ರಾಗ: ಕಲ್ಯಾಣಿ ತಾಳ: ಆದಿ
ಮಂತ್ರಾಲಯಪ್ರಭುವ ನೋಡಿರೀ ನಮ್ಮ
ಮಂತ್ರಾಲಯಪ್ರಭುವ ನೋಡಿರೀ ಪ
ಮಂತ್ರಾಲಯಪ್ರಭುವ ನೋಡಿ
ಸಂತಸ ಮನಕೆ ತಂದು
ಅಂತರಂಗದಿ ಲಕ್ಷ್ಮೀಕಾಂತನ್ನ ನೋಡಿ ನಲಿವ ಅ. ಪ
ತುಂಗಭದ್ರಾ ನದಿಯತೀರದೀ
ಕಂಗೊಳಿಪ ವೃಂದಾವನದೊಳಿಹ
ಶೃಂಗಾರ ತುಳಸಿಮಾಲೆಯ ಧರಿಸಿಹ
ಮಂಗಳಕರ ಶ್ರೀ ಗುರುರಾಘವೇಂದ್ರರ 1
ಬಿಂಬಮೂರುತಿ ನರಸಿಂಗದೇವನ
ಕಂಬದೊಳಂದು ತೋರಿ ತಂದೆಗೆ
ಅಂಬುಜಾಕ್ಷನ ಬಿಡದೆ ಸ್ಮರಿಸುತ
ಅಂಬುಧಿಶಯನನ ಪಾದವಸೇರಿದ 2
ವ್ಯಾಸಮುನಿಯಾಗಿ ಭುವಿಯೊಳು ಜನಿಸಿ
ಆ ಸಮೀರಮತ ಜಗಕೆಸಾರುತ
ವಾಸುಕಿಶಯನ ಕಾಂತೇಶಪ್ರಿಯವಿಠಲನ
ಲೇಸಾಗಿ ಭಜಿಸಿದ ಶಾಂತಗುರುಗಳಾ 3
***