Showing posts with label ಕೇಳು ಜೀವನವೆ ನೀ ಮಧ್ವಮತವನುಸರಿಸಿ achalananda vittala. Show all posts
Showing posts with label ಕೇಳು ಜೀವನವೆ ನೀ ಮಧ್ವಮತವನುಸರಿಸಿ achalananda vittala. Show all posts

Monday, 2 August 2021

ಕೇಳು ಜೀವನವೆ ನೀ ಮಧ್ವಮತವನುಸರಿಸಿ ankita achalananda vittala

ಕೇಳು ಜೀವನವೆ ನೀ ಮಧ್ವಮತವನುಸರಿಸಿ

ಶ್ರೀಲೋಲನಂಘ್ರಿಯನು ನೆನೆದು ಸುಖಿಸೊ ಪ.


ನರನಾಗಿ ಪುಟ್ಟುವುದು ದುರ್ಲಭವೆಲವೊ ಭೂ-

ಸುರಕುಲದಿ ಜನಿಸುವುದು ಬಹು ದುರ್ಲಭ

ಪರಮ ಸುಕೃತವದೇನು ಫಲಿಸಿತೊ ನಿನಗೀಗ

ದೊರಕಿದೀ ಜನುಮವನು ಸಫಲ ಮಾಡೊ 1


ಅರಘಳಿಗೆ ಮಾತ್ರವೆ ಪೊತ್ತು ಪೋಗಲು ಆಯು

ಕೊರತೆಂದು ತಿಳಿ ನಿನ್ನ ಕ್ಲುಪ್ತದೊಳಗೆ

ಮರಳುತನದಲಿ ಬರಿದೆ ದಿನಗಳಿಯಬ್ಯಾಡೆಲವೊ

ಸ್ಥಿರವಲ್ಲ ಈ ದೇಹ ಸ್ವಪ್ನಸಮವೊ 2


ದುರುಳರೊಡನಾಡಿ ದುರ್ವಿಷಯ ಲಂಪಟನಾಗಿ

ನರಕಯಾತನೆಗೆ ಗುರಿಯಾಗದಿರೆಲೊ

ಎರಡುದಿನದೋಡ್ಯಾಟ ಇರಬಂದುದಲ್ಲವಿದು

ಪರಗತಿಗೆ ಸಾಧನ ಮಾಡಿಕೊಳ್ಳೊ 3


ಹೋಗುತಿವೆ ಹೋಗುತಿವೆ ದಿವಸ ವ್ಯರ್ಥವಾಗಿ

ಹೀಗೆ ಮೈಮರೆದಿಹುದು ನಿನಗೊಳ್ಳಿತೆ

ಬ್ಯಾಗ ಹರಿಯನು ಭಜಿಸು ಬಾ ಈ ಮಾತಲ್ಲ ನೀ

ಹೋಗಿನೋಡಲು ಯಮನ ಬಾಧೆ ಬಿರುಸೊ4


ಏನ ಹೇಳಲಿ ನಿನ್ನ ಮಂದಮತಿಯನು ಹಿಂದೆ

ಶ್ವಾನಸೂಕರ ಮೊದಲಾದ ನೀಚ-

ಯೋನಿಗಳೊಳಗೆ ಬಂದು ಅಂದದನು ಕ್ರಮಿಸಿದವನು

ಆ ನೋವನಾಗಲೆ ಮರೆದಿಯಲ್ಲೊ 5


ಮುನ್ನ ದುಷ್ಕರ್ಮವ ಮಾಡಿದ ಪ್ರಾಣಿಗಳು

ಉನ್ನತ ನೀಚ ದೇಹಗಳ ಧರಿಸಿ

ಬನ್ನಬಡುತಿಹುದು ನೀ ನೋಡಿ ನೋಡಿ ಮತ್ತೆ

ದುರ್ನಡತೆಯನು ಮಾಡಲುದ್ಯೋಗಿಪೆ 6


ಎಂಬತ್ತು ನಾಲ್ಕು ಲಕ್ಷ ಯೋನಿಗಳೊಳಗೆ

ಕುಂಭಿಣಿಯೊಳಗೆ ತಿರುತಿರುಗಿ ಪಾಪ

ಉಂಬುದನುಚಿತವೆಂದು ಮನ ಹೇಸಿ ವಾಕರಿಸಿ

ನಂಬುನಾರಾಯಣನ ಇನ್ನಾದರೂ 7


ಜನನಿಯ ಗರ್ಭವಾಸ ದುಃಖ ಅತಿಶಯವೊ

