ಶ್ರೀಮೊದಲಕಲ್ಲು ಶೇಷದಾಸಾರ್ಯ ವಿರಚಿತ
(ಗುರುವಿಜಯವಿಟ್ಠಲ ಅಂಕಿತ)
ಶ್ರೀಹರಿ ಪ್ರಾರ್ಥನಾ ಸುಳಾದಿ
(ಶ್ರೀಹರಿಯೇ , ನೆರೆನಂಬಿದ ಭಕ್ತರ ಕೈ ಬಿಟ್ಟು ಬಿಡುವರೆ? ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೆ? ನಿನ್ನಗಲಿದ ಕ್ಷಣ ಯುಗ, ದುಃಖವನ್ನು ದೂರ ಮಾಡು . ಕ್ರೂರ ದೈತ್ಯಾದಿಗಳ ಬಾಧೆ ತಪ್ಪಿಸು. ಅವರಿಗೆ ಸಹಾಯನಾಗಬೇಡ. ಸಂಸಾರಾರಣ್ಯದಿಂದ ಪಾರುಮಾಡು.)
ರಾಗ ವರಾಳಿ
ಧ್ರುವತಾಳ
ಹರಿ ನಿನ್ನ ನಿರ್ಘಣತನಕೆ ಎಣೆಯು ವುಂಟೆ
ಪರಮ ನಿರ್ಭಾರಕ ಕರುಣಾರ್ದ್ರ ಹೃದಯಾ
ಚಿರಕಾಲ ವೀರ ಸಹಜ ವಿದ್ಯಾ ಸಂಪಾದಿಸಿ
ನಿರುತ ಮನಿಯಲ್ಲಿದ್ದ ವೃದ್ಧ ತರುಣಿಯಲ್ಲಿ
ಉರುಪರಾಕ್ರಮವನೆ ತೋರಿದ ತೆರದಂತೆ
ಹರಿ ನೀನೆ ಗತಿಯೆಂದು ಮನ ಮೊದಲಾದ ಸಕಳ
ಕರುಣಾದಿ ಧನ ಸತಿ ಸುತರು ಮಿಕ್ಕಾದವೆಲ್ಲ
ಚರಣಕರ್ಪಿಸಿ ಕೊಟ್ಟು ಆರ್ತನಾಗಿ
ಕರವ ಮುಗಿದು ನಿನಗೆ ನಮೊ ನಮೊ ನಮೊ ಎಂದು
ಮೊರೆಯ ಹೊಕ್ಕವನ ಮೇಲೆ ಮರಳೆ ಮರಳೆ
ಮರಿಯ ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಹಾಕಿದಂತೆ
ಹರಿಯೆ ಇನಿತು ಮಾಳ್ಪುದುಚಿತವೇನೊ
ಪರಿಪೂರ್ಣ ಕೃಪಾನಿಧೆ ಗುರುವಿಜಯವಿಟ್ಠಲರೇಯ
ಸುರರ ಶಿರೋರನ್ನ ತ್ರಿಜಗನ್ಮಾನ್ಯಾ ॥ 1 ॥
ಮಟ್ಟತಾಳ
ಧರೆಯಲಿ ನಿರ್ಮಿಸಿದ ಪರಿ ಪರಿ ಪ್ರತಿಬಂಧ
ಪರಿವ್ರತಗಳೆಲ್ಲ ಪ್ರಾಪುತವಾದರು
ಕರಣಗಳು ಅದಕೆ ಶೆಣಿಸೆ ಎಂದಿಗು
ಹರಿ ನಿನ್ನಗಲಿದ ಕ್ಷಣ ವಂದ್ಯುಗವಾದ
ಮೀರಿದ ಪ್ರತಿಬಂಧ ಸಮ್ಮತದಲಿ ಉಂಬ
