ಶ್ರೀ ವೇಣುಗೋಪಾಲದಾಸರ ಕೃತಿ
ರಾಗ : ಸರಸ್ವತಿ ಆದಿತಾಳ
ವಾದಿರಾಜನೆ ನಿನ್ನ ಪಾದಕ್ಕೆರಗಿ ನಾ
ಮೋದದಿಂ ಬೇಡುವೆ ಮಾಧವನ ತೋರೋ ॥ಪ॥
ಸಕಲ ವೇದ ಪುರಾಣ ಶಾಸ್ತ್ರಗಳೆಲ್ಲಾ
ಪ್ರಕಟಿಸಿದೆ ಕನ್ನಡದಿ ಪ್ರೇಮದಿಂದ
ನಿಖಿಳ ಜನರ ತಾವಾನಕದುಂದುಭಿಸುತನ
ಭಕುತಿಯ ಪಡೆದು ಮೇಣ್ಮುಕುತಿಯೈದಲಿಯೆಂದು ॥೧॥
ಗಣನೆಯಿಲ್ಲದೆ ಕೀರ್ತನೆ ಸುಳಾದಿಗಳನ್ನು
ಮನವೊಲಿದು ಮಾಡಿದ್ದು ಜನರು ಪಠಿಸಿ
ವನಜನಾಭನ ಕರುಣವನು ಪಡೆದು ತಾ-
ವನುಭವಿಸಲಾನಂದವನೆನುತಲಿ ॥೨॥
ನಿನ್ನ ನೆನೆಯ ಧನ್ಯ ನಿನ್ನ ಪಾಡಲು ಮಾನ್ಯ
ನಿನ್ನ ಕೊಂಡಾಡಲು ಪಾಪಶೂನ್ಯ
ನಿನ್ನವನೆನೆ ವೇಣುಗೋಪಾಲವಿಟ್ಠಲ
ಮನ್ನಿಸಿ ಸದ್ಗತಿ ಪಾಲಿಪ ಮುದದಿ ॥೩॥
*******