Audio by Mrs. Nandini Sripad
ಶ್ರೀ ವಿಜಯದಾಸಾರ್ಯ ವಿರಚಿತ
ಶ್ರೀ ಹಯಗ್ರೀವ ದೇವರ ಸ್ತೋತ್ರ ಸುಳಾದಿ
ರಾಗ ಸಾರಂಗ
ಧ್ರುವತಾಳ
ಜಯ ಜಯ ಜಾನ್ಹವಿಜನಕ ಜಗದಾಧಾರ
ಭಯನಿವಾರಣ ಭಕ್ತ ಫಲದಾಯಕ
ದಯಪಯೋನಿಧಿ ಧರ್ಮಪಾಲ ದಾನವ ಕಾಲ -
ತ್ರಯ ಹತ್ತೆಂಟು ಮೀರಿದ ತ್ರೈಲೋಕನಾಥ ಆ -
ಶ್ರಯ ಸಂತರ ಕಾಮಧೇನು ಧೇನುಕ ಭಂಜ
ವ್ಯಯದೂರ ವ್ಯಾಧಿಹರಣ ವ್ಯಾಪ್ತ ವ್ಯಾಕುಲಹಾರಿ
ಪ್ರಿಯ ಪ್ರೇರಕ ಪ್ರಥಮ ಪ್ರಾಪ್ತಿ ಪ್ರಾಣ
ಜಯದೇವಿರಮಣ ಜಯ ಜಯ ಜಯಾಕಾರ
ಸುಯತಿಗಳ ಮನೋಹಾರ ಮಂದಹಾಸ ಚಂದ್ರೋ -
ದಯ ಭಾಸ ಪೂರ್ಣಶಕ್ತಿ ಸರ್ವರೂಪ
ತ್ರಯಕಾಯ ತತ್ವ ತತ್ವ ತದಾಕಾರ ಮೂರುತಿ
ಕ್ರಿಯ ಗುಣಾನಂತ ರೂಪಾನಂತ ಏಕಾನೇಕ ಸಮಸ್ತ
ಸಯವಾಗಿಪ್ಪ ಸಮ ಅಸಮ ದೈವಾ
ಹಯಮೊಗ ವಾದಿರಾಜಗೊಲಿದ ವಿಜಯವಿಠ್ಠಲ
ಪಯೋನಿಧಿ ಶಯನ ಸತ್ವನಿಯಾಮಕ ॥ 1 ॥
ಮಟ್ಟತಾಳ
ಶಶಿ ಮಂಡಲ ಮಂದಿರ ಮಧ್ಯದಲಿ ನಿತ್ಯ
ಮಿಸುಣಿಪ ಶುಭಕಾಯಾ ಯೋಗಾಸನನಾಗಿ
ಎಸುಳುಗಂಗಳ ಚೆಲುವ ಹುಂಕರಿಸುವನಾದ
ಬಿಸಜಾಕ್ಷ ಪುಸ್ತಕ ಜ್ಞಾನಮುದ್ರಾ
ಎಸೆವ ಚತುರಬಾಹು ಕೊರಳ ಕೌಸ್ತುಭ ಮಾಲೆ
ಶಶಿಮುಖಿಯರು ಒಲಿದು ಸೇವೆಮಾಡುತಲಿರೆ
ಅಸುರರ ಕಾಳಗವ ಕೆಣಕುವ ಕಾಲ್ಗೆದರಿ
ದಶದಿಶ ಕಂಪಿಸಲು ಖುರಪುಟದ ರಭಸ
ಪುಸಿಯಲ್ಲ ನಮಗೆ ಪರದೇವತಿ ಇದೇ
ಕುಶಮೊನೆ ಮನದಲ್ಲಿ ಧ್ಯಾನಮಾಡಲಿಬೇಕು
ಹಸನಾಗಿ ಕೇಳಿ ಮುದದಿ ವಾದಿರಾಜಾ
ಮಸಕರಿಗೆ ವಲಿದ ವಿಜಯವಿಠ್ಠಲರೇಯಾ
