ankita ನಾಗೇಶಶಯನ
ರಾಗ: [ಷಣ್ಮುಖಪ್ರಿಯ] ತಾಳ: [ಆದಿ]
ಮಂತ್ರಾಲಯದಿ ಇರುವ ಶ್ರೀ ರಾಘವೇಂದ್ರ ಪ
ಬೃಂದಾವನದಿ ಮೆರೆವ ಮಂತ್ರಾಲಯದಿ ಇರುವ
ಅಂತಃಕರಣದಿ ಕರೆಯೆ ನಿಂತಲ್ಲೆ ಒದಗುವ ಅ.ಪ
ಕೃತಯುಗದಲ್ಲಿ ದೈತ್ಯಪತಿಯಲ್ಲಿ ಜನಿಸಿದ
ಅತುಳಮಹಿಮ ನರಹರಿಯನ್ನು ಭಜಿಸಿದ 1
ವ್ಯಾಸರಾಜರೆನಿಸಿ ಶ್ರೀಕೃಷ್ಣನ್ನ ಕುಣಿಸಿ
ದಾಸಜನರಿಗೆ ಉಪದೇಶಗ್ರಂಥಗಳ ರಚಿಸಿ 2
ಮಂತ್ರಾಲಯದಿ ನಿಂತು ಕಂತುಪಿತನ ಪಾದಾ-
ಕ್ರಾಂತರಾಗಿ ಬರುವ ಸಂತರಸಲಹುತ 3
ಯತಿಯು ತಾನಾಗಲು ಸತಿಯು ಬಹು ದುಃಖದಿ
ಮೃತಿಪೊಂದೆ ಕೂಪದಿ ಗತಿಯಿತ್ತು ಸಲಹಿದೆ 4
ಹನುಮಭೀಮಮಧ್ವರನು ಶ್ರದ್ಧೆಯಿಂದಲಿ
ಅನುದಿನ ಸೇವಿಸಿ ಘನಜ್ಞಾನಪೊಂದುತ 5
ಸುಧೀಂದ್ರಯತಿ ಕರಪದುಮಸಂಭವನಾಗೆ
ಮುದತೀರ್ಥ ಮತವನ್ನು ಹದನಾಗಿ ಸಾರುತ 6
ಸಿರಿರಾಮ ನರಹರಿ ಸಿರಿಕೃಷ್ಣ ವೇದವ್ಯಾಸ
ವರಮೂರ್ತಿಗಳ ಮನದಿ ನಿರುತದಿ ಜಪಿಸುತ 7
ಭೂತಪ್ರೇತಪಿಶಾಚಿ ಭಯಗಳೆಂಬ
ಪಾತಕಗಳಕಳೆದು ದೂತರಸಲಹುತ 8
ವರಮಧ್ವಶಾಸ್ತ್ರಗಳ ಮರ್ಮಗಳನ್ನೆ ತಿಳಿದು
ಪರಿಮಳ ಗ್ರಂಥವ ಹರುಷದಿ ಬೋಧಿಸುತ 9
ಮೂಕ ಬಧಿರ ಅಂಧರ ವ್ಯಾಕುಲಗಳ ಕಳೆದು
ಶ್ರೀಕಾಂತ ಹರಿಯಲ್ಲಿ ಏಕಾಂತಭಕ್ತಿ ಕೊಡುತ 10
ಬೃಂದಾವನದಿ ಸಕಲವೃಂದಾರಕರಸಹಿತ
ನಂದನಂದನನ ನಿಲಿಸಿ ಛಂದದಿ ಸೇವಿಸುತ 11
ತುಂಗತರಂಗಿಣಿ ಮಂಗಳತೀರದಿ
ಶೃಂಗಾರ ಸದನದಿ ರಂಗನ್ನ ಪೂಜಿಸುತ 12
ಸಂತಾನ ಸಂಪತ್ತು ಸುಜ್ಞಾನ ಮತಿಯಿತ್ತ-
ನಂತ ಕಾಲಗಳಲ್ಲಿ ಸಂತರ ಪೊರೆಯುತ 13
ದೇಶದೇಶದಿ ಬಂದ ದಾಸಜನರ ಬಹು
ದೋಷವ ಕಳೆದು ಸಂತೋಷವ ನೀಡುತ 14
ರಾಗದ್ವೇಶಗಳ ನೀಗಿ ನಿರ್ಮಲರಾಗಿ
ನಾಗೇಶಶಯನನ ಯೋಗಾದಿ ನೋಡುತ 15
***