Showing posts with label ಬಿಡು ಬಿಡು ಇನ್ನು ಸೋಗಾಚಾರ ಒಡಿಯ ಬಲ್ಲನು vijaya vittala. Show all posts
Showing posts with label ಬಿಡು ಬಿಡು ಇನ್ನು ಸೋಗಾಚಾರ ಒಡಿಯ ಬಲ್ಲನು vijaya vittala. Show all posts

Thursday, 17 October 2019

ಬಿಡು ಬಿಡು ಇನ್ನು ಸೋಗಾಚಾರ ಒಡಿಯ ಬಲ್ಲನು ankita vijaya vittala

ವಿಜಯದಾಸ
ಬಿಡು ಬಿಡು ಇನ್ನು ಸೋಗಾಚಾರ |
ಒಡಿಯ ಬಲ್ಲನು ನಾನು ನಿನ್ನ ವಿಚಾರ ಪ

ತುಡಗತನ ಕಲಿತು ನೆರೆಹೊರೆಯವರ ಮನೆಯಲ್ಲಿ |
ಗಡಿಗೆ ತುಪ್ಪಾ ಬೆಣ್ಣೆ ಮೊಸರು | ಹಾಲು |
ಕುಡಿದು ಛೀ ಹಳಿ ಕದ್ದ ಕಳ್ಳನೆನೆಸಿಕೊಂಡ |
ಪಡಚುತನವಲ್ಲದೆ ಭಾರಕನು ನೀನಲ್ಲ 1

ಸೀರಯನು ಕದ್ದಂದು ಕಡವಿನ ಮರವನೇರಿ |
ಊರ ನಾರಿಯರ ಮಾನಕ್ಕೆ ಸೋತು ||
ಜಾರತನದವನಾಗಿ ತಿರಗಿ ಜಗದಾ ಭಂಡ |
ಪೋರರಿಗೆ ಪೋರನಲ್ಲದೆ ಹಿರಿಯನಲ್ಲ2

ಮುನಿಗಳೆಜ್ಞದಲ್ಲಿ ತಿರಿತಂದು ಗೊಲ್ಲತೆರ |
ತನುಜರ ಸಂಗಡಲಿದ್ದು ಎಂಜಲುಂಡು |
ಮನುಜದೇಹವ ತೆತ್ತು ಬಿನಗು ಲೀಲಾಕೃತಿ |
ದನಗಾವಿ ಎಲ್ಲದೆ ದೊರೆ ಮಗನು ನೀನಲ್ಲ 3

ಯಾತಕ್ಕೆ ಬಾರದ ಕುನಪೆಣ್ಣಿಗೆ ಮೆಚ್ಚಿ |
ಮಾತುಳನ ಕೊಂದು ಮುತ್ತೈಯಗೊಲಿದು |
ಭೀತಿಯಲಿ ಪರರಾಯನ ಮಗಳ ಕೊಂಡು ಬಂದ |
ಯಾತರ ಪೌರುಷದವನು ಲೋಕದೊಳಗೆಲ್ಲ 4

ತೊತ್ತಿನ ಮಗನಲ್ಲಿ ವುಂಡು ಬಿಗಿಸಿಕೊಂಡು |
ಮಿತ್ರಭೇದವನಿಕ್ಕಿ ಬಂಧುಗಳಿಗೆ |
ತೆತ್ತಿಗನು ನೀನಾಗಿ ವಾಜಿಗಳ ಪಿಡಿದು |
ಹತ್ಯವ ಮಾಡಿಸಿದೆ ಉತ್ತಮನು ನೀನಲ್ಲ 5

ಅಣ್ಣ ತಮ್ಮಂದಿರನು ಅಗಲಿಸಿ ವೈರದಲಿ |
ನುಣ್ಣಗೆ ಒಬ್ಬರೊಬ್ಬರ ಕೊಲ್ಲಿಸಿ |
ಇನ್ನೇನು ಉಸರುವೆನು ಕಟ್ಟಕಡಿಗೆ ಎಲ್ಲ |
ನಿನ್ನ ಕುಲವನು ಕೊಂದೆ ಇದು ಪುಶಿಯಲ್ಲ 6

ತಿಳಿಯಲಾರರು ನಿನ್ನ ಠಕ್ಕು ಠವಳಿಯ ಮಾಯ |
ಜಲಜ ಸಂಭವ ಶಿವ ಇಂದ್ರಾದ್ಯರು |
ಸುಲಭ ದೇವರದೇವ ವಿಜಯವಿಠ್ಠಲರೇಯ |ವೊಲಿದ ದಾಸರಿಗೆ ಸಂತಾನ ಕುಲದೀಪ7
*********