Audio by Mrs. Nandini Sripad
ಶ್ರೀ ಗೋಪಾಲದಾಸಾರ್ಯ ವಿರಚಿತ ಜ್ಞಾನ ಸಾಧನ ಸುಳಾದಿ
ರಾಗ ಬೇಹಾಗ್
ಧ್ರುವತಾಳ
ಅನಂತ ಜೀವ ಮುಕ್ತಿಯೋಗ್ಯರ ವೊಳಗೆಲ್ಲ
ಆನೊಬ್ಬ ನೀಚ ಚೇತನನು ಕಾಣೊ
ನೀನೆ ಬಲ್ಲೆಯ್ಯಾ ಸ್ವಾಮಿ ಎನ್ನ ಸ್ವರೂಪವನು
ನಾನಾ ಯೋನಿಗಳಲ್ಲಿ ಹಾಕುವನೆ
ಶ್ವಾನ ಮುಂತಾದ ಜೀವರೆಲ್ಲರು ತಮ್ಮ ಗತಿ
ಅನೇಕ ಯೋನಿಗಳು ಐದಿ ಐದಿ ಮಾನವ -
ಯೋನಿಯು ಮುಂತಾದ್ದೆಲ್ಲೆಲ್ಲಿ ಬಂದು
ನಾನಾ ಪರಿ ಸಾಧನಗಳು ಮಾಡಿ ಕಾಣಿಸಿಕೊಂಡು
ನಿನ್ನ ಆತ್ಮಾನಂದ ಸುಖವನು
ಭುಂಜಿಸುವರು ಅಂತ್ಯದಲ್ಲಿ
ಜ್ಞಾನ ಭಕ್ತಿ ಎಂಬೋದು ಎಲ್ಲ ಜೀವರಿಗೆ ಬೇಕು
ನ್ಯೂನ ಅಧಿಕ ತಾರತಮ್ಯವಾಗಿ
ನೀನೆ ಗತಿಯೊ ಸ್ವಾಮಿ ಇನ್ನು ಬರಲಿಲ್ಲವೆಂದು
ತಾನು ಇಹುವ ಜೀವ ಸಾಮಾನ್ಯನೆ
ಏನು ಎನಗೆನ್ನ ನಿನ್ನ ಮೂರ್ತಿ ಎಂದರೆ
ತಾನು ಪುಟ್ಟುವದಯ್ಯಾ ಮಮತೆ ಮನಸಾ
ಪ್ರಾಣಿ ಒಬ್ಬ ಯಃಕಶ್ಚಿತ ತಿಳಿವದಕ್ಕೆ ನಿನ್ನ
ನಾನಾ ಭಕುತರ ಕರುಣ ಅವಗೆ ಬೇಕು
ಏನು ಘಳಿಸಿದರನ್ನ ಘಳಿಸುವ ಹರಿ ನಿನ್ನ
ಜ್ಞಾನ ದೊರಕುವದಿನ್ನು ಬಹು ದುರ್ಘಟಾ
ಜಾಣ ಚನ್ನಿಗರಾಯ ಗೋಪಾಲವಿಟ್ಠಲ ನಿನ್ನ
ಕಾಣುವದಕ್ಕೆ ಜ್ಞಾನ ಚೇತನ ಬೇಕೊ ॥ 1 ॥
ಮಟ್ಟತಾಳ
ಶ್ರುತಿ ಓದಲಿಬೇಕು ಸ್ಮೃತಿ ತಿಳಿಯಲಿಬೇಕು
ಇತರಾರ್ಥಗಳೆಲ್ಲ ನಿರಾಕರಿಸಲಿಬೇಕು
ಮತ ಅಭಿಮಾನ ಬೇಕು ಜಪತಪವು ಬೇಕು
ಪ್ರತಿ ಪ್ರತಿ ಕ್ಷಣದಲ್ಲಿ ಹರಿಯ ಸ್ಮರಣೆ ಬೇಕು
ಪೃಥ್ವಿ ಉದಕ ವಾಯು ಅಗ್ನಿ ಆಕಾಶವು
ಇತರ ದಶೇಂದ್ರಿಯ ತನ್ಮತ್ರಾಗಳೈದು
