Showing posts with label ಸಮ್ಮುಖನಾಗು ಗಿರಿಯ vijaya vittala ankita suladi ವೆಂಕಟೇಶ ಮಹಿಮಾ ಸುಳಾದಿ SAMMUKHANAAGU GIRIYA VENKATESHA MAHIMA SULADI. Show all posts
Showing posts with label ಸಮ್ಮುಖನಾಗು ಗಿರಿಯ vijaya vittala ankita suladi ವೆಂಕಟೇಶ ಮಹಿಮಾ ಸುಳಾದಿ SAMMUKHANAAGU GIRIYA VENKATESHA MAHIMA SULADI. Show all posts

Sunday, 8 December 2019

ಸಮ್ಮುಖನಾಗು ಗಿರಿಯ vijaya vittala ankita suladi ವೆಂಕಟೇಶ ಮಹಿಮಾ ಸುಳಾದಿ SAMMUKHANAAGU GIRIYA VENKATESHA MAHIMA SULADI

Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ  ಶ್ರೀವೆಂಕಟೇಶನ ಮಹಿಮಾ ಸುಳಾದಿ 

 ರಾಗ ಪಂತುವರಾಳಿ 

 ಧ್ರುವತಾಳ 

ಸಮ್ಮುಖನಾಗು ಗಿರಿಯ ತಿಮ್ಮನಾತುಮ್ಮ ಪುರುಷೋ -
ತುಮ್ಮ ಆ ಮಹಾಮಹಿಮಾ ರಮ್ಮೆಯರಸ ಸರ್ವೋ -
ತುಮ್ಮ ಅಂತರಾತುಮ್ಮ ಬೊಮ್ಮಾಜನಕ ಪರಮಾ -
ತುಮ್ಮ ರೇವತಿರಮಣ ತಮ್ಮ ದೇವೋ -
ತುಮ್ಮ ಜ್ಞಾನಾತುಮ್ಮ ವೈಷಮ್ಯ ಇಲ್ಲದ ಪರ -
ಬೊಮ್ಮ ರಮ್ಮೆನುತಾ ಅನುಪಮ್ಮ ಚರಿತಾನಮಿತ 
ಸಮ್ಮಂಧ ಸರ್ವದಾಗಮ್ಯ ಹಮ್ಮಿನ ದೈವ 
ಖಮ್ಮಹಿಯೊಳಗೆ ಆಹಂಮತಿಯವ ನಾನೆ 
ದಮ್ಮಯ್ಯಾ ಇಮ್ಮಯ್ಯಾ ಲಾಲಿಸು ನಮ್ಮಯ್ಯಾ 
ನಿಮ್ಮನವಾಗಿ ನಿನಗೆ ನಮ್ಮೊನಮೊ ಎಂಬೆ 
ಹಮ್ಮು ಭಕ್ತರ ಕೂಡಾ ಸಮ್ಮಂಧಾವಲ್ಲವೊ 
ಹೆಮ್ಮೆ ಇಂದಲಿ ನಿನ್ನ ನೆಮ್ಮಿದೆ ನೇಮದಲಿ 
ಅಮ್ಮಾಲಾ ವನಮಾಲಾ ವಿಜಯವಿಟ್ಠಲ ಎನ್ನ 
ಮಮ್ಮುಳಿಕೆ ಹರಿಸು ಅಮೃತಾ ದಾರಿ ತೋರೂ ॥ 1 ॥

 ಮಟ್ಟತಾಳ 

ಪಂಚನಾಡಿಯೊಳಿಪ್ಪ ಪಂಚಮೂರುತಿ ದೇವಾ 
ಪಂಚಭೂತದ ಪ್ರಪಂಚವುಳ್ಳವನಯ್ಯಾ 
ಪಂಚಪರ್ವದಲ್ಲಿ ಪಂಚೈವರ ಕೂಡ 
ವಂಚನೆ ಇಂದಲ್ಲಿ ಚಂಚಲಮನದಿಂದ 
ಹಿಂಚಮುಂಚ ತಿಳಿಯೆ 
ಪಾಂಚಜನ್ಯಪಾಣಿ ವಿಜಯವಿಟ್ಠಲನೆ ವಿ -
ರಂಚಿ ದೇವತೆಗಳ ವಂಚಿಸಿದ ದೈವ ॥ 2 ॥

