ನಂಬಿದೇ ಗುರುವರಾ ನಂಬಿದೇ ಪ
ನಂಬಿದೆ ಗುರುಸಾರ್ವಭೌಮಾ
ತುಂಟುಮನದೊಳು ಹರಿಭಕ್ತಿ ನಿಸ್ಸೀಮಆಹಾ
ಅಂಬುಜೋದ್ಭವಪಿತನ ಕಂಭದಿ ತೋರಿದ
ಶಂಬರ ಕುಲದೀಪ ಪ್ರಹ್ಲಾದ ವ್ಯಾಸಮುನಿಯೇ ಅ.ಪ.
ದಾಸನೆಂದಡಿಗೆ ಬಿದ್ದೆನೋ ಈಗ
ದೋಷ ನಾಶಮಾಡೋ ಎನಗೆ ಬೇಗ ಆಹಾ
ವಾಸುಕಿಶಯನನ ಬ್ಯಾಸರದೆ ಸ್ತುತಿಸಿ
ಈಶನ ಸರ್ವತ್ರವ್ಯಾಪ್ತಿಯನರುಹಿದ ಭೂಪ 1
ಪಾತಕರೊಳಗೆ ಅಗ್ರೇಸರನಾನು
ಪೂತಮಾಡುವರೊಳಗೆ ನಿಸ್ಸೀಮ ನೀನು ಆಹಾ
ತಾತನಪ್ಪಣೆಯಂತೆ ವ್ಯಾಸರಾಜಾಎನಿಸಿ
ಖ್ಯಾತಿಯಿಂದಲಿ ತರ್ಕತಾಂಡವರಚಿಸಿ ಮೆರೆದೇ 2
ತಾಪಸಶ್ರೇಷ್ಠ ಬ್ರಹ್ಮಣ್ಯಕುವರನಾದೆ
ಶ್ರೀಪಾದರಾಯರ ಪ್ರಿಯ ಶಿಷ್ಯನಾದೆ ಆಹಾ
ಗೋಪಾಲಕೃಷ್ಣನ್ನ ಕುಣಿಕುಣಿದಾಡಿಸಿ
ಭೂಪನ ಕುಹಯೋಗ ಕಳೆದ ಯತಿಕುಲತಿಲಕ 3
ಮಧ್ವಶಾಸ್ತ್ರಗಳ ಮಂದರರಿಯದಿರಲು
ಮುದದಿಂದ ಪದಸುಳಾದಿಗಳ ರಚಿಸಿದೆ ನೀನು ಆಹಾ
ಆದರದಿಂದಲಿ ಪುರಂದರಕನಕರಿಗೆ
ಸದುಪದೇಶವ ಕೊಟ್ಟು ಜಗದುದ್ಧಾರಮಾಡಿದ ಪ್ರಭುವೇ 4
ಮತ್ತೆ ಪುಟ್ಟಿದೆ ವೆಂಕಣ್ಣಭಟ್ಟ ನೆಂದೆನಿಸೀ
ಮತ್ತ ಕೇಸರಿಯಂತೆ ಮಧ್ವಶಾಸ್ತ್ರದಿ ಮೆರೆದೇ ಆಹಾ
ಕತ್ತಲೆ ಅದ್ವೈತವಾದಗಳಿಗೆಲ್ಲಾ
ಕತ್ತಿಎನಿಸಿದ ಪರಿಮಳಾಚಾರ್ಯ ಗುರುವೇ 5
ವಿಪ್ರನು ದಿಟ್ಟತನದಿ ನಿನ್ನ ಗಂಧವ ತೇದುಕೊಡುಎನೆ
ಕ್ಷಿಪ್ರದಿ ತೋರಿದೆ ನಿನ್ನ ಮಹಿಮೆಯಜಗಕೇ ಆಹಾ
ಅಪ್ಪ ಶ್ರೀರಾಮರ ಪೂಜಿಸಬೇಕೆಂದು
ಒಪ್ಪಿಸನ್ಯಾಸವ ರಾಘವೇಂದ್ರನಾದ 6
ಮುದದಿ ದೇಶ ದೇಶವ ಚರಿಸಿದೇ
ಸಮಯದಿ ಸುಜನರಕ್ಲೇಶಗಳಳಿದೇ ಆಹಾ
ಮೋದಮುನಿಯ ಗ್ರಂಥಗಳಿಗೆಲ್ಲ ಟಿಪ್ಪಣಿ ಮಾಡುತ
ಬುಧರಿಗೆ ತತ್ವ ಕನ್ನಡಿ ತೋರ್ದ ಗುಣಗಣನಿಧಿಯೇ7
ಪರಿಪರಿ ಮಹಿಮೆಯ ತೋರುವ ಗುರುವೇ
ಸುರತರು ಅಂದದಿ ಹರಕೆ ಗಳೀವೆ ಪ್ರಭುವೇ ಆಹಾ
ಮೂರೆರಡು ಒಂದುನೂರು ವರುಷ ಪರಿಯಂತ
ಸಾರಿಸಾರಿದವರ ಪೊರೆದು ಮೆರೆಯುವ ದಿವಿಜವಂದಿತ ಗುರು8
ದಯದಿಂದ ನೋಡೆನ್ನ ದೀನೋದ್ಧಾರ
ಜೀಯನೆ ಭವ ಬಿಡಿಸು ಕರುಣಾಸಾರ ಆಹಾ
ಜಯತೀರ್ಥವಾಯ್ವಂತರ್ಗತ ಶ್ರೀಕೃಷ್ಣ ವಿಠಲನ ಹೃ-
ದಯಮಂದಿರದಿ ತೋರೆನಗೆ ಗುರುಸಾರ್ವಭೌಮ 9
****