Showing posts with label ವಾರಿಧಿಯೊಳಗೆ ಓಡ್ಯಾಡಿ bheemesha krishna ankita suladi ದಶಾವತಾರ ಸುಳಾದಿ VARIDHIYOLAGE ODYADI DASHAVATARA SULADI. Show all posts
Showing posts with label ವಾರಿಧಿಯೊಳಗೆ ಓಡ್ಯಾಡಿ bheemesha krishna ankita suladi ದಶಾವತಾರ ಸುಳಾದಿ VARIDHIYOLAGE ODYADI DASHAVATARA SULADI. Show all posts

Monday, 10 May 2021

ವಾರಿಧಿಯೊಳಗೆ ಓಡ್ಯಾಡಿ bheemesha krishna ankita suladi ದಶಾವತಾರ ಸುಳಾದಿ VARIDHIYOLAGE ODYADI DASHAVATARA SULADI

Audio by Mrs. Nandini Sripad


 ಹರಪನಹಳ್ಳಿ ಭೀಮವ್ವನವರ ರಚನೆ  ದಶಾವತಾರ ಸುಳಾದಿ 


 ರಾಗ ಆನಂದಭೈರವಿ 


 ಧ್ರುವತಾಳ 


ವಾರಿಧಿಯೊಳಗೆ ಓಡ್ಯಾಡಿ ನಾರುವುದೇನೊ ಮಂ -

ದರವ ಹೊತ್ತು ನೀ ಧರನಾ ಹೊರುವುದೇನು

ಊರು (ಉರು) ಬಗೆದು ಕರುಳ್ಹಾರ ಹಾಕುವುದೇನು

ದೂರ ಬೆಳೆದು ಸುಳ್ಳ ಪೋರನೆನಿಪದೇನು

ದೂರಾಗಿ ಜನನಿ ಕೊಂದ ಸ್ವಾರಸ್ಯಗಳೇನು

ನಾರುಟ್ಯಾರಣ್ಯದಿ ನಾರಿ ಬಿಡುವುದೇನು ಅ -

ಪಾರ ಹೆಂಡಿರ ಸಂಸಾರ ಘೋರವಿದೇನು

ಜಾರಾಗಿ ಜನಕೆ ಶರೀರ ತೋರುವುದೇನು

ಕ್ರೂರ ಕಲಿಗಳ ನೀ ಸಂಹಾರ ಮಾಡುವುದೇನು

ಧೀರ ನಮ್ಮೆದುರು ನಿಲ್ಲಬಾರದೇನು

ಮಾರಜನಕ ಭೀಮೇಶಕೃಷ್ಣನೆ 

ಮರೆಯಾಗಿದ್ದರೇನೊ ಮರೆಯದಂತಿರೊ ॥ 1 ॥ 


 ಮಠ್ಯತಾಳ 


ನೀರಶಯನನೆ ನಿಂತು ಕೇಳೆನಮಾತು ನೀ ದಶ ಅವ -

ತಾರ ಆಗಲೀ ಪರಿಯಿಂದ

ದಾರಿಂದ ನಿನಗೇನುದ್ಧಾರವಾಗುವುದೇನೊ ಸ್ವಾಮಿ ಶ್ರೀರಮಣನೆ