 ರೂಪಕತಾಳ 

ಷೋಡಶೋಪಚಾರ ಮಾಡಲಿ ಬಲ್ಲೆನೆ 
ಮೂಢಾನು ನಾನು ಈ ನಾಡಿನೊಳಗೆಲ್ಲಾ 
ಕಾಡಿ ಬೇಡುವೆನೆಂಬ ಹೇಡಿತನವಲ್ಲದೆ 
ನಾಡಿವಂದಾದರು ಬಾಡಿಬತ್ತದೆ ಮನ 
ಹಾಡಿಪಾಡಿ ನಿನ್ನ ನೋಡಿ ಅರ್ಥಿಯಿಂದ -
ಲಾಡಿ ಕೊಂಡಾಡಿ ಕೂಡಾಡಲಿಲ್ಲ 
ಗೋಡೆ ಸಂಗಡ ಸರಸವಾಡಿದಾರಾ ಗೋಡೆ 
ನೋಡಿ ಹರುಷದಿಂದಲಾಡುವದೇ ಮಾತು 
ಆಡಲೇನೂ ನಿನಗೆ ಈಡಿಲ್ಲಾದ ಮಹಿಮ 
ಬೀಡಿನೊಳಗೆ ಈಗ ರೂಢಾತನವೆನೊ 
ಗೂಢ ಕರುಣಿರಂಗ ವಿಜಯವಿಟ್ಠಲ ಇತ್ತಾ 
ಮಾಡು ಮೊಗವನು ಗಾಡಿಕಾರ ದೈವಾ ॥ 3 ॥

 ಝಂಪೆತಾಳ 

ದೀಪಕ್ಕೆ ನೆಳಲುಂಟೆ ನಿನ್ನ ಪರಿಚಾರಕರಿಗೆ 
ಪಾಪಗಳುಂಟೆನೊ ಪರಮಪುರುಷ 
ಕೋಪತಾಪಗಳಿಂದ ನಾನಿದ್ದರೆ ನಿನ್ನ 
ಶ್ರೀಪಾದ ನೆನಸೀದ ಜನರಿಗೆಲ್ಲಾ 
ಆಪಾರ ಜನುಮದ ದುಷ್ಕರ್ಮಗಳು ಇರಲು 
ಪೋಪದೆ ಇರಬಲ್ಲವೇನೊ ಪೇಳೊ 
ಶ್ರೀಪತಿ ನಾನೊಬ್ಬ ಮಾಡಿದ ದೋಷಕ್ಕೆ 
ನೀ ಪರಿಹರ ಕಾಣಲಾಪದೆ ಸರಿಯೈಯ್ಯಾ 
ಆಪತ್ತಿಗಾಗುವ ಶಕ್ತ ನಿಂತಾದಡೆ 
ತಾಪಕಳೆವರಾರು ಪತಿತಾರೊಡಿಯಾ 
ಗೋಪಾಲರೊಡನಿಪ್ಪ ವಿಜಯವಿಟ್ಠಲರೇಯಾ 
ಕಾಪಾಡುವ ದೈವ ಎನ್ನ ಅನುದಿನ ಬಿಡದೆ ॥ 4 ॥

 ತ್ರಿವಿಡಿತಾಳ 

ಕರಗಿಸಿದ ಬೆಣ್ಣೆ ಘೃತವಾದ ಮ್ಯಾಲೆ 
ತಿರಗಿ ನವನೀತ ನೆನಿಸುವಾದೆ 
ಹರಿ ನಿನ್ನ ದಾಸರ ಚರಣಯುಗಳವನ್ನು 
ನೆರೆನಂಬಿದ ಮ್ಯಾಲೆ ನರರೊಳು ಗಣಣೆ
ಅರಮರೆಮಾಡದೆ ಎನ್ನ ಕಡಿಗೆ ಮೊಗ 
ತಿರುಹು ಸುಂದರಮೂರ್ತಿ ತಿರ್ಮಲೇಶಾ
ಅರಿಗಳದಲ್ಲಣ ವಿಜಯವಿಟ್ಠಲ ನೀನೆ 
ಕರುಣ ಮಾಡದಿರೆ ಮುಂದೆ ಸಾಕುವನ್ಯಾರೊ ॥ 5 ॥

