Showing posts with label ಬಾಣಂತಿ ನಾನು ಎನ್ನ ಬಾ ಅಂತಿ ನೀನು purandara vittala. Show all posts
Showing posts with label ಬಾಣಂತಿ ನಾನು ಎನ್ನ ಬಾ ಅಂತಿ ನೀನು purandara vittala. Show all posts

Thursday 5 December 2019

ಬಾಣಂತಿ ನಾನು ಎನ್ನ ಬಾ ಅಂತಿ ನೀನು purandara vittala

ಅದ್ಬುತವಾದ ಮುಂಡಿಗೆ
ಬಾಣಂತಿ ನಾನು ಎನ್ನ ಬಾ ಅಂತಿ ನೀನು   (ಪಲ್ಲವಿ)

ಬಾಣಂತಿಯೆಂಬೋ ಬಗೆಯ ನೀನರಿತು
ಬಾರೆಂದು ಕರೆಯೋದುಚಿತವೆ ರಂಗ.. 

ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ
ಭಂಗಪಡಲಾರೆ ಕಂದನಿಗಾಗಿ
ಖಾರಕಷಾಯಂಗಳು, 
ಕೇಳೆಲೊ ರಂಗಒಪ್ಪೊತ್ತಿನಹಾರವು
ಯಾರು ಹೇಳಿದರು ನೀ ತಿರುಗಿ ಹೇಳುತಿದ್ದೆ
ಊರ ನಾರಿಯರೆಲ್ಲ ನಗರೇನೊ ರಂಗ ........

ಗುಟ್ಟು ಗುಮ್ಮುತಲಿದೆಯೊ , 
ಕೇಳೆಲೊ ರಂಗ ಮೈಯೊಳು ಕಷ್ಟವಾಗುತಲಿದೆಯೊ
ಎಷ್ಟು ಹೇಳಿದರು ಮತ್ತಷ್ಟು ಹೇಳುತಿದ್ದೆ
ನಿಷ್ಠೂರವೇತಕೆ ಬೇಡ ರಂಗಯ್ಯ .......

ಒಡವೆ ವಸ್ತುಗಳೆಲ್ಲ , ಕೇಳೆಲೊ ರಂಗ
ಚೆಂದದೊಳಿಡಬಾರದು ಮೈಮೇಲೆ
ಬಡತನವಾಗಿರುವುದೆಲ್ಲವ ನೋಡಿ
ದುಡುಕುಮಾಡಿ ಕೈ ಪಿಡಿವರೆ ರಂಗ........

ಕಟ್ಟಿದ ಮಂಡೆ ಕಟ್ಟಿ , ಕೇಳೆಲೊ ರಂಗ
ಪಣೆಯೊಳಿಟ್ಟ ಸಾದಿನ ಬೊಟ್ಟು
ತೊಟ್ಟ ಕುಪ್ಪಸವೆಲ್ಲ ಗುಷ್ಟು ಎಣ್ಣೆಮಣಕು
ಮುಟ್ಟಬೇಡ ಸಿರಿಪುರಂದರವಿಠಲ.....
***

ಶ್ರೀ ಪುರಂದರದಾಸರ ಅದ್ಬುತವಾದ ಮುಂಡಿಗೆ

ಬಾಣಂತಿಯು ನಾನು ಎನ್ನ ಬಾ ಅಂತಿಯೆ ನೀನು ಕೇಳೆಲೊ ರಂಗಾ   (ಪಲ್ಲವಿ)

ಬಾಣಂತಿಯೆಂಬೋ ಬಗೆಯ ನೀನರಿತು
ಬಾರೆಂದು ಕರೆಯೋದುಚಿತವೆ ಕೇಳೆಲೊ ರಂಗ.. 

ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ
ಭಂಗಪಡಲಾರೆ ಕಂದನಿಗಾಗಿ
ಖಾರಕಷಾಯಂಗಳು, ಕೇಳೆಲೊ ರಂಗ....

ಒಪ್ಪೊತ್ತಿನಹಾರವು
ಯಾರು ಹೇಳಿದರು ನೀ ತಿರುಗಿ ಹೇಳುತಿದ್ದೆ
ಊರ ನಾರಿಯರೆಲ್ಲ ನಗರೇನೊ ರಂಗ ........

