..
ಮಗನೆಂದಾಡಿಸುವಳು ಮೊಗ ನೋಡಿ ನಗುವಳು ಪ
ಜಗದುದ್ಧಾರನ ಮೊಗ ಮೊಗದೊಳಿರಿಸಿಕೊಂಡು ಅ
ಕಾಲಲಂದುಗೆ ಗೆಜ್ಜೆ ತೋಳ ಮಣಿಯ ದಂಡೆಫಾಲದ ಅರಳೆಲೆಯು ಕುಣಿಯೆನೀಲದುಡುಗೆಯುಟ್ಟ ಬಾಲನೆ ಬಾರೆಂದುಪಾಲುಣಿಸುವ ಪುಣ್ಯವೆಂತು ಪಡೆದಳಯ್ಯ 1
ಬಣ್ಣ ಸರವಲ್ಲಾಡೆ ವರ ರನ್ನ ನೇವಳದಹೊನ್ನ ಗಂಟೆಯು ಘಣ ಘಣರೆನಲುಪನ್ನಗಶಯನನೆ ಕುಣಿಯೊಮ್ಮೆ ಕುಣಿಯೆಂದುಕುಣಿಸಿ ನಗುವ ಪುಣ್ಯವೆಂತು ಪಡೆದಳಯ್ಯ 2
ಪೊಡವಿಯ ಈರಡಿ ಮಾಡಿದ ದೇವನಕುಡಿಬೆರಳನೆ ಕರದಲಿ ಪಿಡಿದುಅಡಿಯಿಡು ಮಗನೆ ಮೆಲ್ಲಡಿಯಿಡು ಎನುತಲಿನಡೆಗಲಿಸುವ ಪುಣ್ಯವೆಂತು ಪಡೆದಳಯ್ಯ 3
ಕುಕ್ಷಿಯೊಳು ಈರೇಳು ಜಗವನ್ನು ಸಲಹುವನರಕ್ಷಿಪರು ಉಂಟೆ ತ್ರೈಜಗದೊಳಗೆಪಕ್ಷಿವಾಹನ ನೀನು ಅಂಜಬೇಡ ಎನುತಲಿರಕ್ಷೆ ಇಡುವ ಪುಣ್ಯವನೆಂತು ಪಡೆದಳಯ್ಯ 4
ಶಂಖ ಚಕ್ರ ಗದಾ ಪದುಮಧಾರಕನಪಂಕಜ ಮಿತ್ರ ಶತಕೋಟಿ ತೇಜನಸಂಖ್ಯೆಯಿಲ್ಲದಾಭರಣಗಳ ತೊಡಿಸಿಯಲಂಕರಿಸುವ ಪುಣ್ಯವೆಂತು ಪಡೆದಳಯ್ಯ 5
ಸಾಗರಶಯನನ ಭೋಗೀಶನ ಮೇಲೆಯೋಗ ನಿದ್ರೆಯೊಳಿಪ್ಪ ದೇವನನುಆಗಮ ನಿಗಮಗಳರಸಿ ಕಾಣದ ವಸ್ತುವನುತೂಗಿ ಪಾಡುವ ಪುಣ್ಯವೆಂತು ಪಡೆದಳಯ್ಯ 6
ಪನ್ನಗ ಶಯನನ ಉನ್ನಂತ ಮಹಿಮನಸನ್ನುತ ಭಕುತರ ಸಲಹುವನಪನ್ನಗಾರಿ ವಾಹನ ದೇವರ ದೇವನಹಚೆನ್ನಾದಿಕೇಶವನನೆಂತು ಪಡೆದಳಯ್ಯ7
***