..
kruti by Nidaguruki Jeevubai
ಮುರುಳಿಯ ನೂದಿದನಾಗ ಹರಿ
ವಿಧವಿಧರಾಗದೊಳೀಗ ಪ
ತುರುಗಳ ಕಾಯುತ ತರಳರ ಒಡಗೂಡಿ
ಸುರಮುನಿವಂದಿತ ಸರಸಿಜನಾಭನು ಅ.ಪ
ಚಂದದ ಪಾಡಗರುಳಿಯು ಕಾ-
ಲಂದುಗೆ ಕಿರುಗೆಜ್ಜೆ ಧ್ವನಿಯು
ಹಿಂಡುಗೋವ್ಗಳ ವೃಂದದಿ ನಲಿಯುತ
ಮಂದರೋದ್ಧರ ಗೋವಿಂದ ಮುಕುಂದನು1
ಉಟ್ಟ ಪೀತಾಂಬರ ಹೊಳೆಯೆ ನಡು
ಕಟ್ಟಿದ ಚಲ್ಲಣ ಹೊಳೆಯೆ
ಸೃಷ್ಟಿಗೊಡೆಯ ಪರಮೇಷ್ಟಿ ಪಿತನು ತನ್ನ
ಪುಟ್ಟ ಕರದಲಿ ಉತ್ತಮನಾದದ 2
ವಿಧವಿಧಹಾರಗಳಿಂದ ರನ್ನ
ಪದಕದ ಮುತ್ತುಗಳಿಂದ
ಹೃದಯದಿ ಶ್ರೀ ಭೂ ಸಹಿತದಿ ಮೆರೆಯಲು
ಪದುಮನಾಭ ಶ್ರೀ ಚಲ್ವ ಮದನಗೋಪಾಲನು 3
ಕೋಟಿಸೂರ್ಯರಂದದಲಿ ಬಹು
ಮಾಟದ ಮುಖಕಾಂತಿಯಲಿ
ನೋಟದಿ ಜಗವನೆ ಮೋಹವಗೊಳಿಪ
ಕಿರೀಟಿಯ ಪೊರೆದ ವೈರಾಟನು ಹರುಷದಿ 4
ಕರ್ಣದಿ ಬಾವುಲಿ ಹೊಳಪು ನವ-
ರನ್ನ ಕಿರೀಟದ ಬೆಳಕು
ಕನ್ನಡಿಯಂದದಿ ಕದುಪಿನ ಝಳಪು ಮೋ-
ಹನ್ನ ಮಾಲೆನಿಟ್ಟ ಸೊಗಸಿನ ವಲಪು 5
ಮುಖದಲಿ ಮುಂಗುರುಳೊಲಿಯೆ ಪ್ರಿಯ
ಸಖಿಯರು ಹರುಷದಿ ನಲಿಯೆ
ಅಕಳಂಕ ಮಹಿಮನು ಗುಪಿತದಿ ಗೆಳೆಯರ
ಸುಖವ ಪಡಿಸುತಲಿ ಸಖ್ಯದಿಂದ ಪ್ರಿಯನು 6
ತುಂಬಿದ ತುರು ವೃಂದದಲಿ ಗೋ-
ವಿಂದನು ಕುಣಿಕುಣಿಯುತಲಿ
ಅಂಬರದಲಿ ದೇವದುಂದುಭಿ ಮೊಳಗಲು
ಕಂಬು ಕಂಧರ ಹರಿ ಸಂಭ್ರಮ ಸೂಸುತ 7
ವಾಸವ ವಂದಿತ ಹರಿಯೆ ಸರ್ವೇಶ
ಕೃಪಾಕರ ದೊರೆಯೆ
ವಾಸುದೇವ ಸರ್ವೇಶನೆ ಭಕುತರ
ಸಾಸಿರನಾಮದಿ ತೋಷಪಡಿಸುತಲಿ 8
ಪಾಹಿ ಪಾಹಿ ಶ್ರೀಶ ನಮೋ
ಪಾಹಿ ಪಾಹಿ ಬ್ರಹ್ಮೇಶ
ಪಾಹಿ ಪಾಹಿ ಪರಿಪಾಲಿಸು ನಮ್ಮನು
ಪಾಹಿ ಕಮಲನಾಭವಿಠ್ಠಲ ದಯಾನಿಧೆ 9
***