ಕಾರುಣ್ಯನಿಧಿ ಕಾಮಧೇನು ಕಲ್ಪವೃಕ್ಷ ನೀನೆಂದು ತಿಳಿದಿದ್ದೆ

ಗೋ ವೃಂದಾವನ ಪಾದ ಗೋವರ್ಧನೋದ್ಧಾರ 

ಭುವನಾಧಿಪತಿಯೆ ನೀ ಬಹುಮಾನಕರ್ತನೆ

ಅವನಿಪಾಲಕ ನಿನ್ನವನೆಂದು ರಕ್ಷಿಸಿ 

ಜವನ ಪುರದ ಹಾದಿ ಮೆಟ್ಟಿಸದಿರೆನ್ನ 

ಜನನ ಮರಣ ಸ್ಥಿತಿ ಜಾತಕಾಲಕು ನೀನೆ

ಜನನಿ ಜನಕರು ಹಿಂದೆಷ್ಟೋ ಮುಂದೆಣಿಕಿಲ್ಲ 

ವನಜಪತಿಯೆ ವೈಸಲಿ ಬೇಕೊ ಎನಭಾರ 

ನನಗೂ ನಿನಗೂ ಬಿಟ್ಟಿದ್ದಲ್ಲೊ ಭೀಮೇಶಕೃಷ್ಣ 

ಅನುಮಾನವ್ಯಾತಕೀಗೆನ್ನ ಮಾನ ಕಾಯ್ದುಕೊಳ್ಳೊ ॥ 2 ॥ 


 ರೂಪಕತಾಳ 


ನೇಮ ನಿತ್ಯವು ನಿನ್ನ ನಾಮ ಬಿಟ್ಟವಗ್ಯಾಕೆ

ಸ್ನಾನವ್ಯಾತಕೆ ನಿರ್ಮಲಚಿತ್ತನಾಗದೆ

ಮೌನ ಮಂತ್ರವು ಯಾಕೆ ಮನಶುದ್ಧಿಯಿಲ್ಲದೆ

ದಾನವ್ಯಾತಕೆ ಕಾಮಕ್ರೋಧವ ಬಿಡದಲೆ

ಆನಕದುಂದುಭಿಗಳಿಲ್ಲದೆ ಅದರೊಳು

ಗಾನವ್ಯಾತಕೆ ಗಾರ್ದಭಸ್ವರನಂದದಿ

ಧೇನುಪಾಲಕನ ಬಿಟ್ಟೇನು ಕರ್ಮಂಗಳ

ಮಾಡಿದರದು ವ್ಯರ್ಥ ಆಗುವುದಲ್ಲದೆ

ನಾಲಿಗಿಲ್ಲದ ಗಂಟೆ ಬಾರಿಸಲದರಿಂದ

ನಾದವುಂಟಾಗೋದೇ ನಾಕಾಣೆನೆಲ್ಲೆಲ್ಲೂ

ನಾರಾಯಣನೆಂಬೊ ನಾಲ್ಕು ಅಕ್ಷರವು

ನಾಲಿಗೆಲಿರಲು ನರಕಭಯವಿಲ್ಲವು

ಶ್ರೀ ಭೂರಮಣ ಭೀಮೇಶಕೃಷ್ಣನೆ ಭವ -

ಸಾಗರ ದಾಟಿಸಿ ಸುಖದಿಂದಿಡುವುದೊ ॥ 3 ॥ 


 ಅಟ್ಟತಾಳ 


ಮಗನ ಕರೆದು ಮುಕ್ತಿ ಪಡೆದಜಾಮಿಳನ ನೋಡು

ಸುಜನ ಪ್ರಹ್ಲಾದ ಸುರರಿಂದ ಮಾನಿತನಾದ

ಭುಜಬಲಿಯಾದ ಧ್ರುವ ನಿಜಲೋಕದಲ್ಲಿಹ

ಭಜಿಸುತ ಬಂದ ದರಿದ್ರ ಧನಿಕನಾದ

ಅಜಭವ ನಾರಂದ ಸುರಮುನಿಗಳು ನಿನ್ನ

ಪದವ ಭಜಿಸಿ ಮುಕ್ತಿಪಡೆದರಾನಂದವ

ವಧೆಯ ಮಾಡಿಸಲು ಬಂದಾತಗೆ ನಿಜರೂಪ