ಗುಟ್ಟು ಗುಮ್ಮುತಲಿದೆಯೊ , ಕೇಳೆಲೊ ರಂಗ ಮೈಯೊಳು ಕಷ್ಟವಾಗುತಲಿದೆಯೊ
ಎಷ್ಟು ಹೇಳಿದರು ಮತ್ತಷ್ಟು ಹೇಳುತಿದ್ದೆ
ನಿಷ್ಠೂರವೇತಕೆ ಬೇಡ ರಂಗಯ್ಯ .......

ಒಡವೆ ವಸ್ತುಗಳೆಲ್ಲ , ಕೇಳೆಲೊ ರಂಗ
ಚೆಂದದೊಳಿಡಬಾರದು ಮೈಮೇಲೆ
ಬಡತನವಾಗಿರುವುದೆಲ್ಲವ ನೋಡಿ
ದುಡುಕುಮಾಡಿ ಕೈ ಪಿಡಿವರೆ ರಂಗ........

ಕಟ್ಟಿದ ಮಂಡೆ ಕಟ್ಟಿ , ಕೇಳೆಲೊ ರಂಗ
ಪಣೆಯೊಳಿಟ್ಟ ಸಾದಿನ ಬೊಟ್ಟು
ತೊಟ್ಟ ಕುಪ್ಪಸವೆಲ್ಲ ಗುಷ್ಟು ಎಣ್ಣೆಮಣಕು
ಮುಟ್ಟಬೇಡ ಸಿರಿಪುರಂದರವಿಠಲ.....

ಹರಿವಾಯುಗುರುಗಳ ದಯೆಯಿಂದ ಅರ್ಥ ನಿರೂಪಣೆಯ ಸಾಸಿವೆ ಕಾಳಿನಷ್ಟು ಸಣ್ಣ  ಪ್ರಯತ್ನ

👇🏾👇🏾👇🏾👇🏾

ಬಾಣ ಅಂದರೆ ಶರೀರ ,  ಅಂತಿ ಅಂದರೆ ಕೊನಯ ಅವಸ್ಥೆ , ಅಂದರೇ ವೃದ್ಧಾಪ್ಯ ....  ನೋಡಿ... 
 84 ಜೀವರಾಶಿಗಳನ್ನು ದಾಟಿದಮೇಲೆ ಎಷ್ಟೋಜನ್ಮಗಳ ಪುಣ್ಯದಿಂದ ಇಂತಹ ಸಾಧನ ಶರೀರ ಸಿಕ್ಕಿದೆ , ಈ ಸಾಧನ ಶರೀರವನ್ನೇ ಶ್ರೀ ದಾಸರಾಯರು ಇಲ್ಲಿ ಬಾಣಂತಿ ಎಂದಿದ್ದಾರೆ, ನಿನ್ನ ದಯದಿಂದ ಒದಗಿದ ಈ ಸಾಧನ ಶರೀರವುಳ್ಳವನಾಗಿದ್ದೇನೆ ಎನ್ನುವದನ್ನು   ಬಾಣಂತಿ ನಾನು ಅಂತಿದ್ದಾರೆ....

 ಇಂತಹ ಬಾಣಂತಿ ಯಾದ ನನಗೆ ನೀನು ಬಾ ಅಂತ ಕರೆಯೋದು, ಅಂದರೇ ಸಾಧನವನ್ನು ಮಾಡಿಕೊಳ್ಳುವದನ್ನು ಬಿಟ್ಟು ಬಾ ಆಂತೀಯಲ್ವಾ ಸ್ವಾಮೀ ಇದು ಸರಿ ನಾ ಪರಮಾತ್ಮನೇ...? ಅಂತ ಕೇಳ್ತಿದ್ದಾರೆ ದಾಸಾರ್ಯರು...

ನನಗೆ ಸಾಧನ ಮಾಡಿಕೊಳ್ಳಲು ಇನ್ನೂ ಹೆಚ್ಚಿನ ಆರೋಗ್ಯ, ಐಶ್ವರ್ಯ ದಯಪಾಲಿಸಿ ಆಯುಷ್ಯ ವೃದ್ಧಿ ಮಾಡಬೇಕಾದ ನೀನೇ ಬಾ ಅಂತ ಕರೆದರೇ ಹೇಗೆ ಪರಮಾತ್ಮನೇ...  ? ಇನ್ನೂ ನನ್ನ ಸಾಧನೆಯೇ ಮೂದಲಾಗಲಿಲ್ಲವಲ್ಲವೇ ಎನ್ನುವಂತೆ......