ಸುರ ನರರ ಮಧ್ಯ ಓರ್ವ ನಲ್ಲವು ಕೇಳಿ
ಪರಮ ದುಸ್ಸಹವಯ್ಯಾ ಪರಮಾತ್ಮ ನಿನ್ನಾಣೆ
ಸರಸಿಜ ಭವನಾಮ ಗುರುವಿಜಯವಿಟ್ಠಲರೇಯಾ
ಸೈರಿಸಲಾರೆನೊ ಅಗಣಿತ ದುಃಖಗಳ ॥ 2 ॥
ತ್ರಿವಿಡಿತಾಳ
ದ್ವಿಜ ಕುಲೋತ್ತಮ ತಾನು ಶುಚಿಯಾಗಿ ವಿಧಿಯಿಂದ
ವಿಜಯ ಮೂರುತಿಯನ್ನೇ ಅರ್ಚಿಸುವ
ವ್ಯಾಜದಿಂದಲಿ ಸ್ನಾನ ಸಂಧ್ಯಾದಿ ಜಪ ತಪ
ಯಜಿಪ ಸಮಯದಲ್ಲಿ ಸೈರಿಸದೆ
ಕುಜನನೋರ್ವನು ಶ್ವಪಚನಾದ ಅಧಮ ಬಂದು
ದ್ವಿಜ ಕುಲ ಮಣಿಯನ್ನೆ ಸ್ಪರಶ ಮಾಡೇ
ಭಜಕರ ಸುಖ ನೋಡು ಅವನ ದುಃಖಕೆ ಸಮ
ತ್ರಿಜಗದೊಳಗೆ ಆವದೈಯ್ಯ ದೇವ
ವಿಜಯ ಸಖನೆ ಕೇಳೊ ಉದಯ ಮೊದಲು ಮಾಡಿ
ರಜನಿ ಮುಖ ಕಾಲ ನಿರೀಕ್ಷಿಸಿ
ನೈಜವಾದ ಸತ್ವಗುಣ ಕ್ರೀಯಮಾಣಗಳಿಗೆ
ಕುಜನ ಶಿರೋಮಣಿ ಕಲಿಯು ತಾನು
ನಿಜಪರಿವಾರದಿ ಪ್ರತಿಕೂಲನಾಗಿ ತನ್ನ ಸ -
ಹಜವಾದ ಕೃತ್ಯಗಳ ಚರಿಸುತಿರೆ
ದ್ವಿಜ ವರೂಥಿಯೆ ನೀನು ಜರಿದು ನೋಡುತ ನಿಂದು
ಕುಜನ ತತಿಗೆ ಸಹಾಯವಾಗುವದು
ಸೋಜಿಗ ತೋರುತಿದೆ ಸಖನೆಂತೊ ಕೃಪಾನಿಧೆ
ತ್ಯಜನೆ ಮಾಡುವ ಶಕ್ತನಲ್ಲವೇನೋ
ಭುಜಗ ಭೂಷಣ ವಂದ್ಯ ಗುರುವಿಜಯವಿಟ್ಠಲರೇಯ
ರಜ ತಮೋ ಗುಣಗಳಿಗೆ ಪ್ರೇರಕ ನೀನೆ ॥ 3 ॥
ಅಟ್ಟತಾಳ
ತಮೊಗುಣವೆಂಬ ಹೀನಾಶ್ರಯದಿಂದ
ಕಾಮವೆಂಬೊ ಪಂಥ ಗಹನಾರಣ್ಯದಿ ಬಿದ್ದು
ಆ ಮಹ ಕ್ರೋಧಾಖ್ಯ ವ್ಯಾಘ್ರ ಬಾಧಿಸುತಿದೆ
ವ್ಯಾಮೋಹವೆಂಬುವ ವರಹ ಬೆನ್ನಟ್ಟಿ
ನೇಮದಿ ಲೋಭದ ಸರ್ಪ ನುಂಗುತಲಿದೆ
ಆ ಮದವೆಂಬಂಥ ಅಷ್ಟ ಗಜಂಗಳು
ವ್ಯೋಮ ಲಂಘಿಸಿದರು ಬಿಡದೆ ಬೆನ್ನಟ್ಟಿರೆ
ಕುಮತ್ಸಿರಿಯಾದ ಕಂಟಕಗಳನಟ್ಟು
ಭೀಮರೂಪವಾದ ಮಾಯಾಂಧಕಾರದೊ -
