Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಮಂಗಳಂ ಶ್ರೀತುಳಸೀ purandara vittala. Show all posts
Showing posts with label ಜಯ ಮಂಗಳಂ ನಿತ್ಯ ಶುಭಮಂಗಳಂ ಮಂಗಳಂ ಶ್ರೀತುಳಸೀ purandara vittala. Show all posts

Wednesday, 4 December 2019

ಜಯ ಮಂಗಳಂ ನಿತ್ಯ ಶುಭಮಂಗಳಂ ಮಂಗಳಂ ಶ್ರೀತುಳಸೀ purandara vittala

ರಾಗ ಸೌರಾಷ್ಟ್ರ       ರೂಪಕತಾಳ 

ಜಯ ಮಂಗಳಂ ನಿತ್ಯ ಶುಭಮಂಗಳಂ ॥ ಪ ॥
ಮಂಗಳಂ ಶ್ರೀತುಳಸೀದೇವಿಗೆ ।
ಮಂಗಳಂ ವೃಂದಾವನವಾಸಿಗೆ ॥ ಅ ಪ ॥

ನೋಡಿದ ಮಾತ್ರಕ್ಕೆ ದೋಷಸಂಹಾರಿಗೆ ।
ಬೇಡಿದ ವರಗಳ ಕೊಡುವಳಿಗೆ ॥
ಮಾಡೆ ವಂದನೆಯನು ಮನುಜರ ಪಾಪದ ।
ಗೂಡನೀಡ್ಯಾಡುವ ಗುಣವಂತೆಗೆ ॥ 1 ॥

ಮುಟ್ಟಿದ ಮಾತ್ರಕ್ಕೆ ಮುಕ್ತರವ ಮಾಡುವ ।
ಮುದದಿಂದ ಉದ್ಧರಿಸುವ ಮುನಿವಂದ್ಯೆಗೆ ॥
ಕೊಟ್ಟರೆ ನೀರನು ಬೇರಿಗೆ , ಕಾಲನ ।
ಮುಟ್ಟಲೀಸದ ಹಾಗೆ ಮಾಳ್ಪಳಿಗೆ ॥ 2 ॥

ಬಿತ್ತಿ ಬೆಳೆಸಿ ತನ್ನ ಹೆಚ್ಚಿಸಿದವರಿಗೆ ।
ಚಿತ್ತದೊಲ್ಲಭ ಕೃಷ್ಣನ್ನ ಹರುಷದಲಿ ॥
ಅತ್ಯಂತವನು ತಾ ತೋರಿ ಭವದ ಬೇರ ।
ಕಿತ್ತು ಬಿಸಾಡುವೋ ಕೋಮಲೆಗೆ ॥ 3 ॥

ಕೋಮಲವಾಗಿದ್ದ ದಳಮಂಜರಿಗಳ ।
ಪ್ರೇಮದಿಂದಲಿ ತಂದು ಶ್ರೀಹರಿಗೆ ॥
ನೇಮದಿಂದರ್ಚಿಸೆ ಪರಮಾತ್ಮನೊಳು , ಜೀವ ।
ಕಾಮಿತಾರ್ಥವನೀವ ಸದ್ಗುಣಿಗೆ ॥ 4 ॥

ಕಾಷ್ಠವ ತಂದು ಗಂಧ ಮಾಡಿ ಶ್ರೀಕೃಷ್ಣಗೆ ।
ನಿಷ್ಠೆಯಿಂದಲಿ ಲೇಪ ಮಾಳ್ಪರ ॥
ಜ್ಯೇಷ್ಠರೆನಿಸಿ ವೈಕುಂಠದಲಿ ನಿಲಿಸಿ , ಸಂ - ।
ತುಷ್ಟರಾ ಮಾಡುವ ಸೌಭಾಗ್ಯೆಗೆ ॥ 5 ॥

ಅನ್ನವಾನುಂಡರು ನೀಚರ ಮನೆಯಲ್ಲಿ ।
ಉನ್ನಂತ ಪಾಪವ ಮಾಡಿದ್ದರೂ ॥
ತನ್ನ ದಳವ ನೊಂದ ಕರ್ಣದಲ್ಲಿಟ್ಟರೆ ।
ಧನ್ಯರ ಮಾಡುವ ದಯವಂತೆಗೆ ॥ 6 ॥

ಸರಸಿಜನಾಭನ ಸಲುಗೆಯ ರಾಣಿಗೆ ।
ಶರಣಜನರ ಪೊರೆವ ಸದ್ಗುಣಿಗೆ ॥
ತಿರುಪತಿನಿಲಯ ಶ್ರೀಪುರಂದರವಿಠ್ಠಲನ ।
ಚರಣ ಸೇವಕಳಾದ ಚಿನುಮಯಿಗೆ ॥ 7 ॥
********