ಹಿಂಗದೆ ಮೊಲೆಹಾಲು = ಬಾಣಂತಿಯಾದವಳು ಸರಿಯಾಗಿ ಆಹಾರ ತೆಗೆದೆಕೊಳ್ಳದೇ ನಿರ್ಲಕ್ಷ ಮಾಡಿದರೇ ಮೊಲೆಯಲ್ಲಿ ಹಾಲು ಬರುವದಾದರೂ ಹೇಗೆ ಅಲ್ಲವೇ? ಮೊಲೆಯಲ್ಲಿ ಹಾಲು ಹಿಂಗಿ ಹೋಗಿಬಿಡುತ್ತವೆ, ಬಾಣಂತಿಯಾದವಳು ಸರಿಯಾದ ವೇಳೆಗೆ ಕೂಸಿಗೆ ಮೊಲೆ ಉಣಿಸಿ, ತಾನೂ  ಅದಕ್ಕೆ ತಕ್ಕಂತೆ ಪುಷ್ಕಳವಾಗಿ ಪೌಷ್ಟಿಕ ಆಹಾರ ತೆಗೆದುಕೊಳ್ಳುತ್ತಿದ್ದರೆ ಮಾತ್ರ ಕೂಸು ಸರಿಯಾಗಿ ಬೆಳವಣಿಗೆ ಯಾಗುತ್ತದೆ, ಹಾಗೇ ಈ ಕೊನೆಯ ಶರೀರದಲ್ಲಿರುವ ನಾನು ಸಾಧನ ಮಾಡದೆ ಕೇವಲ ಕಾಲವ್ಯರ್ಥ ಮಾಡಿದ್ರೆ ನಮ್ಮ  ಸಾಧನೆ ಬರಿದಾಗಿ ವ್ಯರ್ಥವಾಗಿ ಹೋಗಿಬಿಡುತ್ತದೆ... ಅದರ್ಗೋಸ್ಕರ ನಿರಂತರ ಸಾಧನೆ ಮಾಡಬೇಕು ಎನ್ನುವದನ್ನು ಹೇಳಿದ್ದಾರೆ....

ನೆರೆಮನೆಗೆ ಹೋಗಿ ಭಂಗ ಪಡಲಾರೆ ಕೂಸಿಗಾಗಿ --- ಇಲ್ಲಿ ನೆರಮನೆ ಅಂದರೆ ಇನ್ನುಳಿದ ವರ್ಣಗಳು, ಬ್ರಾಹ್ಮಣ ವರ್ಣದಲ್ಲಿ, ಅದೂ ವೈಷ್ಣವ ಜನ್ಮದಲ್ಲಿ ಏನು ಸಾಧನೆ ಆಗತ್ತೋ ಆ ಸಾಧನೆ ಇನ್ನುಳಿದ ವರ್ಣಗಳಲ್ಲಿ ಆಗಲು ಸಾಧ್ಯವಿಲ್ಲ (ಪೂರ್ವ ಪಕ್ಷ ಮಾಡಿದರೇ ಇತರ ವರ್ಣಗಳಲ್ಲಿಯೂ ಸಾಧಕರಿದ್ದಾರೆ.. ಆದರೇ ವೈಷ್ಣವ ಜನ್ಮದಲ್ಲಿ ಮಾಡುವ ಸಾಧನೆಯೇ ಶ್ರೇಷ್ಠವಾದದ್ದೂ ಸರಿ), ನನ್ನ ಸಾಧನೆ ಎಂಬ ಕೂಸಿಗೆ , ಭರತಭೂಮಿಯಲ್ಲಿನ ಬ್ರಾಹ್ಮಣ ಜನ್ಮ ಅದರಲ್ಲೂ ವೈಷ್ಣವ ಜನ್ಮವೇ ಶ್ರೇಷ್ಠವಾದದ್ದು, ಇದು ಹೋಯ್ತು ಅಂದರೆ ನೆರಮನೆಯ  ರೂಪದಲ್ಲಿರುವ ಇನ್ನಿತರ ವರ್ಣಗಳಲ್ಲಿ ಜನ್ಮವಾದರೆ ಅಲ್ಲಿ ಭಂಗಪಡುವದಂತೂ ಖಂಡಿತ , ಅದಕ್ಕಾಗಿ ನನಗೆ ಎಷ್ಟೋಜನ್ಮಗಳ ಪುಣ್ಯದದಿಂದ ಅದರಲ್ಲೂ ಸಹಾ  ನಿನ್ನ ದಯೆಯಿಂದ ಸಿಕ್ಕಿದ ಈ ಸದವಕಾಶವನ್ನು ಸಾರ್ಥಕ ಮಾಡಿಕೊಳ್ಳಲು ಅನುಗ್ರಹ ಮಾಡು ಎಂದು ಬೇಡಿಕೊಂಡಿದ್ದಾರೆ....... ಇನ್ನೂ  ಹೇಳಿದರೇ....