ಳೀಮನವೆಂಬುವ ವೃಶ್ಚಿಕ ಸ್ಪರಶದಿ
ದಾಮರೂಪವಾದ ಅಜ್ಞಾನ ಪಾಶದಿ
ಸಮಸ್ತ ಕರಚರಣಾದಿ ದೇಹವ ಕಟ್ಟಿ
ಆ ಮುಂದಣ ಮಾರ್ಗ ಕಾಣಗೊಡದಲಿಪ್ಪ
ಸ್ತೋಮ ವೈರಿಗಳೆಲ್ಲ ಮುನಿದೇಕ ಕಾಲದಿ
ನೇಮದಿ ಎನ್ನನು ಬಾಧೆ ಬಡಿಸುತಿರೆ
ಈ ಮಹಾ ಪ್ರತಿಬಂಧ ತೊಲಗಿಪರಿಲ್ಲವೊ
ಪ್ರೇಮ ನೀನೆ ಎಂದು ಎಷ್ಟು ಕೂಗಿದರು
ಸಾಮಜ ರಕ್ಷಕ ಸುಮ್ಮನಿರುವದು
ಭೂಮಂಡಲದಲ್ಲಿ ಧರ್ಮ ಪದ್ಧತಿ ಏನೋ
ತಾಮರಸ ನಯನ ಗುರುವಿಜಯವಿಟ್ಠಲರೇಯ
ಧಾಮವ ಸೇರಿಪ ಭಾರ ನಿನ್ನದಯ್ಯಾ ॥ 4 ॥
ಆದಿತಾಳ
ಧರಣಿಯ ಚಕ್ರದಲ್ಲಿ ಆರ್ತರನ ರಕ್ಷಿಸುವ
ಬಿರಿದು ನಿನ್ನದಯ್ಯಾ ಅನ್ಯರ್ಗೆ ಸಲ್ಲದೆಂದು
ಮೆರೆವುತಿದೆ ಶ್ರುತಿ ಶಾಸ್ತ್ರ ಪುರಾಣಗಳಲ್ಲಿ
ಹರಿ ನಿನ್ನ ಪದಗಳ ಜನುಮದೊಳಗೆ ಒಮ್ಮೆ
ಸ್ಮರಿಸಿದ ನರನಲ್ಲ ಗುಣದಿಂದ ಹೀನನಾಗಿ
ಪರಧನ ಪರಸತಿ ಪರನಿಂದ್ಯದವನಾಗಿ
ಬರಿದೆ ಕಾಲ ಕಳೆದೆ ಪರಲೋಕ ದೂರನಾಗಿ
ಕುರಿ ತನ್ನ ಮರಣದ ಕುರುಹವ ಕಾಣದಲೆ
ವರ ಭೂಷಣವಾದ ತೋರಣ ಬಯಸಿದಂತೆ
ಶಾರೀರ ಕೇವಲ ಅನಿತ್ಯವೆಂದು ತಿಳಿದು
ಪರಮೇಷ್ಠಿ ಕಲ್ಪತನಕ ಆಲೋಚನೆ ಮಾಡಿ
ದುರುಳವಾದ ನಡತಿಯಿಂದ ವಿಷಯವ ಸಂಪಾದಿಸಿ
ನರನೆಂದುದಾಸೀನ ಮಾಡದೆ ಕೃಪೆಯಿಂದ
ತ್ವರಿತದಿ ಬಂದೊದಗಿ ನಿಃಶತೃರ ಮಾಡಿ ಎನ್ನ
ಕರವ ಪಿಡಿದು ಪರಿಪೂರ್ಣ ದಯಾನಿಧೆ
ನರ ಸಖನಾದ ಗುರುವಿಜಯವಿಟ್ಠಲರೇಯ
ಸೈರಿಸಲಾರೆನಯ್ಯಾ ಈ ವಿಧ ತಾಪಗಳ ॥ 5 ॥
ಜತೆ
ಅನಿಮಿತ್ಯ ಬಾಂಧವನೆನಿಪ ದೇವರ ದೇವ
ಚಿನುಮಯ ಮೂರುತಿ ಗುರುವಿಜಯವಿಟ್ಠಲರೇಯಾ ॥
****
ಲಘುಟಿಪ್ಪಣಿ :
ಶ್ರೀ ಗೊರಾಬಾಳ ಹನುಮಂತರಾಯರು