ಕುಶಲವ ಕೊಡುವನು ಈ ಪರಿ ಕೊಂಡಾಡೆ ॥ 2 ॥
ತ್ರಿವಿಡಿತಾಳ
ನಾಶಿಕ ಪುಟದಿಂದ ಸರ್ವ ವೇದಾರ್ಥಂಗಳು
ಶ್ವಾಸೋಚ್ಛ್ವಾಸದಿಂದ ಪೊರಡುತಿವಕೋ
ಏಸುಬಗೆ ನೋಡು ಇದೇ ಸೋಜಿಗವೆಲ್ಲಾ
ಶ್ರೀಶನ್ನ ಸಮಸ್ತ ದೇಹದಿಂದ
ಭಾಸುರವಾಗಿದ್ದ ಸಾಕಲ್ಯ ಶ್ರುತಿ ತತಿ
ಲೇಶ ಬಿಡದೆ ಪೊರಟು ಬರುತಿಪ್ಪವು
ಈ ಸಾಮರ್ಥಿಕೆ ನೋಡು ಅನ್ಯದೇವಕೆ ಉಂಟೆ
ಈಶನಯ್ಯಗೆ ಉಪದೇಶ ಮಾಳ್ವಾ
ದೇಶ ಕಾಲವೆ ಮೀರಿ ತನಗೆ ತಾನೆ ಇಪ್ಪಾ
ಏಸು ಕಲ್ಪಕೆ ಸರ್ವ ಸ್ವಾತಂತ್ರನೋ
ಮೋಸ ಪೋಗುವನಲ್ಲ ಆರಾರ ಮಾತಿಗೆ
ಕೇಶವ ಕ್ಲೇಶನಾಶನ ಕಾಣಿರೋ
ದ್ವೇಷವ ತಾಳಿ ಆಗಮ ವೈದವನ
ರೋಷದಿಂದಲಿ ಕೊಂದ ನಿಷ್ಕಪಟಿಯೋ
ಸೂಸುವ ಬಾಯಿಂದ ಸುರಿಯುವ ಜೊಲ್ಲು ಪೀ -
ಯೂಷಕ್ಕಧಿಕ ಕಾಣೋ, ಸವಿದುಣ್ಣಿರೋ
ವಾಸುದೇವನೆ ಈತನೆ ಆವಲ್ಲಿಪ್ಪನೆಂದು
ಬೇಸರವಗೊಂಡು ಬಳಲದಿರೀ
ಈ ಶರೀರದಲ್ಲಿ ಜೀವಾಂತರ್ಗತನಾಗಿ
ವಾಸವಾಗಿಹನು ಅಣುಮಹ ಕಾಣೋ
ಹ್ರಾಸ ವೃದ್ಧಿಗಳಿಲ್ಲ ವಿಶೇಷ ಅವಿಶೇಷ
ಈಸು ಬಗೆಯುಳ್ಳರೆ ಸ್ವರೂಪ ಭೂತ
ದೋಷರೂಪಗಳಲ್ಲಿ ಜ್ಞಾನಾನಂದ ಕಾರ್ಯ
ದಾಸರಿಗಾಗಿ ಈ ಪರಿ ಮಾಡುವ
ಆಶಾಬದ್ಧನು ಅಲ್ಲ ಆಪ್ತಕಾಮನು ಕಮ -
ಲಾಸನ್ನ ಜನಕ ಸರ್ವಭೂಷಿತಾ
ಲೇಸು ವಾದಿರಾಜ ವಂದ್ಯ ವಿಜಯವಿಠ್ಠಲ
ಸಾಸಿರನಾಮದ ಒಡೆಯ ಹಯವದನಾ ॥ 3 ॥
ಅಟ್ಟತಾಳ
ಸುರರಿಗೆ ಹಯವಾಗಿ ಗೆಲಿಸುವನು ಗಂಧ -
ರ್ವರಿಗೆ ವಾಜಿಯಾಗಿ ಪೋಗುವ ಮುಂಚಾಗಿ
ದುರುಳ ದಾನವರಿಗೆ ಅರ್ವನಾಗಿ ತಾನು
