" ಶ್ರೀ ಕಮಲಾಪತಿವಿಠಲರ - ಹರಿಕಥಾಮೃತಸಾರ ಫಲ ಸ್ತುತಿ - ( 9 ಪದ್ಯಗಳು ) "
ಶ್ರೀಮದ್ವಿಶ್ವಗ್ರೀವ ನೂಲುಮಿಗೆ ।
ಧಾಮರೆನಿಪ ಶ್ರೀ ವಾದಿರಾಜರು ।
ಸ್ವಾಮಿ ವ್ಯಾಸಾರ್ಯ -
ವಿಠಲೋಪಾಸ್ಯ ಸ್ವಪ್ನದಲಿ ।।
ಶ್ರೀ ಮನೋರಮನೆನಿಪ ತತ್ತ್ವ । ಸು ।
ಸೌಮನದ ಮಾಲಿಕೆಯನಿತ್ತು ।
ದ್ಧಾಮ ಗ್ರಂಥವ ರಚಿಸೆನುತಲಿ-
ನುಡಿದ ಕಾರಣದಿ ।। 1 ।।
ಭಾರತ ಸು ಭಾಗವತ ವಾಮನ ।
ಗಾರುಡ ಭವಿಶೋತ್ತರ ಪದವು ।
ಚಾರು ವಿಷ್ಣುರಹಸ್ಯ -
ವಾಯು ಪಂಚರಾತ್ರಾಗಮ ।।
ಸಾರ ಗುರು ವೃತ್ತ ಪ್ರವೃತ್ತ ।
ಈರ ಸಂಹಿತಾದಿತ್ಯ ವಾಗ್ನೆಯ ।
ಪಾರ ರಸಗಳ ತೋರ್ಪ -
ಶ್ರೀಗುರುಮಧ್ವ ಶಾಸ್ತ್ರವು ।। 2 ।।
ಸಾರ ಕ್ರೋಢೀಕರಿಸಲನುದಿನ ।
ಸಾರೆ ವರ್ಣಾಭಿಮಾನಿ । ದೀನೋ ।
ದ್ಧಾರಗೋಸುಗ ಹರಿಕ-
ಥಾಮೃತಸಾರವನು ರಚಿಸಿ ।।
ಸ್ಥೈರ್ಯ ಮಾನಸದಿಂದ । ಭಾವಿ ।
ಭಾರತಿಪತಿ ವಾದಿರಾಜರ ।
ಭೂರಿ ಕೋಶಕೆ ವೊಪ್ಪಿಸುತ-
ಲಾಪಾರ ಮುದ ಪಡೆದ ।। 3 ।।
ಸಾಸಿರಾರ್ಥದೊಳೊಂದು । ಪಾದಕವ ।
ಕಾಶ ವಿರುವೊ ಶ್ರೀದ ಬೃಹತೀ ।
ಸಾಸಿರದ ನಾಮವನು -
ಯೋಚಿಸಿ ಇವರು ಗ್ರಂಥದಲ್ಲಿ ।।
ಈ ಸುರಹಸ್ಯವನರಿತು ಪಠಿಪಗೆ ।
ಯೇಸು ದೂರವೋ ಮುಕ್ತಿ । ಬರಿದಾ ।
ಯಾಸ ಬಟ್ಟದರಿಂದ -
ಫಲವೇನಿಲ್ಲವೀ ಜಗದಿ ।। 4 ।।
" ಹ " ಯೆನಲು ಹರಿಯೊಲಿವನು ತಾ ।
" ರಿ " ಯೆನಲು ರಿಕ್ತತ್ವ ಹರಿಯುವ ।
" ಕ " ಯೆನಲು ಕತ್ತಲೆಯ -
ಅಜ್ಞಾನವನು ಪರಿಹರಿಪ ।।
" ಥಾ " ಯೆನಲು ಸ್ಥಾಪಿಸುವ ಜ್ಞಾನವ ।
" ಮೃ " ಯೆನಲು ಮೃತಿ ಜನಿಯ ಬಿಡಿಸುವ ।
" ತ " ಯೆನಲು ಹರಿ ತನ್ನ -
ಮೂರುತಿಯ ತೋರುವನು ನಿತ್ಯ ।। 5 ।।
" ಸಾ " ಯೆನಲು ಸಾಧಿಸುವ ಮುಕ್ತಿ ।
" ರ " ಯೆನಲು ರತಿಯಿತ್ತು ರಮಿಪನು ।
ಕಾಯ ವಾಗ್ಜ್ಮಯದೆಂಟು -
ಅಕ್ಕರ ನುಡಿದರದರೊಳಗೆ ।।
ಶ್ರೀಯರಸ ವಿಶ್ವಾದಿ । ಅಷ್ಟೈ ।
ಶ್ವರ್ಯ ರೂಪದಿ ನಿಂತು ತಾ । ಪರ ।
ಕೀಯ ನೆನಿಸದೆ ಇವನ -
ಮನದೊಳು ರಾಜಿಪನು ಬಿಡದೆ ।। 6 ।।
ಹರಿಯೆನಿಪಗನಿರುದ್ಧ ಧರ್ಮವು ।
ದೊರಕಿಸುವನವು ಪರಮ ಹರುಷದಿ ।
ತ್ವರ ಕಥಾಯನೆ ಕೃತಿ-
ರಮಣನರ್ಥಿಗಳ ಹನಿಗರೆವ ।।
ವರ ಅಮೃತ ಯೆನಲಾಗ । ಶ್ರೀ ಸಂ ।
ಕರುಷಣನೇ ಕಾಮಹನು ಯೋಜಿಪ ।
ಸರಸಸಾರನೆ ವಾಸುದೇವನು -
ಮೋಕ್ಷ ಕೊಡುತಿಪ್ಪ ।। 6 ।।
ಈ ರಹಸ್ಯವನರಿತು ಪ್ರತಿದಿನ ।
ಸಾರಸಾಕ್ಷನ ಪದಕಮಲಕೆ ।
ಆರು ಪದನಂತಿರುವ -
ಸುಜನಕೆ ಮೇಲೆ ನುಡಿದ ಫಲ ।।
ಸಾರಿ ಸಾರಿಗೆ ಒದಗಿ ಬರುತಲೆ ।
ಸೇರಿಸುವರೈ ವಿಷ್ಣು ಮಂದಿರ ।
ತೋರುವರು ನಿಂದಕರ -
ನಿಕರಕೆ ನಿರಯವನು ನಿತ್ಯ ।। 8 ।।
ಚಾರುತನದಿ ಹರಿಕಥಾಮೃತ ।
ಸಾರ ಕೃತ ಋಷಿ ಭಾರದ್ವಾಜರ ।
ಸಾರ ಹೃದಯದಿ ನಿಂತ -
ಸಕಲ ಸು ಶಾಸ್ತ್ರದಾ ಲೋಕಾ ।।
ಸಾರಿಸಾರಿಗೆ ಮಾಡಿ ಮಾಡಿಸಿ ।
ಸೂರೆಗೊಟ್ಟಾನಂದ ಚಿನ್ಮಯ ।
ಪಾರವಾರಶಯನ -
ಶ್ರೀ ಕಮಲಾಪತಿ ವಿಠ್ಠಲಾ ।। 9 ।।
****