ದರುಶನವಾಯಿತು ಪಂಢರೀಶನ ll ಪ ll
ದರುಶನದಿಂದಲಿ ಧನ್ಯರಾದೆವು
ಸರಸಿಜಭವನ ನಾಭಿಯಲಿ ಪಡೆದವನ ll ಅ ಪ ll
ತಂದೆತಾಯಿಯರ ಭಕ್ತಿಯಿಂದ ಸೇವಿಸುವರಿಗೊಲಿದಾ-
ನಂದಪದವಿಯನಿತ್ತ ನಂದನ ಕಂದನ ll 1 ll
ಇಷ್ಟ ಭಕುತ ಕೊಟ್ಟ ಇಟ್ಟಿಗೆ ಮೇಲೆ ನೆಲಸಿ
ಶಿಷ್ಟರ ಸಲಹುವ ವಿಟ್ಟಠಲರಾಯನಂಘ್ರಿ ll 2 ll
ಉರದಲಿ ಸಿರಿಯನು ಧರಿಸಿ ಸುರರ ಕಾರ್ಯ
ನೆರವೇರಿಸುವ ಜಗದ್ಭರಿತನ ಶ್ರೀಪಾದ ll 3 ll
ಭಾಗವತರ ಭವರೋಗಗಳ ಕಳೆವ
ನಾಗಶಯನ ನಿಖಿಲಾಗಮವೇದ್ಯನ ll 4 ll
ರುಕುಮಾಬಾಯಿಗೆ ಸುಖವ ಕರುಣಿಸಿದ
ಮುಕುತಿದಾಯಕ ಗುರುರಾಮವಿಟ್ಠಲ ಚರಣ ll 5 ll
***