 ಅಟ್ಟತಾಳ 

ಭಕುತ ಪ್ರಲ್ಹಾದ ನಿನಗೇನು ತಂದಿತ್ತ 
ಶುಕಮುನಿ ನಿನಗೇನು ಉಪಕಾರ ಮಾಡಿದ 
ಸುಖಬಡಿಸಿದನೆ ನಾರದ ಬಂದು ಅನುದಿನ 
ರುಕುಮಾಂಗದ ತೃಪ್ತಿ ಬಡಿಸೀದ ನಿನಗೇನೂ 
ಶಿಖರವೆತ್ತಿದನೆನೊ ಲೆಂಕಾಧೀಶನು ಬಂದು 
ಮಖ ಮಾಡೋದಕ್ಕೆ ಧನವಿತ್ತಾನೆ ನರ ಪುಂಡ -
ರೀಕನು ನಿನಗೆ ಏರುವ ರಥ ವಿತ್ತನೆ 
ಭಕುತಿಗೆ ಘಳಿಸಿ ಹಾಕಿದನೇನೊ ಧ್ರುವ ಶೌ -
ನಕ ಮಿಗಿಲಾದವರೇನು ಮಾಡಿದರು 
ಭಕುತಿ ಇದ್ದನಿತು ಭಜಿಸಿದರಲ್ಲದೆ 
ಅಕಟ ನಾನೊಬ್ಬನೆ ನಿನಗಾಗದವನೆ 
ಲಕುಮಿರಮಣ ನಮ್ಮ ವಿಜಯವಿಟ್ಠಲರೇಯ 
ಮುಖವಾ ತೋರು ಎನ್ನ ಭಕುತಿ ಇದ್ದನಿತೂ ॥ 6 ॥

 ಆದಿತಾಳ 

ಒಳ್ಳಿತಾದರೆ ಏನು ಇದಕೆ ಕಡೆಯಾಗುವದೆ 
ಬಲುಕಾಲಾದಲ್ಲಿ ಎನಗೆ ನಿನಿಗೆ ಸಂಬಂಧವೊ 
ಮಿಳಿತವಾಗಿರಲಾಗಿ ನೀ ಪೋಗುವದು ಎತ್ತ 
ತಿಳಿಯ ಪೇಳುವದು ಕೈಯಾ ಮುಗಿದು ಬಿನ್ನೈಸುವೆ 
ಪೊಳೆವ ವಸ್ತಕೆಯಲ್ಲಿ ಎಲ್ಲಿಗಾದರೆ ಒಂದು 
ಹುಳುಕು ಇದ್ದರೆ ನೋಡಿ ತೆಗೆದು ಬಿಸಾಟು ಅದ 
ಮೆಲುವನಲ್ಲದೆ ಬಿಡದೆ ವಿವೇಕನಾದವನು 
ಕೆಳಕೆ ಈಡ್ಯಾಡನೊ ಕೇಳೊ ದೇವ 
ಹುಳಕು ಕರ್ಮಗಳು ಎನ್ನಲ್ಲಿ ಅಪಾರವುಂಟು 
ನೆಲೆಯ ಬಲ್ಲ ಮಹಿಮಾ ತೆಗಿದು ಕಳಿಯೊ 
ಸುಳಿವ ಸುಲಭವಾಗಿ ವಿಜಯವಿಟ್ಠಲ ಭಕ್ತಾ -
ವಳಿಗೆ ಸೂರೆ ಕಾಣೊ ತಪ್ಪದೆ ಕಲಕಾಲ ॥ 7 ॥

 ಜತೆ 

ಇತ್ತಮುನ್ನಾ ಎನ್ನೊಳಿರಸಲ್ಲದಾದಾಡೆ 
ಚಿತ್ತಕ್ಕೆ ಬಂದಂತೆ ಮಾಡೊ ವಿಜಯವಿಟ್ಠಲ ॥
**********