 ಇಲ್ಲಿ ನೆರಮನೆ ಅಂದರೇ *ಪರಧರ್ಮ ಅಂತ ಅರ್ಥ...  ಹೇ ಪರಮಾತ್ಮನೇ ನೀನು ಯಾವ ಜಾತಿಯಲ್ಲಿ ಹುಟ್ಟಿಸಿದೆಯೋ ಆ  ಧರ್ಮವನ್ನು ಬಿಟ್ಟು ಪರಧರ್ಮಕ್ಕೆ ಶರಣು ಹೋಗಲು ಸಾಧ್ಯವಿಲ್ಲ. .. ನೀ ಕೊಟ್ಟ ಜನ್ಮದಲ್ಲಿನ ಧರ್ಮದ ಪಾಲನೆ ಮಾಡುವಂತೆ ಮಾಡಪ್ಪಾ... ಈ ಜನ್ಮ ಕಳೆದು ಹೋಗಿದೆ ಅಂದರೇ ಮತ್ತೆ ಯಾವುದೋ ಜನ್ಮ ಬರಬಹುದು... ಈ ರೀತಿಯಾದ ಈ  ಶರೀರದಲ್ಲಿ... ಸಾಧನೆ ಎಂಬುವ ಕೂಸಿಗೆ  ಭರತಭೂಮಿಯಲ್ಲೇ ಮತ್ತೆ ಮತ್ತೆ ಹುಟ್ಟಿಬಂದು ಸಾಧನೆ ಮಾಡುವಂತೆ ಮಾಡು... ಇನ್ನಿತರ ಧರ್ಮಗಳ ಆಚರಣೆ ಮಾಡಿದ್ದಲ್ಲಿ ಭಂಗಪಡುವುದಂತೂ ಖಂಡಿತ... ಹೀಗಾಗಿ ನನಗೆ ಎಷ್ಟೋ ಜನ್ಮಗಳ ಪುಣ್ಯದಿಂದ ಸಿಕ್ಕಿದ ಅದರಲ್ಲೂ ಸಹಾ ನಿನ್ನ ಪರಮಾನುಗ್ರಹದಿಂದ ಸಿಕ್ಕಿದಂತಹಾ ಈ ಸದವಕಾಶವನ್ನು ಸಾರ್ಥಕ ಮಾಡಿಕೊಳ್ಳಲು ಅನುಗ್ರಹ ಮಾಡು ತಂದೇ.... ಅಂತ ಅರ್ಥ....