ನದಿಯಲ್ಲಿ ತೋರಿದ ನಿನ್ನ ಕರುಣವೆಷ್ಟೊ

ಮದವೇರಿದ ಗಜ ಒದರುತಿರಲು ಕಾಲು

ಕೆದರೊ ಮಕರಿ ಹಲ್ಲ ಮುರಿದ ಮುರಾರಿಯೆ

ಒದೆಯ ಬಂದವರಿಗೆಷ್ಟ್ವೊಂದಿಸಿ ಉಪಚಾರ

ಮೈಗೆ ಸುತ್ತಿ ಕಚ್ಚಿದ ಕಾಳಿಂಗನುಳುಹಿದೊ

ಹೊಯ್ದ ಬಾಣದಿ ಭೀಷ್ಮ ಎಯ್ದಿದನೊ ವೈಕುಂಠ

ಒಯ್ದು ನೂರೆಣಿಕೆಯಿಂದಾದನೊ ನಿನ ಬಂಟ

ಐದುಮಂದಿಗೆ ಸತಿಯಾದ ದ್ರೌಪದಿವ್ಯಸನ

ಬಿಡಿಸಿ ಅಕ್ಷಯವಸನವಿತ್ತು ದಾರಿಯಾದೆ

ಅದ್ಭುತ ಮಹಿಮನಂಗಾಲು ಸೋಕಲು ದೋಷ

ಕಳೆದು ನಿರ್ಮಲದೇಹ ಆದಳಾಗಹಲ್ಯೆ 

ಬಡಿವಾರವೇನೊ ಭಕ್ತರಿಂದ ನಿನಕೀರ್ತಿ 

ನಡೆವೋದು ಹದಿನಾಲ್ಕು ಲೋಕದೊಳಲ್ಲದೆ

ಅಡಿಗೆರಗುವೆನೊ ಅನಂತ ಹಸ್ತಗಳಿಂದ 

ಪಿಡಿಯೆನ್ನ ಕೈಯ ಭೀಮೇಶಕೃಷ್ಣ ನಮ್ಮಯ್ಯ ॥ 4 ॥ 


 ಝಂಪೆತಾಳ 


ವಾಸುದೇವನೆ ನೀನು ವಸುದೇವನ ಸುತನೆ

ವಾಸವಿ ಸಖನಾದ ಸಾಸಿರಫಣಿಶಯನ

ದೇಶದೇಶದಿ ವ್ಯಾಪ್ತ ಏ ಸಿರಿಪತಿ ಕೇಳೊ

ಮೋಸವಾದ ಭವಪಾಶದೊಳಗೆ ಸಿಲ್ಕಿ

ಘಾಸಿಯಾಗಲು ನೋಡಿ ತಮಾಷೆಯಾಗಿದೆ ನಿನಗೆ

ಈಶ ಜೀವರಿಗಿನ್ನೂ ಉತ್ತಮ ನೀನಾಗಿ

ಬ್ಯಾಸರದಲೆ ಬೇಡಿದಿಷ್ಟಾರ್ಥವ ನೀಡಿ

ನಾಶರಹಿತ ನಿನಗೆ ನಾ ಸೆರಗೊಡ್ಡುವೆನು

ಆಶೀರ್ವಾದವನೆ ಮಾಡೊ ಮಹಾಪುರುಷ

ಕ್ಲೇಶ ದೋಷಗಳೆಂಬೊ ಕೇಡು ಕಡೆಗೆ ತೆಗೆಯೊ ಉ -

ದಾಸೀನ ಮಾಡುವುದು ಉತ್ತಮ ನಡತ್ಯಲ್ಲ

ದೋಷದೂರನೆ ಎನ್ನ ದೂರನೋಡುವುದ್ಯಾಕೊ

ಭೂಸುರರಿಗೆ ಒಡೆಯನಾದ ಭೀಮೇಶಕೃಷ್ಣ ಸಂ -

ತೋಷ ಸದಾನಂದ ನೀಡೊ ಎನಗೆ ಗೋವಿಂದ ॥ 5 ॥ 


 ಜತೆ 


ಎಷ್ಟಪರಾಧಿ ನಾನಾದರು ಭೀಮೇಶಕೃಷ್ಣ ನಿನ -

ಗಪಕೀರ್ತಿ ಬಾಹುದೋ ನಾನರಿಯೆ ॥

*****