ಜಿತಮನ ಅಹಂಕಾರ ಮಹತತ್ವವಿನ್ನು
ಚತುರವಿಂಶತಿ ತತ್ವ ತದಭಿಮಾನಿಗಳು
ಸತತ ಹರಿಯು ತಾನು ಸರ್ವ ದ್ವಾರದಿ ತನಗೆ
ಗತಿಗೆ ನಿಯಾಮಕನೆಂಬೋ ಸ್ಮೃತಿ ಬೇಕು
ಪತಿತ ಪಾವನ ಗೋಪಾಲವಿಟ್ಠಲ ಲಕ್ಷ್ಮೀ -
ಪತಿ ಸರ್ವಸ್ಥಳದಿ ವ್ಯಾಪ್ತನೆಂದರಿಯಬೇಕು ॥ 2 ॥
ರೂಪಕತಾಳ
ಮಾಡಬೇಕು ನಾನು ಮಾಡಿಲ್ಲವೆನಬೇಕು
ಆಡಬೇಕು ನಾನು ಆಡಿಲ್ಲವೆನಬೇಕು
ನೀಡಬೇಕು ನಾ ನೀಡಿಲ್ಲವೆನಬೇಕು
ನೋಡಬೇಕು ಕರ್ಮ ಮಾಡಿಸುವದು ತನಗೆ
ಬೇಡಿಕೊಂಬದಕಿನ್ನು ವಿಹಿತಾವಿಹಿತಗಳಿಗೆ
ಕೇಡು ಲಾಭಗಳಿಗೆ ಹಿಗ್ಗಿ ಕುಗ್ಗದಲೆ
ಓಡಿದರೆ ಬಹುಮಂದಿ ವಿಷಯಕ್ಕೆ ನಾ
ಓಡಿದೇನೆಂತೆಂಬೊ ನೋಡು ಶ್ರುತಿ ಇರಲು
ಮಾಡಬೇಕಾದರೆ ಒಂದು ಕರ್ಮ ಎಲ್ಲ
ಕೂಡಿದರೆ ಆಗುವದೆಂದು ಅರಿದುಕೋ
ಪಾಡಿದವರ ಪ್ರಾಣ ಗೋಪಾಲವಿಟ್ಠಲನ್ನ
ಮಾಡಿಪ್ಪ ಕರ್ಮ ಮುಖ್ಯವೆಂದರಿತು ಬಾಳೊ ॥ 3 ॥
ಝಂಪೆತಾಳ
ಒಬ್ಬನ ಕರ್ಮ ಅನಂತ ಜನರ ಕರ್ಮ
ಒಬ್ಬನ ದೋಷಕ್ಕನಂತ ಜನರ ಸಹಾಯ
ಒಬ್ಬರ ಪುಣ್ಯಕ್ಕನಂತ ಜನರ ಸಹಾಯ
ಒಬ್ಬನ ಸೃಷ್ಟಿಗನಂತ ಜನರ ಸೃಷ್ಟಿ
ಒಬ್ಬನ ಬಂಧಾಲಯ ಎಲ್ಲರಿಗೂ ಬಂಧಾಲಯ
ಒಬ್ಬೊಬ್ಬರ ಗತಿ ಇನ್ನು ಬೇರೆ ಉಂಟು ಇನ್ನು
ಒಬ್ಬರ ಕರ್ಮಗಳಿಗೆ ಕಡೆ ಮೊದಲಿಲ್ಲ
ಅಬ್ಜ ಸಂಭವ ಪಿತ ಗೋಪಾಲವಿಟ್ಠಲ
ಅಬ್ಬರ ಮೂರ್ತಿ ಹೀಗೆ ಅರಿದವರಿಗೆ ಸಾರ್ಥಿ ॥ 4 ॥
ತ್ರಿಪುಟತಾಳ
ಜ್ಞಾನ ಉಳ್ಳವನಾಗಿ ಮಾಡಿದ ಪಾಪಕ್ಕೆ
ಜ್ಞಾನ ರಹಿತನಾಗಿ ಮಾಡಿದ ಪಾಪಕ್ಕೆ
ಏನು ಇದಕ್ಕೆ ಪ್ರಾಯಶ್ಚಿತ್ತವೆಂದರೆ