ಖಾರ ಕಷಾಯಂಗಳು  ಅಂದರೇ ಈ ಮನಷ್ಯರಾಗಿ ಬಂದಮೇಲೆ ನಮ್ಮ ಜೀವನದಲ್ಲಿ ಅಲ್ಪಮಟ್ಟಿಗೆ ಸಿಗುವ ಕ್ಷಣಿಕವಾದ ಲೌಕಿಕ  ಸುಖಗಳನ್ನೇ ( ಸಂಸಾರ, ಹಣ, ಮನೆ ಇನ್ನಿತರ)  ಶಾಶ್ವತ ಅಂದುಕೋತಿವಿ... ಆದರೇ ದಾಸರು ಇಲ್ಲಿ, ಇಂತಹಾ ಸುಖಗಳಿಗೆ ಖಾರ ಕಷಾಯಂಗಳು ಅಂತಾಯಿದ್ದಾರೆ... ನೀನು ಸುಖ ಕೊಟ್ಟಾಗ ಅದು ನಾನು ಸಂಪಾದಿಸಿದ ಸುಖ ಎನ್ನುವ  ಅಹಂಭಾವದಿಂದ ಅನುಭವಿಸಿ , ದುಃಖ ಬಂದಾಗ ಅದಕ್ಕೇ ನೀನೇ ಕಾರಣ ಅಂತ ನಿನ್ನ ದೂರಿ ಸುಖ-ದುಃಖಗಳಿಗೆ ಕಾರಣನಾದ ನಿನ್ನ ನೆನಯದೇ ನಾನು ವ್ಯರ್ಥವಾಗಿ ಕಾಲ ಕಳೆದು, ಅಂದರೇ ಏಕಾದಶಿಯಂದು ಉಪವಾಸ ಮಾಡಲಾರದೇ, ಆ ವಾರ ಈ ವಾರ ಅಂತಾ ಒಪ್ಪತ್ತು ಊಟ ಅಂತ ಬೇರೆ ದೇವತೆಗಳ ಆರಾಧನೆ ಮಾಡಿ ನಿನ್ನ ಮರೆತು ಜೀವನ ಸಾಗಿಸುವ ಈ ಪರಿಯನ್ನು ಕಂಡು ನೀನು ನನಗೆ ತಿರುಗಿ ಬಾ ಎಂದು ಪದೇ ಪದೇ ಹೇಳಿದರೆ ನನ್ನ ದೇಹದಲ್ಲಿರುವ ಇಂದ್ರಿಯಾಭಿಮಾನಿ ದೇವತೆಗಳು ನಗದೇ ಇರ್ತಾರಾ ಸ್ವಾಮೀ ?  ನನ್ನ ಮೂರ್ಖತನಕ್ಕೆ ಗಟ್ಟಿಯಾಗಿ  ನಗುತ್ತಾರೆ ಪಾ ರಂಗಯ್ಯಾ.... , ದಯವಿಟ್ಟು ನನಗೆ ಸಾಧನೆ ಮಾಡಲು ಅವಕಾಶ ಕೊಡು ಬಾ ಅಂತ ಮಾತ್ರ ಹೇಳಬೇಡಾ ಎಂದು ದಾಸರು ಪರಿಪರಿಯಿಂದ  ಬೇಡಿಕೊಂಡಿದ್ದಾರೆ .......

ಗುಟ್ಟು ಗುಮ್ಮುತಲಿದೆಯೋ ಅಂದರೇ ಗುಟ್ಟು ಅಂದರೇ ರಹಸ್ಯ, ನಮಗೆ ರಹಸ್ಯವಾದುದು ಯಾವುದು ? ಮರಣ ಅಲ್ಲವೇ?  ಇವತ್ತಿನ ವರೆಗೂ ಯಾವ ಮನುಷ್ಯ ಯಾವ ಸ್ಥಳದಲ್ಲಿ, ಯಾವ ಸಂದರ್ಭದಲ್ಲಿ ಹೇಗೆ ಮರಣ ಹೊಂದುತಾನೆ ಅಂತ ಯಾರಿಗೂ ಕಂಡುಹಿಡಿಯೋಕೆ ಆಗಿಲ್ಲಾ, ಇದು ನಮ್ಮ ಜೀವನದಲ್ಲಿ ಬಿಡಿಸಲಾರದ ರಹಸ್ಯ, ಇಂತಹಾ ಗುಟ್ಟು, ನಮ್ಮ ಕಣ್ಣೆದುರಗಡೆಯೇ ಅನೇಕ ಜನ ನೋಡುನೋಡುತ್ತಿದ್ದಂತೆ ಆಕಸ್ಮಿಕವಾಗಿ ಮರಣ ಹೊಂದುತ್ತಾ ಇರ್ತಾರೆ... , ನಿಮಗೂ ಇಂತಹ ಸಂದರ್ಭ ಬರತ್ತೆ ಅಂತ ಮೇಲಿಂದಮೇಲೆ ಎಚ್ಚರಿಸುತ್ತಿರುವದನ್ನೇ ದಾಸರು ಇಲ್ಲಿ ಗುಮ್ಮುತಿದೆ ಎಂದಿದ್ದಾರೆ, ಇಂತಹ ಗುಟ್ಟು ಪದೇ ಪದೇ ಎಚ್ಚರಿಸುತ್ತಿದ್ದರೂ ನಾವು ಸಾಧನಮಾರ್ಗದಲ್ಲಿ ಸಾಗುತ್ತಾನೇ ಇಲ್ಲ... ಸಾಧನ ಮಾಡ್ಕೋಬೇಕು ಅಂದಾಗ ಮೈಯಲ್ಲಿ ನಾನಾ ತರಹದ ರೋಗಗಳು ಕಾಣಿಸಿಕೊಂಡು ಸಾಧನ ಮಾಡಲು ಅವಕಾಶವನ್ನೇ ನೀಡುತ್ತಿಲ್ಲಾ, ನಾನು ಇದನ್ನು ನಿನಗೆ ಸದಾಕಾಲದಲ್ಲಿ ನಿವೇದಿಸಿಕೊಂಡರೂ ಸಹಾ ನೀನು ನಿಷ್ಠುರನಾಗಿ ಬೇಡಾ ಬಂದುಬಿಡು ಅಂದರೇ ನಾನು ಸಾಧನ ಮಾಡುವದು ಯಾವಾಗ ? ಮುಂದೆ ಇದೇ ಜನ್ಮ ಬರುತ್ತದೆ ಅಂತ ಏನು ನಿಶ್ಚಿತ ? ಹೀಗಾಗಿ ದಯವಿಟ್ಟು ನಿಷ್ಠುರ ಮಾಡಬೇಡಾ ನನಗೆ ಸಾಧನ ಮಾಡಲು ಅವಕಾಶವನ್ನು ದಯಪಾಲಿಸಯ್ಯಾ ರಂಗ... ಅಂತ...  (ಸ್ವಲ್ಪ  ಜನ ಅಂತಾರೆ ನಮಗೆ ಇನ್ನೂ  ವಯಸಾಗಿಲ್ಲ, ದೇವರು ದೈವ ಅಂದುಕೊಳ್ಳಿಕ್ಕೆ ಈಗಿಂದಲೇ ಏಕೆ. ಜೀವನದಲ್ಲಿ ಮಜಾ ಇರಬೇಕು  ಅಂತಾರೆ. ಅವರಿಗೇನೇ ಈ ಪಾಠ)

