ಶ್ರೀ ವಿಜಯದಾಸಾರ್ಯ ವಿರಚಿತ ತೀರ್ಥಾಭಿಮಾನಿ ದೇವತೆಗಳ ಪ್ರಾರ್ಥನಾ ಸುಳಾದಿ
ರಾಗ ಹಂಸಧ್ವನಿ
ಧ್ರುವತಾಳ
ತೀರ್ಥಾಭಿಮಾನಿಗಳಿರೇ ವಂದಿಸುವೆನು ನಿಮಗೆ
ಸ್ವಾರ್ಥಕ ಮತಿಬಿಡಿಸಿ ನಿತ್ಯ ಪಾರ-
ಮಾರ್ಥಿಕ ಜ್ಞಾನವ ಕೊಟ್ಟು ಕರುಣದಿಂದ
ಸಾರ್ಥಕ ಮಾಡಿಸುವುದು ಸಕಲ ಪುಣ್ಯ
ತೀರ್ಥಕ್ಷೇತ್ರ ಮೂರ್ತಿಯಲ್ಲಿದ್ದ ಭಗವಂತ
ಸಾರ್ಥಿಯಾಗಲಿ ಎನಗೆ ದಿನ ಪ್ರತಿದಿನ
ಸಾರ್ಥಿಕನಂತೆ ಮಾಡಿದ ಕರ್ಮಕಲಕಾಲ
ವ್ಯರ್ಥವಾಗುವ ಪರಿ ಮಾಡದಿರೀ
ಅರ್ಥ ಆತುಬಿಡಿಸಿ ಭಗವದ್ಗೋಸುಗ ಅ-
ನರ್ಥಾಂತರ ಜ್ಞಾನಪಾಲಿಸಬೇಕು
ಪ್ರಾರ್ಥನೆ ಮಾಡುವೆ ಪ್ರಯಾಸವಾಗದಂತೀ
ಪಾರ್ಥಿವದೊಳಗಿದ್ದು ಧನ್ಯನ ಮಾಡೀ |
ಆರ್ಥ ಪಂಚಮಿಕ್ಕ ಮಾನಿಗಳು ಯ-
ತಾರ್ಥ ಜ್ಞಾನವೆ ನಿಮ್ಮಿಂದಲೀ, ಮೂ -
ಹೂರ್ತವಾದರು ಕಾಲ ಬರಿದಾಗದಂತೆ, ಕೃ-
ತಾರ್ಥನ್ನ ಮಾಡುವುದು ಎಲ್ಲಿದ್ದರೂ
ತೀರ್ಥಪಾದ ನಮ್ಮ ವಿಜಯವಿಠಲ , ಸ-
ರ್ವಾರ್ಥ ಪ್ರದಾತನೆಂಬೊ ಮುಖ್ಯ ಜ್ಞಾನವೆ ಇರಲಿ ॥೧॥
ಮಟ್ಟತಾಳ
ಆವಾವ ತೀರ್ಥದಲಿ ವಾಸವಾಗಿದ್ದ
ದೇವತತಿಗಳಿರೇ ಧೈರ್ಯವನೆ ಇತ್ತು
ಪಾವನ ಮಾಡುವುದು ಸ್ನಾನಾದಿ ಎಲ್ಲಿದ್ದ
ದೈವವಶದಿಂದ ಬೇಡಿಕೊಂಬೆನೊ ನಿಮ್ಮ ನಾ
ಸಾವಂಶರಾಗಿ ಸಂಚರಿಸುವ ಯೋಗ
ಆವಾವ ಕಾಲಕೆ ಅಪ್ರತಿಯಾಗಿದೆ
ದೇವದೇವೇಶ ಸಿರಿ ವಿಜಯವಿಠಲನ್ನ
ಭಾವದಲ್ಲಿ ಭಜಿಪ ಭಾಗ್ಯವಂತರೆ ಸತತ ॥೨॥
ತ್ರಿವಿಡಿತಾಳ
ದಶ ಇಂದ್ರಿಯಂಗಳಲ್ಲಿ ಬಲು ಬಗೆ ಬಗೆಯಿಂದ
ದಶ ದಿಕ್ಕುಗಳ ತಿರುಗಿ ಮರೆಯಾದೆ ಇಲ್ಲದೆ
ಅಶನ ಉದಕ ದ್ರವ್ಯ ವಸ್ತ್ರ ಮುಂತಾದಾಘ
ಪ್ರಸರ ಕೋಟಿಯೊಳಗೆ ಮುಣುಗಿ ತೇಲಿ
ಕುಶಲಗತಿಯ ಮರದು ಕೈಕೊಂಡು ದೇಹ ಪಾ-
ಲಿಸಿಕೊಂಡೆ ನಾನು ನನ್ನದು ಎನುತಲಿ
ಬೆಸನೆ ಕೇಳಿ ಸರ್ವತೀರ್ಥವಾಸಿಗಳೆ ಮಹ
ಪುಶಿ ಮೊದಲಾದ ಪಾಪ ಪ್ರವರ್ತಕ
