಯೆಣಿಸದಿರಿ ಇನ್ನೊಂದು ರಹಸ್ಯ

ಸದಮಲವಾಗಿದೆ ಬಲು ಸೋಜಿಗ

ತ್ರಿದಶ ಗಣಕೆ ದುಃಖ ಲೇಶ ಮಾತುರವಿಲ್ಲ

ಮುದ ಪುಟ್ಟುವದು ದಿವಸ ದಿವಸದೆಡಿಗೆ

ಚದುರರಿವರು ಕಾಣೋ ಕಿಂಚಿದಸುರಾವೇಶ

ಒದಗಿದಾಗಲು ದುಃಖ ಪ್ರಾಪ್ತಾಹದೊ

ಇದರಂತೆ ತಿಳಿ ದೈತ್ಯ ಜಾಲಕೆ ಸುಖವಿಲ್ಲ

ತ್ರಿದಶರಾವೇಶದಿಂದಲಿ ಬಪ್ಪದೊ

ಮಧುವೈರಿ ವಿಜಯವಿಟ್ಠಲರೇಯ ವೈಕುಂಠ

ಸದನನ ಕ್ರೀಡಿಗೆ ನಮೊ ನಮೊ ಕರ ಮುಗಿದು ॥ 3 ॥ 


 ಅಟ್ಟತಾಳ 


ಬೆರಗಾಗಿ ಪರಮೇಷ್ಠಿ ಮಹ ಜಲಧಿಯಲ್ಲಿ

ಇರುತಿದ್ದು ನೋಡಿದನೀ ಕಮಲಕೆ ಒಂದೊಂದು

ಗುರುತು ಕಾಣಲಿ ಬೇಕೆಂದಾಲೋಚಿಸಿ

ಸರನೆ ನಾಳ ಮಧ್ಯವಿಳಿವಿಳಿದು ಪೋಗಲು ಮಹ -

ಬಿರಸು ಉನ್ನತವಾಗಿ ಇರಲಾಗಿ ಕಂಡು ಅ -

ಚ್ಚರಿಯ ದೇವರ ಮೋಹ ವರ್ಜನೆ ಬ್ರಹ್ಮ

ಥೆರೆ ಚಂಡವಾತ ಮಹಾಧ್ವನಿ ಸುಳಿ ದೆಶೆ

ಹಿರಿದಾಗಿ ಹೊಡಸಿಕೊಂಡು ಉದಕದೊಳಗೆ ತಾ -

ನರಿಯಲಾರದೆ ಭಯದವನಂತೆ ತೋರಿದ

ತಿರುಗಿ ಊರ್ಧ್ವ ದೇಶವ ಯೈದಿದ ತಾನಾಗೆ ಕು -

ಳ್ಳಿರಲಾಶ್ರಯವಾದ ಕಮಲಪೀಠದಲ್ಲಿ

ಹರಿಯಾ ಭಜನೆಯಲ್ಲಿ ಅತ್ಯಂತ ಉದ್ಯೋಗ

ತರನಾಗಿ ರೇಚಕ ಕುಂಭಕ ಪೂರಕ

ಎರಡೊಂದರಲಿ ವಾಯು ಧಾರಣಿ ಮಾಡಿ ವಿ -

ಸ್ತರ ಸಮಾಧಿ ಯೋಗ ಧ್ಯಾನಂಗತನಾಗೆ

ಹರಿ ತಾನೆ ತಪ ತಪವೆಂದಾ ಮಾತಿಗೆ ಯಿಂಥ

ಸುರರ ಸಾವಿರ ವರುಷ ತಪವ ಮಾಡಿದನು

ಕರುಣದಿಂದಲಿ ಸ್ವಾಮಿ ಪ್ರಸನ್ನನಾದ ಮು -

ಕ್ತರ ಸಹಿತ ನಾನಾ ದಿವ್ಯ ಭೂಷಣದಿಂದ

ಮೆರೆವ ತನ್ನ ಸ್ವಮೂರ್ತಿಯು ಹದಿನಾರು