ಜನನ ಮರಣದ ದುಃಖ ಬಲು ಅಧಿಕವೊ

ಘನ ನರಕದಾ ದುಃಖ ಪೇಳಲೊಶವಲ್ಲ ನಿನ-

ಗಿನಿತಾದರೂ ನಾಚಿಕಿಲ್ಲವೇನೊ 8


ಸಾರಿ ಪೇಳುವೆನೀಗ ಪುಟ್ಟಿ ಬೆಳೆದಳಿವ ಸಂ-

ಸಾರ ಸುಖವಲ್ಲ ಮಹ ದುಃಖಪುಂಜ

ಘೋರ ಸಂತಾಪಕ್ಕೆ ಕಡೆಮೊದಲಿಲ್ಲವೊ

ವಾರಿಜಾಂಬಕನ ಮರೆಯೊಕ್ಕು ಬದುಕೊ 9


ಹಿಂದೆ ಬಹುಜನುಮದಲಿ ಬಂದು ಬಳಲಿದ ಬವಣೆ

ಒಂದೊಂದು ನೆನೆಸಿಕೊಳಲತಿ ಕಷ್ಟವೊ

ಮುಂದಾದರು ಸರಿ ಎಚ್ಚೆತ್ತು ಬಿಡದೆ ಗೋ-

ವಿಂದನ ಪದಾಂಬುಜವ ಧ್ಯಾನ ಮಾಡೊ 10


ಮಾರಿ ಇಲ್ಲಿದೆಯೆಂದು ಕೇಳುತಲಿ ಪೋಗಿ ನೀ

ಭೂರಿ ಭಯಕೊಳಗಹದು ನೀತಿಯಲ್ಲ

ದೂರ ತಿಳಿದು ನೋಡಿ ದುರ್ಮಾರ್ಗವನು ಜರಿದು

ಸೇರಿ ಸಜ್ಜನರ ಸುಪಥವ ಪಡೆಯೊ 11


ನಿನ್ನಯ ಸ್ವರೂಪಕ್ಕೆ ಹೀಗಾಗುವುದೆಂದು

ಪುಣ್ಯವನೆ ಗಳಿಸಿಕೊ ಬ್ಯಾಗ ನೀನು

ಇನ್ನು ಈ ಧರೆಯಲ್ಲಿ ಬಿಟ್ಟು ಹೋಗುವ ದೇಹ-

ವನ್ನು ಪೋಷಿಸಿಕೊಂಡು ಹಿಗ್ಗಬೇಡ 12


ವನಿತೆಸುತರನು ಪೊರೆಯಬೇಕೆಂಬ ಬುದ್ಧಿಯಲಿ

ಧನದಾಸೆಯಿಂದಲಗಣಿತ ಪಾಪವ

ಕ್ಷಣದೊಳಗೆ ಸಂಪಾದಿಸಿಕೊಂಬೆ ಎಲೊ ಮೂಢ

ನಿನಗಿವರು ಕೊನೆಗೆ ಸಂಗಡ ಬರುವರೆ 13


ಕೆಡಬ್ಯಾಡ ವ್ಯರ್ಥಮೋಹಕೆ ಸಿಲುಕಿ ಜವನವರು

ಪಿಡಿದೊಯ್ದು ಕಡಿದಿರಿದು ಕೊಲ್ಲುವಾಗ

ಬಿಡಿಸುವವರಾರಿಲ್ಲ ಈಗಳೆ ಮುಂದರಿತು

ಕಡಲಶಯನನ ಪೊಂದಿ ಮುಕುತಿ ಪಡೆಯೊ 14


ಈಗಲೇನೊ ಇನ್ನು ಕ್ಷಣಕೇನು ಬಪ್ಪುದೊ

ನೀ ಗರುತರಿಯದಲೆ ಹಿತ

ರಾಗದಲಿ ಸರ್ವವನು ಎನ್ನದೆಂದಾಡದಿರು

ನಾಗಾರಿಗಮನನಾಧೀನವೆನ್ನೊ 15


ನೀ ಮಗುಳೆ ಮಹಿಯೊಳಗೆ ಕಂಡುಕಂಡುದ ಬಯಸಿ

ಭ್ರಾಮಕರ ನುಡಿಗೇಳಿ ಭ್ರಾಂತಿಗೊಳದೆ

ಕಾಮಾದಿಗಳ ತ್ಯಜಿಸಿ ಸತ್ಕರ್ಮವನು ಮಾಡಿ

ಶ್ರೀಮನೋ ಹರನಿಗರ್ಪಣೆಯ ಮಾಡೊ16


ಏನುಧಾವತಿಗೊಳಲೇನೇನು ಫಲವಿಲ್ಲ

ಮಾನವಜನುಮ ಜೊಳ್ಳು ಮಾಡಬ್ಯಾಡ

ಆನಂದತೀರ್ಥರ ಪಾದಕಮಲವ ಪೊಂದಿ ಅಚ-

ಲಾನಂದವಿಠಲನ್ನ ನೀನೊಲಿಸಿಕೊ 17

****