ಶ್ರೀನಿವಾಸನ ಸ್ಮರಣೆ ಮುಖ್ಯವಯ್ಯಾ
ನಾನೆಲ್ಲಿ ಕಾಣೆನೋ ಹರಿಯ ಸ್ಮರಣೆಯಿಂದ
ತಾನಾಗೋ ಸುಖಕ್ಕೆ ಇನ್ನೊಂದು ಕರ್ಮ
ಅನಂತಾನಂತ ಮಾಡಿದ ಕಾಲಕ್ಕೂ
ಪ್ರಾಣಿಗಳಿಗೆ ಸುಖ ದೊರೆಯದಿನ್ನು
ಏನಾದರೂ ಏನು ಸಕಲಕ್ಕೂ ಹರಿ ಮುಖ್ಯ
ತಾನು ತಾರಕನಾಗಬೇಕು ಮುಖ್ಯ
ದೀನಜನ ಬಂಧು ಗೋಪಾಲವಿಟ್ಠಲ
ಜ್ಞಾನಿಗಳಲ್ಲಿ ನಿತ್ಯ ವಾಸವಾಗಿಪ್ಪ ಬಿಡದೆ ॥ 5 ॥
ಅಟ್ಟತಾಳ
ಭಯ ಭಕುತಿ ಕರ್ಮ ಅನಂತ ಮಾಡಲು
ಸವೆಯದ ಪದವಿಯು ದೊರಿಯದು ದೊರಿಯದು
ಜಯವು ಕೊಡದು ಅದು ತ್ರಯಲೋಕದೊಳಗಿನ್ನು
ಲಯವಾದ ಜ್ಞಾನ ಭಕುತಿ ಪುಟ್ಟಿಸದು ಅದು
ಪ್ರಿಯವಲ್ಲ ಆ ಕರ್ಮ ಮಾಡೆ ಹರಿಗೆ ಏನು
ಭಯವುಳ್ಳ ಸ್ಥಳದಲ್ಲಿ ಸುಯೋಗ್ಯನ ಮಾಳ್ಪ
ಭಯ ನಿವಾರಣ ಸ್ವಾಮಿ ಗೋಪಾಲವಿಟ್ಠಲ
ಭಯ ರಹಿತ ಮಾಳ್ಪಾ ಭಯ ಬಿಟ್ಟರ್ಚಿಸಲು ॥ 6 ॥
ಆದಿತಾಳ
ನಿತ್ಯ ನೈಮಿತ್ಯಕ ಮತ್ತೆ ತೀರ್ಥಯಾತ್ರೆ
ಹೊತ್ತು ಅರಿತು ಅಗ್ನಿಹೋತ್ರ ಅತಿಥಿಯ
ಹೆತ್ತ ತಾಯಿ ತಂದೆ ಪೂಜೆಯು ನಾನಾ
ಶ್ರುತ್ಯರ್ಥಗಳಲ್ಲಿ ಹೇಳಿದ ಕರ್ಮವು
ನಿತ್ಯ ಮಾಡದೆ ಹೋದರೆ , ಭಯವಿಂತೆಂದು
ನಿತ್ಯ ಮಾಡಿದರೇನು ಇಷ್ಟವೆ ದೊರೆಯದು
ಭಕ್ತಿ ಪೂರ್ವಕವಾಗಿ ಭಯ ರಹಿತನಾಗಿ
ಮತ್ತವರ ಕರ್ಮವ ಮಾಡಲು
ಹತ್ತಿ ಕೊಡುವ ಒಂದಾನಂತವಾಗಿ
ತುತ್ತು ಮಾಡಿದಂತೆ ಸಾಧನವೆಲ್ಲ
ಭಕ್ತವತ್ಸಲ ಸ್ವಾಮಿ ಗೋಪಾಲವಿಟ್ಠಲ
ಎತ್ತಲಾದರು ಏನು ಭಕ್ತಿಗೆ ಸಿಲುಕುವ ॥ 7 ॥
ಜತೆ
ಜ್ಞಾನ ಭಕ್ತಿ ವಿರಕ್ತಿಯೇ ಸಾಧನ
ಮೇಣು ಇಲ್ಲದೆ ಇಲ್ಲ ಗೋಪಾಲವಿಟ್ಠಲ ॥
*******