ಕರೆಸಿಕೊಂಡವು ವಾಸುದೇವಾದಿ ವಿಮಲೋ -

ತ್ಕರಷಣಿ ಮೊದಲಾದ ಅಣಿಮಾದ್ಯ ಪೆಸರಲಿ

ಪರಿವಾರದಿಂದಲಿ ಸೇವೆ ಕೊಳುತಲಿದ್ದು

ಪರಮೇಷ್ಠಿಯಿಂದಲಿ ದಿವ್ಯ ಸಾವಿರ ವರುಷ

ಪರಮ ಮುಖ್ಯ ಸ್ತೋತ್ತರ ಮಾಡಿಸಿಕೊಂಡು

ಕರುಣದಿಂದಲಿ ಸರ್ವ ವೇದ ಬ್ರಹ್ಮ ತರ್ಕ

ಇರದೆ ಪಂಚರಾತ್ರಾಗಮ ವುಪದೇಶಿಸಿ

ಹರಿ ಅದೃಶ್ಯನಾದ ತರುವಾಯ ಅಜದೇವ

ವರುಷ ಸಾಸಿರವನ್ನು ಓದಿದ ವೇದ ಉ -

ಚ್ಚರಿಸಿಕೊಳುತಲಿದ್ದು ಸರ್ವ ಜಗವನು

ತ್ವರದಿ ಪುಟ್ಟಿಸುವ ಮನಸು ಮಾಡಿ

ನಿರುಪಮ ನಿರ್ಗುಣ ನಿಧಿ ವಿಜಯವಿಟ್ಠಲನ್ನ 

ಪರಿಪರಿ ರೂಪಗಳ ಧ್ಯಾನವ ಮಾಡುತಾ॥ 4 ॥ 


 ಆದಿತಾಳ 


ನಳಿನ ಚತುರದಶ ಭುವನಾತ್ಮಕವಾಗಿ

ಬೆಳೆಯಿತು ಇದಕೆ ಆಧಾರಭೂತವಾಗಿ

ನಳಿನಸಂಭವ ತನ್ನ ವೈರಾಜ ರೂಪ ಧರಿಸಿ

ಸಲೆ ಮೆರೆದಾ ಮಹದಹಂಕಾರ ತತ್ವದಿ ನಿರ್ಮಾಣ

ಜಲಜನಾಭ ತಾನೆ ಸರ್ವ ಜೇವರಾಶಿ -

ಗಳ ಸಹಿತ ಪುರುಷರೂಪದಿಂ ಪ್ರವೇಶಿಸಿದ

ತಲೆ ಮೊದಲು ಮಾಡಿ ಪಾದ ಮೂಲ ಪರಿಯಂತ

ಬೆಳಗಿದವು ಹದಿನಾಲ್ಕು ಲೋಕಂಗಳು

ಬಲು ಜನ ಪುಟ್ಟಿದರು ತತ್ವಾಭಿಮಾನಿಗಳು

ಬಲವಂತ ರುದ್ರನಿಂದ ಪೂರ್ವದಂತೆ ಉತ್ಪತ್ತಿ

ತಿಳಿವದು ಆಮ್ಯಾಲೆ ವಿರಾಟ ಕಲ್ಪದಲಿ

ನೆಲೆಗೊಳಿಸಿತು "ಅಹಂ ತ್ವಾಹಂ" ಯೆಂದು ಪ್ರಾಣಾ

ಕಲಹ ಪುಟ್ಟಿತು ತತ್ವರೊಂದಾಗಿ ನಿ -

ಶ್ಚಲ ಮಾಡಬೇಕೆಂದು ಒಂದು ಶರೀರದಲಿ

ಬಲು ಪರೀಕ್ಷೆಯ ಮಾಡಿ ಪ್ರಾಣದೇವರಿಗೆ ಪ್ರ -

ಬಲತನದಿಂದಲಿ ಜೀವ ದೇವಾಧಿಪತಿ

ನಿಲಕರವಾಯಿತು ಸೂತ್ರನಾಮಕ ಪ್ರಾಣಗೆ