ಒಡವೆ ವಸ್ತುಗಳೆಲ್ಲಾ  = ನಾವು ನಮ್ಮ ಐಶ್ವರ್ಯ ಇದ್ದಾಗ ಒಡವೆವಸ್ತುಗಳನ್ನು, ಒಳಗಡೆ ಮುಚ್ಚಿಟ್ಟರೂ ಯಾರಾದರೂ ಅವನ್ನ ದೋಚಿಕೊಂಡು ಹೋದಾಗ... ನಮಗೆ ಬಡತನ ಬಂದಾಗ ನನ್ನವರು ಅನ್ನುವ ಯಾರೂ ನಮ್ಮ  ಸಹಾಯಕ್ಕೆ ಬರೋದಿಲ್ಲ, ಹಾಗಯೇ ಈ ಅವಯವಗಳು ಅಂತ ಏನಿವೆ ಅಲ್ವಾ  ಇವುಗಳನ್ನು ಸಾಧನಕ್ಕೆ ಬಳಸಿಕೊಳ್ಳಲಾರದೇ ಹಾಗೆಯೇ ಚಂದವಾಗಿ ಇರಲಿ ಅಂತ ಬರೀ ವಿಲಾಸೀ ಜೀವನ ನಡೆಸಿದರೆ ಮುಂದೆ ನಮ್ಮ ಈ ಅವಯವಗಳಿಗೆ ರೋಗರುಜಿನಗಳು ಎಂಬ ಕಳ್ಳಕಾಕರು ಬಂದು ಅಡರಿಕೊಂಡಾಗ, ನಮ್ಮನ್ನು  ಆವರಿಸಿಕೊಂಡಾಗ ಆಗ ನನ್ನವರೇ ಆದ ಈ ಧರ್ಮಗಳು ನನ್ನ ಸಹಾಯಕ್ಕೆ ಬರೋದಿಲ್ಲ, ಯಾಕೇ ಅಂದ್ರೇ ನಾನು ಅವಯವಗಳು ಘಟ್ಟಿ ಇದ್ದಾಗ ಧರ್ಮಾಚರಣೆ ಮಾಡಿಲ್ಲ... ಧರ್ಮೋ ರಕ್ಷತಿ ರಕ್ಷಿತಃ ಎಂಬ ನುಡಿಯಂತೆ ನಾವು ಧರ್ಮಾಚರಣೆಗಳನ್ನು ಸರಿಯಾಗಿ ಮಾಡಿದ್ದಾರೆ ಮಾತ್ರ  ಧರ್ಮವೂ ನಮ್ಮನ್ನು ರಕ್ಷಿಸುತ್ತದೆ ಹೊರತಾಗಿ ನಾವು ಕೇವಲ ವಿಲಾಸೀ ಜೀವನವನ್ನು ನಡೆಸಿದ್ದರೆ ಧರ್ಮವು ನಮ್ಮನ್ನು ಹೇಗೆ ರಕ್ಷಿಸುತ್ತದೆ ? ಕಡಿಂದ  ಪರಮಾತ್ಮನೇ.... ಸಾಧನ ಶರೀರವಾದ ಈ ಮಾನವ ದೇಹದಿಂದ ನನಗೆ ಧರ್ಮಸಾಧನೆ ಮಾಡುವ ಬುದ್ಧಿಯನ್ನು ಕರುಣಿಸು ಧರ್ಮ ಮಾರ್ಗೇ ಪ್ರೇರಯಂತು ಭವಂತಃ ಸರ್ವ ಏವ ಹಿ

