Showing posts with label ಹರಿನಾಮ ಲಕ್ಷ್ಮೀ ಕಾಣೊ vijaya vittala suladi ಹರಿನಾಮ ಪ್ರಶಂಸನಾ ಸುಳಾದಿ HARINAAMA LAKSHMI KAANO HARINAAMA PRASHASHAMSANA SULADI. Show all posts
Showing posts with label ಹರಿನಾಮ ಲಕ್ಷ್ಮೀ ಕಾಣೊ vijaya vittala suladi ಹರಿನಾಮ ಪ್ರಶಂಸನಾ ಸುಳಾದಿ HARINAAMA LAKSHMI KAANO HARINAAMA PRASHASHAMSANA SULADI. Show all posts

Sunday, 8 December 2019

ಹರಿನಾಮ ಲಕ್ಷ್ಮೀ ಕಾಣೊ ದಾರಿದ್ರ್ಯ vijaya vittala suladi ಹರಿನಾಮ ಪ್ರಶಂಸನಾ ಸುಳಾದಿ HARINAAMA LAKSHMI KAANO HARINAAMA PRASHASHAMSANA SULADI

1st audio - first para only

2nd Audio by Mrs. Nandini Sripad

ಶ್ರೀ ವಿಜಯದಾಸಾರ್ಯ ವಿರಚಿತ

ಶ್ರೀಹರಿ ನಾಮ ಪ್ರಶಂಸನಾ ಸ್ತೋತ್ರ ಸುಳಾದಿ

 ರಾಗ ರೇವಗುಪ್ತಿ 

ಧ್ರುವತಾಳ

ಹರಿನಾಮ ಲಕ್ಷ್ಮೀ ಕಾಣೊ ದಾರಿದ್ರ್ಯ ಜನರಿಗೆ
ಹರಿನಾಮ ಬ್ರಹ್ಮ ಕಾಣೊ ಅಲ್ಪಾಯುಳ್ಳ ಜನಕೆ
ಹರಿನಾಮ ಪವನ ಕಾಣೊ ದುರಿತ ಘನಾವಳಿಗೆ
ಹರಿನಾಮ ಗರುಡ ಕಾಣೊ ಕಾಲಾಖ್ಯ ಸರ್ಪಗಳಿಗೆ
ಹರಿನಾಮ ಶೇಷ ಕಾಣೊ ಜ್ಞಾನ ಸಾಧನ ಪಾಲಿಪುದಕೆ
ಹರಿನಾಮ ರುದ್ರ ಕಾಣೊ ಭವವೆಂಬ ಮೃತ್ಯುವಿಗೆ 
ಹರಿನಾಮ ಇಂದ್ರ ಕಾಣೊ ದುಷ್ಕರ್ಮ ಪರ್ವತಕೆ
ಹರಿನಾಮ ಸೂರ್ಯ ಕಾಣೋ ಅಜ್ಞಾನಾಖ್ಯ ಕತ್ತಲಿಗೆ
ಹರಿನಾಮ ಚಂದ್ರ ಕಾಣೊ ಹೃತ್ತಾಪ ಮೂಲ ಸ್ಥಾನಕ್ಕೆ