ಬಲಿಯ ತಂದಿತ್ತ ನಮಗೆ ಸ್ವಾಮಿ ನೀನೆಂದು

ತಲೆಬಾಗಿ ಸ್ತುತಿಸಿ ಕಾವುಥಾನೆಂದು ಕರೆದರು

ಜಲಜಸಂಭವಗೆ ಐದನೆ ಶೀರ್ಷವುಂಟಾದ್ದು

ವಲಿಮೆಯಿಂದಲಿ ಕೇಳಿ ರುದ್ರನಿಗೆ ಮೋಚಕವು

ಪೊಳೆವ ಸಮಸ್ತ ಜಗತ್ತನ್ನು ಪುಟ್ಟಿಸಿ ಅವರ

ಬಳಗದೊಡನೆ ಮೊದಲು ಯಾಗಗೋಸುಗ ಸಂಭಾರಾದಿ -

ಗಳನು ಸೃಜಿಸಿ ಹರಿಯ ಪ್ರೀತಿಬಡಿಸಲಾಗಿ

ಒಲಿದು ಪ್ರಸನ್ನನಾದ ಪರಮಾತ್ಮ ಲಕ್ಷ್ಮೀಪತಿ

ಅಲೌಕಿಕ ಸ್ತೋತ್ರದಿಂದ ಸುರರಿಂದ ತೃಪ್ತನಾಗಿ

ಸುಲಭ ಮೂರುತಿ ಅಂತರ್ಧಾನ ಯೈದಿದನು

ಇಳಿಯೊಳಗಿವರು ಪೂರ್ವಸಾಧ್ಯರು ಯೆಂದು

ಕಲಕಾಲ ಪ್ರಸಿದ್ಧರಾದರು ದೇವತೆಗಳು

ಸಲಹಿದ ಬೊಮ್ಮನಿವರ ಅನುಲೋಮ ಪ್ರತಿಲೋಮ

ಕುಲದಿಂದ ಸಮಸ್ತರಿಗೆ ಬುದ್ಧಿಯನಿತ್ತು

ಜಲಜಕಲ್ಪಾಂತದಲಿ ಈ ಪ್ರಕಾರವಾಗೆ

ಪ್ರಳಯ ಮಾಡುವದಕ್ಕೆ ಅಂತ್ಯದಿನದಲ್ಲಿ

ಜಲಜಪೀಠನು ಇಚ್ಛೆವುಳ್ಳವನಾದ ಭೂಮಿಯ

ಮಳೆ ಮಿಕ್ಕಾದದರಿಂದ ಮುಳುಗಿಸಿದ ನೀರೊಳಗೆ

ಲಲನೆ ಗಾಯಿತ್ರಿ ಸಹಿತ ಸತ್ಯಲೋಕದಲ್ಲಿ

ಮಲಗಿದ್ದು ಸರ್ವ ಜೀವರನ ಪಾನವ ಮಾಡಿ

ನಲುವಿಂದ ಇದ್ದನು ಪ್ರಕೃತಿ ಸಂಗಡ ಪುರುಷ

ಕಳೆಗುಂದದಲೆ ಯಿಲ್ಲಿಗೆ ಪದ್ಮಕಲ್ಪ ಕಡೆಭಾಗ

ತಿಳಿಯಬೇಕು ಜ್ಞಾನಿಗಳು ಮುಂದಿನ ವರಾಹಕಲ್ಪ

ಭಳಿರೆ ಭಳಿರೆ ಇದೆ ತತ್ವಕ್ಕೆ ಸಾನುಕೂಲ

ಜಲಧಿಶಯನ ನಮ್ಮ ವಿಜಯವಿಟ್ಠಲರೇಯ 

ಸುಳಿದಾಡುವ ಮುಂದೆ ಈ ಪರಿ ಧೇನಿಸಲು ॥ 5 ॥ 


 ಜತೆ 


ಪದ್ಮಕಲ್ಪದ ಕಥೆ ಕೇಳಿದ ಮನುಜಂಗೆ

ಪದ್ಮಾ(ಪದ್ಮಿ)ವಲ್ಲಭ ನಮ್ಮ ವಿಜಯವಿಟ್ಠಲ ಕಾವ ॥


****