ಕಟ್ಟಿದ ಮಂಡೆ ಕಟ್ಟಿ = ಮಂಡೆ ಅಂದರೆ ತುರುಬು, ತುರುಬು ಯಾವಾಗ ಕಡ್ತಾರೆ ? ಕೆಲಸಗಳು ಬಹಳ ಇದ್ದಾಗ ಕಡ್ತಾರೆ ಅಲ್ಲವೇ...? ತುರುಬು ಕಟ್ಟುವದರ ಅರ್ಥ ನಾನು ಇನ್ಮೇಲೆ ಬಹಳ ಕೆಲಸ ಮಾಡಬೇಕಾಗಿದೆ ಅಂತ ಸಿದ್ಧರಾಗುವ ಒಂದು ಪ್ರಕ್ರಿಯೆ... ಹಾಗೇ ನಾನು ಇನ್ಮೇಲೆ ಸಾಧನೆ ಮಾಡಬೇಕು ಅಂತ ನನ್ನ ಅವಯವಗಳನ್ನೆಲ್ಲ ಸಿದ್ಧಪಡಿಸಿಕೊಂಡು ಮಾನಸಿಕವಾಗಿ ತಯಾರಾಗಿದ್ದೀನಿ, ಹಣೆಯಲ್ಲಿ ಇಟ್ಟ ಸಾದಿನ ಬೊಟ್ಟು ವಿಕಾರವಾಗಿದೆ, ಅಂದರೆ ನೀನು ಯಾವ ಜನ್ಮವನ್ನು ನನಗೆ ಶ್ರೇಷ್ಠಜನ್ಮವೆಂದು ಕರುಣಿಸಿದ್ದೀಯೋ ನಾನು ಈ ಜನ್ಮವನ್ನು ವ್ಯರ್ಥವಾಗಿ ಕಳೆದು ವಿಕಾರಗೊಳಿಸಿಕೊಂಡಿದ್ದೇನೆ , ತೊಟ್ಟ ಕುಪ್ಪುಸವೆಲ್ಲಾ ದುರ್ಗಂಧ ತುಂಬಿದೆ, ಎಣ್ಣೆ ಎಣ್ಣೆಯಾಗಿ ಹೊಲಸು ತುಂಬಿದೆ, ಅಂದರೆ ನೀನು ನೀಡಿದ ಈ ಸ್ಥೂಲದೇಹವೆಂಬ ಕುಪ್ಪಸ (ಬ್ಲೌಜ್ ) ಮಾಡಬಾರದ ನಾನಾ ಕರ್ಮಗಳನ್ನು ಮಾಡಿ, ತಿನ್ನಬಾರದ ಪದಾರ್ಥಗಳನ್ನು ತಿಂದು ದುರ್ವಾಸನ ಪಸರಿಸಿದೆ..., ಅನೇಕ ದುಷ್ಟಕರ್ಮಗಳೆಂಬ ಎಣ್ಣೆಯ ಲೇಪನದಿಂದ ಈ ದೇಹ ಪೂರ್ತಿ ದುಷ್ಟಕರ್ಮಗಳಿಂದಲೇ ತುಂಬಿ ತುಳುಕುತ್ತಿದೆ, ಆದ್ದಾದಯಿತು ಇನ್ನಾದರೂ ಒಳ್ಳೇ ಹಾದಿ ಹಿಡಿಯೋ ಪ್ರಾಣಿ ಎಂದು ಪ್ರಾಣೇಶವಿಠಲರು ಹೇಳಿದಂತೇ.... ಇನ್ನಮೇಲಾದರೂ ಸಾಧನ ಮಾಡಿ ಈ ಶರೀರವನ್ನ ಸಾರ್ಥಕಗೊಳಿಸುವ ಮನಸು ಶರೀರದ ದಾರುಢ್ಯವನ್ನ ನನಗೆ ಅನುಗ್ರಹಿಸು, ಅಷ್ಟೇ  ಹೊರತು ಈ ದೇಹವನ್ನು ಕೊನೆಗೊಳಿಸಿ ಸಾಧನೆ ಇಲ್ಲದಂತೆ ಮಾತ್ರ ಸರ್ವಥಾ ಮಾಡಬೇಡ.... ಲಕ್ಷ್ಮೀಪತಿಯಾದ, ಪುರಂ=ಸಂಸಾರ ಎಂಬ ಪಟ್ಟಣದಿಂದ, ಅಥವಾ ಲಿಂಗದೇಹದಿಂದ, ದರ=ಪಾರುಮಾಡುವವನಾದ,  ವಿಠ್= ಮೋಕ್ಷಕ್ಕೆ ಮಾರ್ಗವಾದ ಜ್ಞಾನವನ್ನು ಕರುಣಿಸಿ, ಲ=ಲಾಲಯತಿ ಇತಿ ಲ - ಪಾಲಿಸುವವನಾದ, ಸಂರಕ್ಷಿಸುವವನಾದ ಶ್ರೀ  ಪುರಂದರ ವಿಠ್ಠಲನೇ, ನನ್ನ ಸಾಧನ ಆಗುವವರೆಗೂ ಈ ದೇಹವನ್ನು ಬಿಟ್ಟು ಬಾ ಅಂತ ಮಾತ್ರ ಕರೆಯೋಕೇ ಹೋಗಬೇಡ ಸ್ವಾಮೀ, ಸಾಧನೆಗೆ ಅನುಕೂಲ ಆಗುವ ಹಾಗೆ ಈ ದೇಹಕ್ಕೆ ಆಯುರಾರೋಗ್ಯಾದಿಗಳನ್ನು ಕೊಟ್ಟು ಸಂರಕ್ಷಿಸು ದೇವದೇವನೇ........ಎಂದು ಶ್ರೀ ಪುರಂದರದಾಸರು ಸಾಧನಾ ಜೀವಿಗೆ ಇರಬೇಕಾದ ಕಳಕಳಿಯನ್ನು ನಮಗೆ ತಿಳಿಸಿ ಹೇಳುತ್ತಿದ್ದಾರೆ......
    