ಧ್ರುವತಾಳದ ನುಡಿ :
ನಿರ್ಘಣತನಕೆ = ದಯಾಶೂನ್ಯ , ನಿರ್ದಯ ;
ನಿರ್ಭಾರಕ = ಸಂಪೂರ್ಣ ಭಾರವೊಹಿಸುವ ;
ಅಟ್ಟತಾಳದ ನುಡಿ :
ತಮೊಗುಣವೆಂಬ ಹೀನಾಶ್ರಯದಿಂದ = ಸಂಸಾರದಲ್ಲಿ ಬಾಧಿಪ ಕಾಮಕ್ರೋಧಾದಿಗಳು ಯಾವುವೆಂದರೆ, ತಮೊಗುಣ ಹೆಚ್ಚಿಸುವ ಅನ್ಯಥಾ ಮತಿಗಳ ಸಹವಾಸವೇ ಹೀನ ಆಶ್ರಯ ;
ಕಾಮವೆಂಬೋ ಪಂಥ ಗಹನಾರಣ್ಯದಿ ಬಿದ್ದು = ವಿಷಯೇಚ್ಛಾ ಕಾಮವೆಂಬ ಗಹನ ಆರಣ್ಯ ;
ಆ ಮಹ ಕ್ರೋಧಾಖ್ಯ ವ್ಯಾಘ್ರ ಬಾಧಿಸುತಿದೆ = ಕಾಮದಿಂದ ಕ್ರೋಧ (ಸಿಟ್ಟು) ಎಂಬ ಹುಲಿ ನುಂಗಿ ಭಾದೆ ಬಡಿಸುವದು ;
ವ್ಯಾಮೋಹವೆಂಬುವ ವರಹ ಬೆನ್ನಟ್ಟಿ = ಅನಿತ್ಯ ವಸ್ತುಗಳಲ್ಲಿ ನಿತ್ಯವೆಂದು ಪ್ರೀತಿ ಮಾಡುವದೆ ವ್ಯಾಮೋಹ, ಎಂಬುವ ಕಾಡುಹಂದಿ ಬೆನ್ನು ಹತ್ತಿದೆ ;
ನೇಮದಿ ಲೋಭದ ಸರ್ಪ ನುಂಗುತಲಿದೆ = ಇದ್ದದ್ದರಲ್ಲಿ ಒಬ್ಬರಿಗೂ ಕೊಡದ ತಾನೂ ಉಣ್ಣದ ಸರ್ಪದ ಸಮಾನ , ಲೋಭ(ಕೃಪಣತೆ) ನುಂಗಹತ್ತಿದೆ ;
ಆ ಮದವೆಂಬಂಥ ಅಷ್ಟಗಜಂಗಳು = ಅನ್ನಾದಿ ಅಷ್ಟಮದಗಳೇ ಅಷ್ಟಗಜಗಳು ಬೆನ್ನಟ್ಟಿವೆ ;
ಕುಮತ್ಸರಿಯಾದ ಕಂಟಕಗಳನಟ್ಟು = ಸಜ್ಜನರಲ್ಲಿ ಕೆಟ್ಟ ಮತ್ಸರವೆಂಬೊ ಮುಳ್ಳುಗಳು ನೆಡುತ್ತವೆ ;
ಭೀಮರೂಪವಾದ ಮಾಯಾಂಧಕಾರದೊಳು = ಅಜ್ಞಾನಾಂಧಕಾರದೊಳು ;
ಈ ಮನವೆಂಬುವ ವೃಶ್ಚಿಕ ಸ್ಪರಶದಿ = ಕೆಟ್ಟ ವಿಷಯಾದಿಗಳಲ್ಲಿ ಚರಿಸುವ ಕೆಟ್ಟ ಚೇಳು ಕಡಿತದಿಂದ ;
ದಾಮರೂಪವಾದ ಅಜ್ಞಾನ ಪಾಶದಿ = ಸಂಸಾರ ಪಾಶದಿಂದ ಕಟ್ಟಿ ಹಾಕಿರುವದನ್ನು ಬಿಡಿಸು ;
🙏 ಶ್ರೀಕೃಷ್ಣಾರ್ಪಣಮಸ್ತು 🙏
***