ಹರಿನಾಮ ವರುಣ ಕಾಣೊ ವೃಷ್ಟಿ ಕೊಡುವದಕ್ಕೆ
ಹರಿನಾಮ ಅಗ್ನಿ ಕಾಣೊ ದುರಿತ ಕಾನನಕೆ ಮುಖ್ಯ
ಹರಿನಾಮ ವಡಬಾನಲವೊ ಮಹಾ ದುಃಖಸಾಗರಕ್ಕೆ
ಹರಿನಾಮ ಸಂಜೀವನವೊ ಮೃತ್ಯು ಪ್ರಾಯ ಜೀವಿಗಳಿಗೆ
ಹರಿನಾಮ ವೈದ್ಯ ಕಾಣೊ ಭವ ರೋಗ ಕಳೆವದಕ್ಕೆ
ಹರಿನಾಮ ಗಂಗೆ ಕಾಣೊ ಮನಮಲಿನ ತೊಳೆವದಕ್ಕೆ
ಹರಿನಾಮ ಕವಿಯೆ ಕಾಣೊ ಅನಾಚಾರ ಬಿಡಿಸುವದಕ್ಕೆ
ಹರಿನಾಮ ಪ್ರಾಣ ಕಾಣೊ ಇಂದ್ರಿಯಗಳ ಬಲಕೆ
ಹರಿನಾಮ ವ್ಯಾಘ್ರ ಕಾಣೊ ಆಪತ್ತು ಮೃಗಂಗಳಿಗೆ
ಹರಿನಾಮ ಸಿಂಹ ಕಾಣೊ ಕ್ರೋಧವೆಂಬ ಗಜಕೆ
ಹರಿನಾಮ ಗಜ ಕಾಣೊ ಆಶವೆಂಬ ಕದಳಿಗೆ
ಹರಿನಾಮ ಶಸ್ತ್ರ ಕಾಣೊ ಕಾಮ ಬಲ ಖಂಡ್ರಿಪದಕ್ಕೆ
ಹರಿನಾಮ ವಿತ್ತ ಕಾಣೊ ಸತ್ಕರ್ಮ ಕೊಂಬೋದಕ್ಕೆ
ಹರಿನಾಮಾಭರಣ ಕಾಣೊ ಶರೀರಾಲಂಕಾರಕ್ಕೆ
ಹರಿನಾಮಾಂಬರ ಕಾಣೊ ಭವವೆಂಬ ಶೀತಕ್ಕೆ
ಹರಿನಾಮ ವಜ್ರಪಂಜರ ಶರಣರ ಕುಲಕೋಟಿಗೆ
ಹರಿನಾಮ ನೆನೆದವರ ಅಶುಭವೆ ಓಡಿಸುವದು
ಹರಿನಾಮ ನಂಬಿದರೆ ಸರ್ವವು ದೃಷ್ಟಿ ಗೋಚರ
ಹರಿನಾಮ ಆವಾವಾಪೇಕ್ಷವ ಕೊಡುವದು
ಹರಿ ಮೂರುತಿ ನಮ್ಮ ವಿಜಯವಿಠ್ಠಲರೇಯಾ
ಹರಿಯೆಂದ ಮನುಜಂಗೆ ಹರುಷ ಪ್ರವಾಹ ಎನ್ನು ॥ 1 ॥

ಮಟ್ಟತಾಳ

ತೊಟ್ಟಿಲೊಳಗೆ ಇದ್ದ ಶಿಶುವಿನ ಮೊಗ ನೋಡಿ
ತುಷ್ಟಳಾಗಿ ಜನನೀ ತೆಗೆದೆತ್ತಿ ಮೊಲೆಯ
ಗೊಟ್ಟು ಸಂತೈಸುವಳಾ ತೆರದಿ ಎನಗೆ
ವಿಠ್ಠಲ ವಿಠ್ಠಲನೆಂಬೊ ಜನನಿ ಇರಲು
ಕಷ್ಟಬಡುವದ್ಯಾಕೆ ಕಂಡದ್ದು ಹಂಬಲಿಸಿ 
ಇಷ್ಟಮೂರುತಿ ರಂಗ ವಿಜಯವಿಠ್ಠಲರೇಯನ 
ಪಟ್ಟಣ ಸೇರುವದು ಒಂದೇ ನಾಮದಿಂದ ॥ 2 ॥