ಇರದೆ ಪರಾಭವನಾಗುವ ಸಿಗದಲೆ
ನರರಿಗೆ ಅಶ್ವನೆಂದೆನಿಸಿ ಮಹಾಭಾರ
ಹೊರುವನು ದಣವಿಕೆ ಇಲ್ಲದೆ ಅವರ
ಪರಮ ಪುರುಷನ್ನ ಅದ್ಭುತ ಚರಿತೆ ಕೇಳಿ
ಅರಿವದು ಮನದಲ್ಲಿ ಸರ್ವಜೀವಿಗಳೊಳು
ಇರಳು ಹಗಲು ಈ ಪರಿಯಾಗಿ ಮಾಡುವ
ಮರಿಯಾದೆ ಇಪ್ಪದು ಮರಿಯಾದೆ ಸ್ಮರಿಸಿ ಪಾ -
ಮರ ಬುದ್ದಿ ಪೋಗಾಡಿ ತುರಿಯಾಶ್ರಮಮಣಿ ವಾ -
ದಿರಾಜ ಯತಿಕರದಿಂದರ್ಚನೆಗೊಂಡ
ವಿಜಯವಿಠ್ಠಲರೇಯಾ ತುರಗಾಸ್ಯನು ಕಾಣೋ
ತೃಪ್ತಿಯ ಕೊಡುವನು ॥ 4 ॥
ಆದಿತಾಳ
ಶಿತವರ್ಣದಲಿ ಸತ್ವಗುಣದಲ್ಲಿ
ಜಾತವೇದಸಂಗೆ ಆಹುತಿ ಕೊಡುವಲ್ಲಿ
ಭೂತಳದಲ್ಲಿ ಮತ್ತೆ ಜಠರಾಗ್ನಿಯಲ್ಲಿ
ಆತುಮದಲ್ಲಿ ವಿತ್ತ ಪತಿಯಲ್ಲಿ ಹೇಳನ
ಪಾತಕ ಪೋಗುವಲ್ಲಿ ವಂಜರ ನದಿಯಲ್ಲಿ
ಸೋತ್ತಮರಲ್ಲಿ ವೇದ ಓದುವ ಠಾವಿನಲ್ಲಿ
ಮಾತು ಪೂರ್ವರಂಗದಲ್ಲಿ ಭದ್ರಾಶ್ವ ಖಂಡದಲ್ಲಿ
ಜ್ಯೋತಿ ಪ್ರಕಾಶದಲ್ಲಿ ಮನಿಯ ದ್ವಾರದಲ್ಲಿ
ನೇತುರ ರೇಖೆಯಲ್ಲಿ ನಾಶಿಕ ಪುಟದಲ್ಲಿ
ದಾತನಲ್ಲಿ ಸರ್ವಜೀವರಲ್ಲಿ ನಿವಾಸಾ
ನೀತವಾಗಿ ಎಣಿಸು ನಿರ್ಣೈಸುವುದಕ್ಕೆ
ಶ್ರೀತರುಣಿಗಾದರೂ ಗೋಚರಿಸದು ಕಾಣೋ
ಈತನ ನೆನೆದರೆ ಬೇಡಿದ ಪುರುಷಾರ್ಥ
ಮಾತುಮಾತಿಗೆ ತಂದುಕೊಡುವ ಸರ್ವದಾ
ಆತುಮದೊಳಗಿದ್ದು ಆನಂದ ಕೊಟ್ಟು ಪಾಲಿಪ
ಶೀತಾಂಶು ಮಂಡಲವದನ ವಿಜಯವಿಠ್ಠಲರೇಯಾ
ಪ್ರೀತಿಯಾಗಿ ಇಪ್ಪಾ ವಾದಿರಾಜಗೆ ಹಯವದನಾ ॥ 5 ॥
ಜತೆ
ಗುರು ವಾದಿರಾಜಗೆ ವೊಲಿದ ಹಯವದನಾ
ಕರುಣಾಕರ ಮೂರ್ತಿ ವಿಜಯವಿಠ್ಠಲರೇಯಾ ॥
********