 ಶ್ರೀ ನಾರದಾವತಾರಿಗಳಾದ ಶ್ರೀ  ಪುರಂದರದಾಸರ ಪ್ರತಿಯೊಂದು ವಾಕ್ಯವೂ... ಪದವೂ ನಮ್ಮ ಎಲ್ಲರ ಜೀವನಕ್ಕೆ ಮಾರ್ಗದರ್ಶಕವೂ ಹೌದು...ನೋಡಿದ್ದೇವೆ ಅಲ್ವಾ ತಿನ್ನುವ  ಕಡುಬಿನಲ್ಲಿ ಯೂ ತತ್ವದ  ರುಚಿಯನ್ನು  ತುಂಬಿಸಿ ಬಡಿಸಿದ ಮಹಾನುಭಾವರಾದ ಶ್ರೀ ದಾಸಾರ್ಯರು... ಹೀಗಾಗಿ.... ಇನ್ಮುಂದೆಯಾಗಲೂ ಲೌಕಿಕ ಸೌಖ್ಯವನ್ನು ಶಾಶ್ವತ ಎನ್ನುವ ಭ್ರಮೆಯನ್ನು  ಬಿಟ್ಟು ಹರಿಯ ಸ್ಮರಣೆಯಲ್ಲಿ ನಿರತರಾಗುವಂತೆ ದಯ ತೋರಿಸೆಂದು ನನ್ನ ವೆಂಕಪ್ಪನಲ್ಲಿ ಶರಣು ಹೋಗುತ್ತಾ....

ಜೈ ವಿಜಯರಾಯ
smt. Padma Sirish 
ನಾದನೀರಾಜನದಿಂ ದಾಸಸುರಭಿ 🙏🏽
***