ಎಂದೆನ್ನ ಪೊರೆವೆ ಶ್ರೀರಂಗಧಾಮ
ಎಂದೆನ್ನ ಪೊರೆವೆ ಪ.
ಎಂದೆನ್ನ ಪೊರೆವೆ ಎಂದೆನ್ನ ಕರೆವೆ
ಮಂದಹಾಸ ಮುಖನೆ ಎಂದೆನ್ನನೀಕ್ಷಿಸುವೆ ಅ.ಪ.
ಶ್ರೀಶ ವೈಕುಂಠದಿ ಸಾಸಿರ ಫಣೆಯುಳ್ಳ
ಶೇಷಶಯನ ಎನ್ನ ಘಾಸಿಗೊಳಿಸಿದೆ 1
ಅರವಿಂದನಯನನೆ ಅರವಿಂದ ದಳ ಪೋಲ್ವ
ವರಹಸ್ತವನೆ ಎನ್ನ ಶಿರದ ಮೇಲಿಡುತಲಿ 2
ಬಳಲಬೇಡೆಂತೆಂದು ನಳಿತೋಳಿನಿಂದೆತ್ತಿ
ನಳಿನನಾಭನೆ ಎನ್ನ ಬಳಲಿಕೆ ಬಿಡಿಸುತ್ತ 3
ಮುಕ್ತರ ಸಂಗಡ ಮುಕ್ತೇಶ ಎನ್ನಲ್ಪ
ಶಕ್ತಿ ಸೇವೆಯ ಕೊಳುತ ಮುಕ್ತಾರ್ಥದಾಯಕ4
ವ್ಯಾಪಕ ಶ್ರೀಗುರು ಸ್ಥಾಪಕ ಮನದಲ್ಲಿ
ಗೋಪಾಲಕೃಷ್ಣವಿಠ್ಠಲ ಈ ಪರಿ ದಯೆಗೈದು 5
****