ತ್ರಿವಿಡಿತಾಳ

ಹರಿನಾಮವೆ ನೆನಿಸೆ ಆವಾವ ವಿಪತ್ತು
ಪರಿಹಾರವಾಗೋವು ಪ್ರತಿ ಪ್ರತಿ ಕ್ಷಣದಲ್ಲಿ
ಹರಿನಾಮದಿಂದಲಿ ತತ್ವೇಶ ಮೊದಲಾದ
ಸುರರೆಲ್ಲ ವಶವಾಗಿ ಇರುತಿಪ್ಪರು
ಪರಲೋಕದ ಮಾರ್ಗ ಪುರದ ಬೀದಿಯಂತೆ
ಅರೆಮರೆ ಇಲ್ಲದಲೆ ಕಾಣಿಸುವದು ಸತ್ಯಾ
ಪರಬುದ್ಧಿ ಪ್ರತ್ಯಕ್ಷವಾಗುವದು ಸತ್ಯಾ
ಪರಮ ಜ್ಞಾನಿಯಾಗಿ ಸುಖಿಸುವನೋ
ಎರಡೆಂಟು ದಿಕ್ಕಿನಲ್ಲಿ ಆಗುವ ವಿವರ ವಿ -
ಸ್ತಾರವಾಗಿ ತಿಳಿವುದು ಗುಣಿಸಿದರೂ
ಹರಿನಾಮದಿಂದ ಬಂದ ಜ್ಞಾನಕೆ ಇನಿತು
ಚರಿಯಲಿಪ್ಪದೆಂದು ಶಂಕಿಸದಿರು
ಅರುಹುವೆ ಮನಕೆ ಅನುಭವವಾಗುವಂತೆ ನಿಂ -
ದಿರದೆ ಲಾಲಿಸುವದು ಭಕುತಿಯಿಂದ
ನರನೊಬ್ಬ ಅಂಜನವ ಮಾಡಿದರಿಂದದು
ಕರತಳದಲ್ಲಿ ಪೆಚ್ಚಿಸಿಕೊಂಡರೆ
ಸರಿಸಾದೂರದಲ್ಲಿದ್ದ ವಸ್ತು ಕಾಣಿಸುವದು
ಧರೆಯೊಳಗಿಂಥ ಈ ಜಡಕೆ ಈ ಸಾಮರ್ಥಿಕೆ
ಸ್ಥಿರವಾಗಿ ಇರಲಿಕ್ಕೆ ಜ್ಞಾನ ದೃಷ್ಟಿಗೆ ಕಾಂಬೋ -
ದರಿದೇನೊ ಎಲೊ ಮನವೆ ಜಡ ಇಂದ್ರಿಯಂಗಳು
ನಿರುತಲಿದ್ದರೇನು ಜ್ಞಾನ ಅಧಿಕವಾಗೆ
ಹೊರಗೆ ಒಳಗೆ ಮಾಳ್ಪದೆಲ್ಲ ಜ್ಞಾತ
ಪರಮ ಪುರುಷ ರಂಗ ವಿಜಯವಿಠ್ಠಲರೇಯನ
ಚರಣ ಧ್ಯಾನವ ಮಾಳ್ಪ ಜ್ಞಾನೋಪಾಸನೆ ಬಲವೊ ॥ 3 ॥

