Showing posts with label ಬೂದಿಯ ಹಚ್ಚಿರೊ ಶುದ್ಧವೈಷ್ಣವರಿದ varaha timmappa. Show all posts
Showing posts with label ಬೂದಿಯ ಹಚ್ಚಿರೊ ಶುದ್ಧವೈಷ್ಣವರಿದ varaha timmappa. Show all posts

Friday, 27 December 2019

ಬೂದಿಯ ಹಚ್ಚಿರೊ ಶುದ್ಧವೈಷ್ಣವರಿದ ankita varaha timmappa

ರಾಗ ಎರಕಲಕಾಂಬೋದಿ ಆದಿತಾಳ 

ಬೂದಿಯ ಹಚ್ಚಿರೊ ಶುದ್ಧವೈಷ್ಣವರಿದ-
ರಾದಿಯ ತಿಳಿಯಲು ಕೇಳಿ ಬಲ್ಲವರು ||ಪ||

ಮೂಲಾಗ್ನಿಯಿಂದಲೆ ಸುಟ್ಟಿಹ ಬೂದಿ
ಮೂಲ ಮಂತ್ರಂಗಳ ಜಪಿಸುವ ಬೂದಿ
ಮೂಲಾಧಾರವ ತೋರುವ ಬೂದಿ
ಕಾಲ ಕರ್ಮಂಗಳ ಕಡಿವಂಥ ಬೂದಿ ||೧||

ಏಳು ಸುತ್ತಿನ ಒಳಗೆ ಇರುವಂಥ ಬೂದಿ
ಏಳು ವೈರಗಳನ್ನು ಕಳೆವಂಥ ಬೂದಿ
ಏಳು ಅಗಳ ದಾಟಿ ಹಾರುವ ಬೂದಿ ಬ-
ಹಳ ಜ್ಞಾನಿಗಳೆಲ್ಲ ಧರಿಸುವ ಬೂದಿ ||೨||

ಒಂಭತ್ತು ಕಡೆಯಿಂದ ಒಲಿದಿಟ್ಟ ಬೂದಿ
ಕುಂಭಕದೊಳಗದ ಇರಿಸುವ ಬೂದಿ
ಸಂಭ್ರಮದಿ ಅರಸನ ಗೆಲುವಂಥ ಬೂದಿ
ಅಂಬರಕಾಗಿಯೆ ಲಂಬಿಪ ಬೂದಿ ||೩||

ಪಂಚಾಗ್ನಿಯಿಂದಲೆ ಬೆಂದಿಹ ಬೂದಿ
ಪಂಚತತ್ವಗಳನು ಗೆಲುವಂಥ ಬೂದಿ
ಪಂಚ ಮೃತ್ಯುಗಳನ್ನು ಕಳೆವಂಥ ಬೂದಿ
ವಂಚಿಸಿಕೊಳ್ಳದೆ ಧರಿಸುವ ಬೂದಿ ||೪||

ಆರು ವೈರಿಗಳನ್ನು ತೂರುವ ಬೂದಿ
ಆರು ಭಾವಗಳನ್ನು ಬೇರಿಟ್ಟ ಬೂದಿ
ಆರು ಭ್ರಮೆಗಳನ್ನು ಕಡಿದಿಟ್ಟ ಬೂದಿ
ಆರಿಗೂ ತೋರದೆ ಹಾರುವ ಬೂದಿ ||೫||

ಅಷ್ಟಮದಂಗಳ ಕಟ್ಟುವ ಬೂದಿ
ದುಷ್ಟಾತ್ಮರನ್ನು ಅಟ್ಟುವ ಬೂದಿ
ಕುಟ್ಟೆ ಹಿಡಿವ ಬೀಜಕಿಟ್ಟಿಹ ಬೂದಿ
ಭ್ರಷ್ಟ ಕರ್ಮಗಳನ್ನು ಸುಟ್ಟಂಥ ಬೂದಿ ||೬||

ಸಕಲಋಷಿಗಳೆಲ್ಲ ಧರಿಸುವ ಬೂದಿ
ತ್ರಿಕರ್ಣ ಶುದ್ಧದಿ ತುಂಬಿದ ಬೂದಿ
ಮಕರಕುಂಡಲಧರ ಮರುಳಹ ಬೂದಿ
ಸಖನಹ ವರಾಹ ತಿಮ್ಮಪ್ಪ ಬೂದಿ ||೭||

---ರಚನೆ- ನೆಕ್ಕರ ಕೃಷ್ಣದಾಸರು
********