ರಾಗ ರಂಜನಿ
ನೀನೇ ಬಲ್ಲಿದನೋ ಹರಿ
ನಿನ್ನ ದಾಸರು ಬಲ್ಲಿದರೊ ||ಪ||
ನಾನಾ ತೆರದಿ ನಿಧಾನಿಸಿ ನೋಡಲು
ನೀನೇ ಭಕ್ತರಾಧೀನನಾದ ಮೇಲೆ ||ಅ||
ಜಲಜಭವಾಂಡಕ್ಕೆ ಒಡೆಯ ನೀನೆನಿಸುವೆ
ಬಲು ದೊಡ್ಡವನು ನೀನಹುದೊ
ಅಲಸದೆ ಹಗಲಿರುಳೆನ್ನದೆ ಅನುದಿನ
ಒಲಿದು ಬಲಿಯ ಮನೆಬಾಗಿಲ ಕಾಯ್ದ ಮೇಲೆ ||
ಖ್ಯಾತಿಯಿಂದಲಿ ಪುರುಹೂತಸಹಿತಸುರ
ವ್ರಾತವು ನಿನ್ನನು ಓಲೈಸಲು
ಭೂತಳದೊಳು ಸಂಪ್ರೀತಿಗೆ ಸಿಲುಕಿ ನೀ
ಪಾರ್ಥನ ರಥಕೆ ಸುತನಾದ ಮೇಲೆ ||
ಪರಮಪುರುಷ ಪರಬೊಮ್ಮ ನೀನೆನುತಲಿ
ನಿರತ ಶ್ರುತಿಯು ಕೊಂಡಾಡುತಿರೆ
ವರಪಾಂಡವರ ಮನೆಯೂಳಿಗ ಮಾಡ್ಯವರು
ಕರೆಕರೆದೆಲ್ಲಿಗೆ ಪೋಗಿ ಕಾಯ್ದ ಮೇಲೆ ||
ಧುರದಲ್ಲಿ ಪಣೆಗೆ ಹೊಡೆಯಲು ಭೀಷ್ಮನ ಸಂ-
ಹರಿಪೆನೆನುತ ಚಕ್ರ ಝಳಪಿಸುತ
ಭರದಿಂದ ಬರಲಲ್ಲಿ ಹರಿನಾಮ ಬಲವಿರೆ
ಪರಿಕಿಸಿ ನೋಡಿ ಸುಮ್ಮನೆ ತಿರುಗಿದ ಮೇಲೆ ||
ತರಳ ಕರೆಯಲು ನೀ ತ್ವರಿತದಿ ಕಂಭದಿ ಬಂದು
ನರಮೃಗ ರೂಪದಿಂದವನ ಕಾಯ್ದೆ
ವರಗಳೀವ ಪುರಂದರವಿಠಲ ನಿನ್ನ
ಸ್ಮರಿಪರ ಮನದಲ್ಲಿ ಸೆರೆಯ ಸಿಕ್ಕಿದ ಮೇಲೆ ||
***
ರಾಗ ಶಂಕರಾಭರಣ ಅಟತಾಳ (raga, taala may differ in audio)
pallavi
nInE ballidanO hari ninna dAsaru ballidaro
anupallavi
nAnA teradi nidhAnisi nODalu nInE bhaktarAdhInanAda mEle
caraNam 1
jalaja bhavANDakke oDeya nInenisuve balu doDDavanu nInahudo
alasade hagaliruLennade anudina olidu baliya mane bAgila kAida mEle
caraNam 2
kyAtiyindali puruhUta sahita sura vrAtavu ninnanu Olaisalu
bhUtaLadoLu samprItige siluki nI pArttana rathake sutanAda mEle
caraNam 3
parama puruSa parabomma nInenutali nirata shrutiyu koNDADutire
vara pANDavara maneyULiga mADyavaru kare karedellige pOgi kAida mEle
caraNam 4
dUradalli paNege hoDeyalu bhISmana samharipenenuta cakra jhaLapisuta
bharadinda baralalli harinAma balavire parikisi nODi summane tirugida mEle
caraNam 5
taraLa kareyalu nI tvaritadi kambhadi bandu nara mrga rUpadindavana kAide
varagaLIva purandara viTTala ninna smaripara manadalli sereya sikkida mEle
***