..
kruti by radhabai
ಮರುತಾತ್ಮಜಾ ನಿನ್ನ ಮೊರೆಹೊಕ್ಕ ಮೇಲೆನ್ನ
ಮರೆತು ಬಿಡುವರೇ ಸ್ವಾಮಿ ಪ
ಕರಗಳ ಮುಗಿಯುವೆ ಕಷ್ಟ ಪಡುತಲಿರುವೆ
ಕರಪಿಡಿದೆನ್ನನು ಕಾಯೊ ಮಾರುತಿ ಅ.ಪ.
ಸೀತೆಗೋಸುಗ ಪೋಗೀ ಶಿರಧಿಯದಾಟಿ ನೀ
ಮಾತೆ ಗುಂಗುರ ವಿತ್ತು ಮೋದ ಪಡಿಸಿದೇ
ಪಾತಕಿ ರಾವಣನಾ ಪುರದ ದಹಿಸಿ ಬಂದು
ಚೂಡಾಮಣಿಯ ತಂದು ಶ್ರೀ ರಾಮರಿ ಗರ್ಪಿಸಿದೇ 1
ಕುಂತಿಯ ಸುತನಾಗಿ ಬಲಭೀಮನೆಂದೆನಿಸಿನೀ
ಪ್ರಚಂಡ ಕೀಚಕನ ಸಂಹಾರ ಮಾಡಿದೆ
ಕ್ರೂರ ದೈತ್ಯನಾದಾ ಜರಿಯ ಸುತನ ಸೀಳಿ
ಪರಮಾತ್ಮಾ ಶ್ರೀ ಕೃಷ್ಣಗರ್ಪಣೆ ಮಾಡಿದೆ 2
ಮಧ್ವರಾಯರೆಂಬೊ ಪೆಸರಿನಿಂದಾ
ಅದ್ವೈತವಾದಿಗಳ ಖಂಡಿಸಿ ಮೆರೆದೇ
ಅದ್ಭುತ ಮಹಿಮ ವೇಂಕಟವಿಠಲನ
ಪಾದ ಪದ್ಮಂಗಳ ನಿರುತ ಸೇವಿಸುತಿರಾ 3
***