ಅಟ್ಟತಾಳ

ಅನುಭವವಿಲ್ಲದ ಜ್ಞಾನದ ಫಲವೇನು
ಅನುದಿನ ಜ್ಞಾನಕ್ಕೆ ಪ್ರತಿಷ್ಠೆ ಯಾತಕೆ
ಅನಿಮಿಷ ಮುನಿ ಜನ ಕೊಂಡಾಡಲ್ಯಾತಕೆ
ಘನತನವ್ಯಾತಕ್ಕೆ ಜ್ಞಾನಿ ಮನುಜನೆಂದು
ತೃಣ ಮಿಕ್ಕಾದದಕೆ ಸಾಧನೆ ಜನುಮವ್ಯಾತಕ್ಕೆ
ನಿನಗೆ ನೀನೆ ನೋಡು ಜ್ಞಾನಕ್ಕೆ ಶ್ರೇಷ್ಠತ್ವ
ವನಜನಾಭನೆ ತಾನೆ ಜ್ಞಾನಕ್ಕೆ ಸಿಲುಕುವ
ಚಿನುಮಯ ರೂಪಗಳು ತೋರಿ ಕೊಳುತ ಲಿಂಗ
ತನುವೆ ಪೋಗುವಂತೆ ಗುಣಾನಂತನ ಮಾಳ್ಪ
ಪ್ರಣತನಾಗಿರುವ ರಾಮಕೃಷ್ಣ ಗೋವಿಂದ ವಾ -
ಮನ ಮಧುಸೂದನ ಮುಕುಂದ ಜನಾ -
ರ್ದನ ಅಚ್ಯುತಾನಂತ ನಾಮ ಉಚ್ಚರಿಸಲು
ಉಣಲುಂಟು ಉಡಲುಂಟು ಏನೇನು ಬೇಡಿದ
ಮನೋಭೀಷ್ಟೆಯು ಉಂಟು ಮಾತು ಸತ್ಯವೆ ಉಂಟು
ಕನಸಿನೊಳಾದರು ಕಾಣಿಸವು ಪಾಪ
ಗಣಗಳೆಲ್ಲ ಕೀಳಿ ಜ್ಞಾನದ ಮಹಿಮಾ 
ಜನನ ವಿದೂರ ನಮ್ಮ ವಿಜಯವಿಠ್ಠಲ ನಂಘ್ರಿ
ಮನದಲ್ಲಿ ನಿಲ್ಲಿಸಲು ಉತ್ಸಾಹ ಎಂದಿಗೂ ॥ 4 ॥

ಆದಿತಾಳ 

ವಿದ್ಯದ ಬಲ ಕೇಳೋ ಸುಯಜ್ಞ ಮುನಿ ಬಾಲಕ
ಶುದ್ದಾತ್ಮ ಕಾನನದಲ್ಲಿ ಪೋಗುತಿರೆ ಮಹ
ಕ್ರುದ್ಧವ ತಾಳಿ ಇಪ್ಪತ್ತೆಂಟು ಪಿಶಾಚಿಗಳು
ಮೆದ್ದೆವೆಂದು ವೇಗಾ ಹರಿದೆದ್ದು ಓಡಿ ಬರಲು 
ಖದ್ಯೋತವರ್ಣದಂತೆ ಜ್ಞಾನಿಯ ಕಾಂತಿಯಿಂದ
ಪೊದ್ದಿ ಭೀತಿಯಿಂದ ವಂದನೆ ಮಾಡಿ ನಮ್ಮ
ನುದ್ಧರಿಸು ಎಂದು ವಶವಾದರು ಕೇಳಿ
ಭದ್ರಗತಿಯ ಪಥವ ಸೇರಿದರು ಬಿಡದೆ
ಈ ಧರಿಯೊಳು ಭಕ್ಷಿಸಲು ಬಂದ ಕ್ರೂರರು
ಕ್ಷುದ್ರತನವ ಬಿಟ್ಟು ಗೆಳಿಯರಾದರು ನೋಡು
ಪದ್ಮನಾಭನ ಪೊಂದಿ ಜ್ಞಾನ ಸಂಪಾಸಿದ
ಸದ್ಮುನಿಗೆ ಸಮಸ್ತ ಜಗತ್ತು ವಶಕರವು
ಸಿದ್ದಾಂತ ಪ್ರಮೇಯ ಇದೆ ಇದರಂತೆ ಚರಿಸಿದರೆ
ಇದ್ದಲ್ಲಿ ಸೌಕರ್ಯವ ಆವ ಮನುಜಗಾಗೆ
ಬುದ್ಧಿ ಪಾಲಿಸುವ ಪಾವನ್ನ ವಿಜಯವಿಠ್ಠಲನ್ನ
ಹೃದ್ಯದಲ್ಲಿ ಇಡಲು ನೆನೆದಂತೆ ಸಾಕಾರ ॥ 5 ॥

ಜತೆ

ಮಾತು ಮಾತಿಗೆ ಹರಿಯ ನಾಮವೆ ಗತಿ ಎನ್ನು
ಗಾತುರ ನಿರ್ಮಲನಾ ವಿಜಯವಿಠ್ಠಲ ಒಲಿವಾ ॥
**********

 ರಾಗ ರೇವಗುಪ್ತಿ