..
ಒಂದು ಪ್ರಕಾರವೆ ಸ್ವಾಮಿ ಮಂದಿಯ ರಕ್ಷಿಸುವುದು
ನಿಂದವರ ದೇಹದಲ್ಲಿ ಹಿಂದೆಮುಂದ ಭಯವನಿತ್ತು ಪ.
ಅಪಾರ ಮಹಿಮ ನೀನು ಒಪ್ಪುವ ಹಯಾಸ್ಯನಾಗಿ
ಎಪ್ಪತ್ತೆರಡು ಸಾವಿರ ಇಪ್ಪ ನಾಡಿಗಳೊಳಿದ್ದು 1
ಮುಖ ನಾಸ ನೇತ್ರ ಶ್ರೋತ್ರ ತ್ವಕ್ ನಖೇಂದ್ರಿಯ ತದ್ಗೋಳಕ
ಸಕಲರೂಪಗಳಲ್ಲಿ ನೀನೆ ಆಧಾರವಾಗಿದ್ದು 2
ಶ್ವಾಸೋಚ್ಛ್ವಾಸ ಚೇಷ್ಟವಿಚÀಕ್ಷಣ ಹಾಸವಿಲಾಸ ಭೂಷಣ
ಗ್ರಾಸಾವಾಸಂಗಳಿಗೆ ನಿವಾಸವಾಗಿ ಪ್ರೇರಿಸುವೆ 3
ಅನ್ನಪ್ರಾಣ ಮನೋಮಯ ಜ್ಞಾನ ಆನಂದೋತ್ತಮ
ಅನಂತ ರೂಪಗಳಲ್ಲಿ ನೀನೆ ಆಧಾರವಾಗಿದ್ದು 4
ಪ್ರಾಣೋಪಾನ ರೂಪಿನಿಂದ ವ್ಯಾನೋದಾನರೂಪನಾಗಿ
ವ್ಯಾನೋದಾನ ರೂಪಿನಿಂದ ಉದಾನ ಸಮಾನನಾಗಿದ್ದು 5
ಪೂಜಾ ವ್ಯಾಖ್ಯಾನ ಕೀರ್ತನ ಭೋಜನ ಮಜ್ಜನಸುಖ
ಭಾಜನೆಗಳಲ್ಲಿದ್ದು ಪೂಜ್ಯನಾಗಿ ಪ್ರೇರಿಸುವ 6
ವಿಶ್ವ ತೇಜಸ್ಸು ಪ್ರಾಜ್ಞಾ ತುರ್ಯಾ ಅವಸ್ಥಾತ್ರಯಂಗಳೆಲ್ಲ ಕೊಡುವೆ
ಜಾಗ್ರತ್ಸ್ವಪ್ನ ಸುಷುಪ್ತಿಯಲ್ಲಿ ವಿಶ್ವಪ್ರೇರಕನಾಗಿದ್ದು 7
ಆತ್ಮರೂಪ ಆದ್ಯ ಅನಂತ ಅಂತರಾತ್ಮ ರೂಪನಾಗಿ ಜ್ಞಾ-
ನಾತ್ಮ ರೂಪಿನಿಂದ ಪರಮಾತ್ಮರೂಪನಾಗಿ 8
ಅನಿರುದ್ಧ ಸಂಕರ್ಷಣ ಪ್ರದ್ಯುಮ್ನ ಘನ ವಾಸುದೇವ
ನೆನೆವರ ಪಾಪ ಪರಿಹರಿಸುವ ನರಹರಿ 9
ನೀನು ನಿನ್ನ ದಾಸರಿಗಾಗಿ ಮನುಷ್ಯಮುಖದಿಂದ ತತ್ವ
ತನುಗಳಿಂದ ಕುಡುವ ಅವರವರ ದೇಹ್ಯದೊಳಿದ್ದು 10
ಸರ್ವರೊಳಗೆ ನೀನಿದ್ದು ಅವರವರ ವಿಭಾಗದ
ಕರ್ಮ ಪರೀಕ್ಷಿಸಿ ಪ್ರೇರಿಸುವ ವರ ಶ್ರೀಹಯವದನ 11
***