ತ್ರಿಸರೇಣು ಕಾಲವಾದರು ಪುಣ್ಯ ಮಾಡದ
ಪಶುಮನುಜನು ನಾನು ಎನ್ನ ನೋಡಿ
ಉಸರಲೇನು ಇನ್ನು ನಾಲಿಗೆಂಬೋದಿಲ್ಲ
ಯಶಸು ನಿಮ್ಮದು ಮುಂದೆ ಪೊರೆವ ಭಾರ
ವಸುಧಿಯೊಳಗೆ ಆವಪರಿಯುಂಟೊ ತಿಳಿಯೆ ವಂ-
ದಿಸುವೆನೊ ತಲೆವಾಗಿ ತವಕದಿಂದ
ಋಷಿ ಛಂದಸ್ಸು ದೇವತ ಗೋಳಕ ಚಿಂ-
ತಿಸುವ ಮತಿ ಕಾಣೆನೊ ತೀರ್ಥದಲ್ಲಿ
ಹಸಿವೆಗೋಸುಗ ಅನ್ನ ಉಂಡಂತೆ ಅಲ್ಲದೆ
ಬೆಸಸೂವೆ ಎನ್ನ ಕರ್ಮಾಚರಣೆ
ದಶಮೂರ್ತಿ ವಿಜಯವಿಠಲರೇಯನ ಪಾದ
ವಶಮಾಡಿಕೊಂಡಿಪ್ಪ ಜ್ಞಾನಯೋಗಿಗಳೆ ॥೩॥
ಅಟ್ಟತಾಳ
ಮುಗ್ಧ ಜನರೊಳಿದ್ದು ಮಾಡಿದ ಕರ್ಮವ
ದಗ್ಧ ಮಾಡುವುದು ದಯದೃಷ್ಟಿಯಲಿ ನೋಡಿ
ದಿಗ್ದೇಶದೊಳು ನಿಮ್ಮ ಮಹಿಮಿಗೆ ಎಣೆಗಾಣೆ
ದಿಗ್ದಂತಿಗೆ ಅಂಕುಶ ಒಂದು ಸಾಲದೆ
ದಿಗ್ದಂಡಮಾಡುವ ಅತಿ ಪ್ರತಾಪರಿಗೆ ಈ-
ಳುಗ್ಧಳ ಹಿಂದು ಮಾಡುವದು ಅರಿವೆ
ದುಗ್ದಾಬ್ಧಿಶಯನ ವಿಜಯವಿಠಲನಂಘ್ರಿ
ಹೃದ್ಗಣಿ ನೋಡುವ ದೇವದಾಸರೆ ನಮೊ ॥೪॥
ಆದಿತಾಳ
ಪ್ರತಿ ಪ್ರತಿ ತೀರ್ಥದಲ್ಲಿ ಪ್ರತಿ ಪ್ರತಿ ದಿವಸದಲ್ಲಿ
ಪ್ರತಿ ಪ್ರತಿ ಸ್ನಾನಂಗಳು ಮಾಡುವ ಜಲಂಗಳು
ಪ್ರತೀಕಾವೆ ನಿಮಗೆಂದು ತಿಳಿದು ಆಮೇಲೆ ಮಿ-
ಳಿತ ಚತುರ್ಬಗೆ ಗ್ರಹಿಸಿ ಮತ್ತೆ ತೇಜೋಮಯ-
ಗತಿ ತಪ್ಪದಂತೆ ನೋಡಿ ಆ ತರುವಾಯ ಮ-
ರುತ ದೇವ ತದ್ಗತ ಲಕ್ಷ್ಮಿ ನಾರಾಯಣ
ಇತರಾಲೋಚನೆ ಸಲ್ಲಾ ದ್ರವರೂಪ ಸರ್ವವೆಂದು
ಮತಿಯಿಂದ ತಿಳಿವಂತೆ ಭಕುತಿಯ ಕೊಡುವುದು
ಮಜ್ಜನಾದಿ ಕಾಲಕ್ಕೆ
ನುತಿಸುವೆ ಎನ್ನ ಕಲಿಕಲ್ಮಷವ ಕಳೆದು
ಹಿತವಾಗಿ ಕಾವುದೆಲ್ಲಾ ಸಾರ್ಧ ತ್ರಿಕೋಟಿ ದೇವ
ರತಿ ಪತಿ ಪಿತ ನಮ್ಮ ವಿಜಯವಿಠಲರೇಯಾ
ಪ್ರತಿಕಾಲದಲ್ಲಿ ಪೊಳೆವಂತೆ ಕಾರುಣ್ಯಮಾಳ್ಪದು ॥೫॥
ಜತೆ
ಎಲ್ಲೆಲ್ಲಿ ಎನ್ನ ಬೆಂಬಲವಾಗಿ ಇದ್ದು ಭೂ -
ವಲ್ಲಭ ವಿಜಯವಿಠಲನ್ನ ತೋರಿಸುವುದು ll೬॥
********